Advertisement

ಕ್ಯಾಚ್‌ ದ ರೈನ್‌ ರಾಜ್ಯಕ್ಕೇ ಮೊದಲ ಸ್ಥಾನ

01:33 AM Feb 03, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಜಲಮೂಲಗಳ ಸಂರಕ್ಷಣೆಯ ಸಂಕಲ್ಪದೊಂದಿಗೆ ರೂಪಿಸಿದ ಮಹತ್ವಾ ಕಾಂಕ್ಷಿ ಜಲಶಕ್ತಿ ಕಾರ್ಯಕ್ರಮದಡಿ ದಾಖಲೆಯ 8.92 ಲಕ್ಷ ಕಾಮಗಾರಿ ಯೋಜನೆ ರೂಪಿಸುವ ಮೂಲಕ ಕರ್ನಾಟಕ ಮುಂಚೂಣಿಯಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ “ಕ್ಯಾಚ್‌ ದ ರೈನ್‌’ ಕರೆ ಮೇರೆಗೆ ಆರಂಭಿಸಲಾದ ಅಭಿಯಾನದಡಿ ಇದುವರೆಗೂ 4.87 ಲಕ್ಷ ರೂ. ಮೌಲ್ಯದ ಕಾಮಗಾರಿ ಪೂರ್ಣಗೊಳಿಸುವ ಮೂಲಕ ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ.

Advertisement

ಈ ಯೋಜನೆಯಡಿ 87,403 ಕೃಷಿ ಹೊಂಡ ನಿರ್ಮಾಣ, 4,712 ತೆರೆದ ಬಾವಿ ಹಾಗೂ 312 ಕಲ್ಯಾಣಿಗಳ ಪುನಃಶ್ಚೇತನ, 58,331 ಹೊಸ ಹಾಗೂ ಹಾಲಿ ಇರುವ ಕೆರೆ ಅಭಿವೃದ್ಧಿ, ಕೆರೆ ಹೂಳೆತ್ತುವಿಕೆ, ಗೋಕಟ್ಟೆ ನಿರ್ಮಿಸಿರುವುದು ಗ್ರಾಮೀಣ ಭಾಗಕ್ಕೆ ವರದಾನವಾಗಿದೆ. ಗ್ರಾಮೀಣ ಭಾಗದ ಸರಕಾರಿ ಜಮೀನಿನಲ್ಲಿ 2.29 ಲಕ್ಷ ಅರಣ್ಯೀಕರಣಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನೂ ಯೋಜನೆಯಡಿ ಕೈಗೊಂಡಿದ್ದು ಸಾಮಾಜಿಕ ಅರಣ್ಯ ಅಭಿವೃದ್ಧಿಯಾದಂತಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ನರೇಗಾ ಹಾಗೂ ಗ್ರಾಮ ಸಡಕ್‌ ಯೋಜನೆಯ ಜತೆಗೆ ಜಲಶಕ್ತಿ ಅಭಿಯಾನಕ್ಕೂ ಹೆಚ್ಚು ಒತ್ತು ನೀಡಿರುವುದರಿಂದ ಕೇಂದ್ರ ಸರಕಾರದ ಹೆಚ್ಚುವರಿ ಅನುದಾನವೂ ಈ ವರ್ಷ ಲಭ್ಯವಾಗುವ ನಿರೀಕ್ಷೆಯಿದೆ.

ಏನಿದು ಯೋಜನೆ?
ಕೇಂದ್ರ ಸರಕಾರದ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮೊತ್ತ ದಲ್ಲಿ ಶೇ. 65ರಷ್ಟು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮ ಗಾರಿಗೆ ಮೀಸಲಿಡಬೇಕಾಗಿದೆ. ಹೀಗಾಗಿ, ಕಳೆದ ಮಾರ್ಚ್‌ನಲ್ಲಿ ಜಲ ಮೂಲಗಳನ್ನು ಪುನಃಶ್ಚೇತನಗೊಳಿಸಲು ಜಲಶಕ್ತಿ ಅಭಿಯಾನ ರೂಪಿಸಲಾಯಿತು.

ಅದರಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೆರೆಗಳನ್ನು ಅಭಿವೃದ್ಧಿಪಡಿಸಲು ಕೆರೆ ನೀರು ಹರಿದು ಬರುವ ಕಾಲುವೆಗಳ ಪುನಃಶ್ಚೇತನ, ಕೆರೆ ನಿರ್ಮಾಣ ಹಾಗೂ ಕೆರೆಯ ಹೂಳು ತೆಗೆಯುವುದು, ಕೆರೆ ಏರಿ ದುರಸ್ತಿ, ರೈತರ ಜಮೀನುಗಳಲ್ಲಿ ಬದು, ಕೃಷಿಹೊಂಡ ಹಾಗೂ ತೆರೆದ ಬಾವಿ ನಿರ್ಮಾಣ, ಕಲ್ಯಾಣಿ ಪುನಃಶ್ಚೇತನ, ಗೋಕಟ್ಟೆ ನಿರ್ಮಾಣ ಹೀಗೆ ಹಲವಾರು ಕಾಮಗಾರಿ ಕೈಗೊಳ್ಳಲು ಕ್ರಿಯಾ ಯೋಜನೆ ರೂಪಿಸಲಾಗಿತ್ತು.

Advertisement

ಅರಣ್ಯೀಕರಣಕ್ಕೆ ಒತ್ತು ನೀಡಲು ರಸ್ತೆ ಬದಿ ನೆಡುತೋಪು, ಬ್ಲಾಕ್‌ ಪ್ಲಾಂಟೇಶನ್‌, ರೈತರ ಜಮೀನುಗಳಲ್ಲಿ ಸಸಿ ನೆಡುವುದು ಮತ್ತು ಅರಣ್ಯ ಪ್ರದೇಶಗಳಲ್ಲಿ ಕಂದಕ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗಿತ್ತು.

ಈ ಯೋಜನೆಯಡಿ ಕಲಬುರಗಿ, ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ನೂರಾರು ಕಲ್ಯಾಣಿಗಳ ಪುನಃಶ್ಚೇತನಗೊಂಡಿದ್ದರೆ, ಬೆಳಗಾವಿ ಜಿಲ್ಲೆಯೊಂದರಲ್ಲೇ 240ಕ್ಕೂ ಹೆಚ್ಚು ಹೊಸ ಕೆರೆಗಳ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ರಾಯಚೂರು ಜಿಲ್ಲೆಯಲ್ಲಿ 150 ಗೋಕಟ್ಟೆ ನಿರ್ಮಿಸಲಾಗಿದೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ತೆರೆದ ಬಾವಿ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ನರೇಗಾ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 5,225 ಕೋಟಿ ರೂ. ವೆಚ್ಚವಾಗಿದ್ದರೆ 3,924 ಕೋಟಿ ರೂ. ಜಲಶಕ್ತಿ ಅಭಿಯಾನದಡಿ ವೆಚ್ಚವಾಗಿದೆ.

ಜಲಶಕ್ತಿ ಅಭಿಯಾನ ರಾಜ್ಯದ ಪಾಲಿಗೆ ಕ್ರಾಂತಿಕಾರಕ ಯೋಜನೆ. ಗ್ರಾಮೀಣ ಭಾಗಗಳ ಜಲಮೂಲಗಳ ಸಂರಕ್ಷಣೆ ಕಾಮಗಾರಿ ಭವಿಷ್ಯದಲ್ಲಿ ಫ‌ಲ ನೀಡಲಿವೆ. ಗ್ರಾಮೀಣ ಭಾಗದಲ್ಲಿ ಅಂತರ್ಜಲ ಮಟ್ಟ ಸುಧಾರಣೆ ಆಗಿರುವುದು ನೆಮ್ಮದಿಯ ಸಂಗತಿ.
– ಕೆ.ಎಸ್‌. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ

 

Advertisement

Udayavani is now on Telegram. Click here to join our channel and stay updated with the latest news.

Next