ತುಮಕೂರು: ಗೃಹ ಇಲಾಖೆಯಲ್ಲಿ ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆಂದೇ ಪ್ರತ್ಯೇಕವಾದ ಬೋರ್ಡ್ ಇದೆ. ಈ ಬೋರ್ಡ್ ಮೂಲಕವೇ ವರ್ಗಾವಣೆ ನಡೆಯಲಿದೆ. ನನ್ನ ಸಹಿಯಿಂದ ಯಾವ ಅಧಿಕಾರಿಗಳ ವರ್ಗಾವಣೆಯೂ ಆಗುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಪೊಲೀಸ್ ಅಧಿಕಾರಿಗಳು ಸಹ ವರ್ಗಾವಣೆಗೆ ಹಣ ಕೊಡಬಾರದು ಎಂಬ ಉದ್ದೇಶ ನಮ್ಮ ಸರ್ಕಾರದ್ದಾಗಿದೆ. ಹಾಗಾಗಿ ಬೋರ್ಡ್ ಮುಖಾಂತರವೇ ವರ್ಗಾವಣೆ ನಡೆಯಲಿವೆ ಎಂದರು.
ಇನ್ಸ್‌ಪೆಕ್ಟರ್ ನಂದೀಶ್ ಸಾವಿನ ಕುರಿತು ತನಿಖೆ ನಡೆಯುತ್ತಿದೆ. ಆದರೆ, ಇವರು ವರ್ಗಾವಣೆಗಾಗಿ ಯಾರಿಗೆ ಹಣ ಕೊಟ್ಟಿದ್ದಾರೆ, ಯಾರು ಪಡೆದಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಈ ಬಗ್ಗೆ ಸಚಿವ ಎಂಟಿಬಿ ನಾಗರಾಜು ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎನ್ನುವುದು ಸಹ ನನಗೆ ಗೊತ್ತಿಲ್ಲ ಎಂದರು.
ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಳದ ಬಗ್ಗೆ ಚಿಂತನೆ ನಡೆದಿದೆ. ಜತೆಗೆ ನೇಮಕಾತಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಸಹ ಇನ್ನು ಒಂದು ತಿಂಗಳ ಕಾಲ ವಿಸ್ತರಣೆ ಮಾಡಲಾಗಿದೆ ಎಂದರು.