ದಾವಣಗೆರೆ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಂತೆಯೇ ಪ್ರವರ್ಗ-1 ಜಾತಿ ವಿದ್ಯಾರ್ಥಿಗಳಿಗೆ ಸಂಪೂರ್ಣ ಶೈಕ್ಷಣಿಕ ಸೌಲಭ್ಯ ಮತ್ತು ಶುಲ್ಕ ವಿನಾಯತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ಪ್ರವರ್ಗ-1ರ ಜಾತಿಗಳ ಒಕ್ಕೂಟ ಒತ್ತಾಯಿಸಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ವಿ. ಲೋಕೇಶಪ್ಪ, ರಾಜ್ಯದಲ್ಲಿ 1972ರಿಂದ 2012ರವರೆಗೆ ಪ್ರವರ್ಗ-1 ಜಾತಿ ವಿದ್ಯಾರ್ಥಿಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಂತೆಯೇ ಶುಲ್ಕ ವಿನಾಯತಿ, ಸಂಪೂರ್ಣ ಶೈಕ್ಷಣಿಕ ಸೌಲಭ್ಯ ಇತ್ತು. ಈಗ ನಿಲ್ಲಿಸಲಾಗಿದೆ. 2012ರಲ್ಲಿ ಇದ್ದಂತೆಯೇ ಪ್ರವರ್ಗ-1ರ ಜಾತಿಗಳ ವಿದ್ಯಾರ್ಥಿಗಳಿಗೆ ಸೌಲಭ್ಯ ಒದಗಿಸಬೇಕು ಎಂದರು.
ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಕಳೆದ ಶೈಕ್ಷಣಿಕ ವರ್ಷದಿಂದ ಪ್ರವರ್ಗ-1ರ ಜಾತಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯ ಮತ್ತು ಶುಲ್ಕ ವಿನಾಯತಿ ನಿಲ್ಲಿಸಲಾಗಿದೆ. ಕುಲಪತಿಗಳು ಮುಂದಿನ ಶೈಕ್ಷಣಿಕ ವರ್ಷದಿಂದ ಮುಂದುವರೆಸುವುದಾಗಿ ಹೇಳಿದ್ದಾರೆ. ಅಚ್ಚರಿ ಮತ್ತು ಆತಂಕದ ವಿಚಾರವೆಂದರೆ ಪ್ರವರ್ಗ-1 ಎಂಬ ಕಾಲಂ ತೆಗೆದು ಹಾಕಲಾಗಿದೆ. ರಾಜ್ಯ ಸರ್ಕಾರ ಕೂಡಲೇ 2012ರಂತೆ ಪ್ರವರ್ಗ-1 ಜಾತಿ ವಿದ್ಯಾರ್ಥಿಗಳಿಗೆ ಸಂಪೂರ್ಣ ಶೈಕ್ಷಣಿಕ ಸೌಲಭ್ಯಮತ್ತು ಶುಲ್ಕ ವಿನಾಯತಿ ನೀಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಸರ್ಕಾರದಲ್ಲಿ ಪ್ರವರ್ಗ-1 ಜಾತಿಯ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಕಾಪು ಕ್ಷೇತ್ರದ ಲಾಲಾಜಿ ಮೆಂಡನ್ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಬಹುದಿನಗಳ ಬೇಡಿಕೆ ಈಡೇರಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದರು.
ರಾಜ್ಯದಲ್ಲಿ 1 ಕೋಟಿಗೂ ಹೆಚ್ಚು ಪ್ರವರ್ಗ-1ರ ಜಾತಿಯವರಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಇಲ್ಲ. ಹಾಗಾಗಿ ಪ್ರಬಲ ಸಮುದಾಯದವರೊಂದಿಗೆ ಸೆಣಸಾಡಲಾಗುತ್ತಿಲ್ಲ. ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಯಲ್ಲಿ ನಮಗಾಗಿಯೇ ಪ್ರತ್ಯೇಕ ಮೀಸಲಾತಿ ನೀಡಬೇಕು. 1 ಕೋಟಿಯಷ್ಟು ಜನರಿರುವ ಪ್ರವರ್ಗ-1ರ ಜಾತಿ ಬಾಂಧವರ ಸಮಗ್ರ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ತೆಗೆದಿರಿಸಬೇಕು ಎಂಬುದು ಒಕ್ಕೂಟದ ಒತ್ತಾಯ ಎಂದು ತಿಳಿಸಿದರು.
ಪ್ರವರ್ಗ-1ರ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಜನಾಂಗದವರ ವಸತಿ ನಿರ್ಮಾಣದ ವೆಚ್ಚವನ್ನು ಇತರೆ ವರ್ಗದವರಂತೆ ಸಮಾನವಾಗಿ ಹೆಚ್ಚಿಸಬೇಕು. ಅಲೆಮಾರಿ, ಅರೆಅಲೆಮಾರಿ ಬುಡಕಟ್ಟು ಜಾತಿ ಜನಾಂಗದ ಪ್ರಮಾಣಪತ್ರದಲ್ಲಿ ಅಲೆಮಾರಿ ಎಂಬುದಾಗಿ ನಮೂದಿಸಬೇಕು ಎಂದು ಒತ್ತಾಯಿಸಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಂಜಮ್ಮ ಮಾತನಾಡಿ, ಪ್ರವರ್ಗ-1ರ ಜಾತಿಯವರಿಗೆ ದೊರೆಯುತ್ತಿದ್ದ ಮೀಸಲಾತಿ, ವಿವಿಧ ಸೌಲಭ್ಯಗಳೇ ಇಲ್ಲದಂತಾಗಿದೆ. ಸರ್ಕಾರ ಕೂಡಲೇ ಶೈಕ್ಷಣಿಕ ಸೌಲಭ್ಯ, ಶುಲ್ಕ ವಿನಾಯತಿ ಇತರೆ ಸೌಲಭ್ಯ ಮುಂದುವರೆಸಬೇಕು. ಇಲ್ಲವಾದಲ್ಲಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಒಕ್ಕೂಟದ ಸೂರ್ಯಪ್ರಕಾಶ್ ಕೋಲಿ, ಎಸ್. ತಿಪ್ಪೇಸ್ವಾಮಿ, ಎಸ್.ಎಂ. ಸುರೇಶ್, ಭೋಜರಾಜ್, ಮಂಜು ನಾಥ್, ಏಕಾಂತಪ್ಪ, ದೇವೇಂದ್ರಪ್ಪ ಇತರರು ಸುದ್ದಿಗೋಷ್ಠಿಯಲ್ಲಿದ್ದರು