ಹವಾನಾ: ಕ್ಯೂಬಾದ ಪ್ರಭಾವಿ ಕಮ್ಯೂನಿಷ್ಟ್ ಪಕ್ಷದ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡುವುದಾಗಿ ರೌಲ್ ಕ್ಯಾಸ್ಟ್ರೋ ಘೋಷಿಸಿದ್ದು, ಪಕ್ಷವನ್ನು ಮುನ್ನಡೆಸಲು ಯುವ ಪೀಳಿಗೆಗೆ ಅವಕಾಶ ನೀಡಲಾಗುವುದು ಎಂದು ಹೇಳುವ ಮೂಲಕ ಕ್ಯೂಬಾದಲ್ಲಿ ಕ್ಯಾಸ್ಟ್ರೋ ಆಡಳಿತದ ಯುಗಾಂತ್ಯವಾದಂತಾಗಿದೆ ಎಂದು ವರದಿ ವಿಶ್ಲೇಷಿಸಿದೆ.
ಇದನ್ನೂ ಓದಿ:ಚುನಾವಣಾ ಪ್ರಚಾರದಲ್ಲಿದ್ದ ಕೆಲವರಿಗೆ ಸೋಂಕು: ಲಕ್ಷ್ಮಣ್ ಸವದಿಗೆ ಕ್ವಾರಂಟೈನ್ ಆಗಲು ಸೂಚನೆ
ಕ್ಯೂಬಾದಲ್ಲಿ ಫಿಡೆಲ್ ಕ್ಯಾಸ್ಟ್ರೋ ಹಾಗೂ ರೌಲ್ ಕ್ಯಾಸ್ಟ್ರೋ ಆರು ದಶಕಗಳ ಕಾಲ ಆಡಳಿತ ನಡೆಸಿದ್ದು, ತಮ್ಮ ಅಧಿಕೃತ ನಿವೃತ್ತಿಯ ಘೋಷಣೆಯೊಂದಿಗೆ ಕ್ಯಾಸ್ಟ್ರೋ ಆಡಳಿತ ಕೊನೆಗೊಂಡಂತಾಗಿದೆ.
89 ವರ್ಷದ ರೌಲ್ ಕ್ಯಾಸ್ಟ್ರೋ ಇಲ್ಲಿ ನಡೆದ ಕಮ್ಯುನಿಷ್ಟ್ ಪಕ್ಷದ 4 ದಿನಗಳ ಕಾಲದ ಸಮಾವೇಶದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ, ತಮ್ಮ ಜತೆ ದಶಕಗಳ ಕಾಲ ದುಡಿದ ಪಕ್ಷದ ನಿಷ್ಠಾವಂತ, ಹೊಸ ಪೀಳಿಗೆಗೆ ನಾಯಕತ್ವದ ಜವಾಬ್ದಾರಿಯನ್ನು ವಹಿಸುವುದಾಗಿ ಹೇಳಿದರು.
2018ರಲ್ಲಿಯೇ ರೌಲ್ ಕ್ಯಾಸ್ಟ್ರೋ ಅವರು ಕ್ಯೂಬಾದ ಅಧ್ಯಕ್ಷ ಸ್ಥಾನವನ್ನು ಮಿಗುಯೆಲ್ ಡಿಯಾಜ್ ಕ್ಯಾನೆಲ್ ಅವರಿಗೆ ಹಸ್ತಾಂತರಿಸಿದ್ದರು. ಕಮ್ಯೂನಿಷ್ಟ್ ಪಕ್ಷ ಪ್ರತಿ ಐದು ವರ್ಷಗಳಿಗೊಮ್ಮೆ ನೀತಿ ಪರಿಶೀಲನೆಯ ಸಭೆಯನ್ನು ನಡೆಸುವ ಮೂಲಕ ಹೊಸ ನಾಯಕತ್ವದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ವರದಿ ತಿಳಿಸಿದೆ.
ಕ್ಯೂಬಾ ಎಂದಾಕ್ಷಣ ನೆನಪಿಗೆ ಬರುವ ಹೆಸರೇ ಫಿಡೆಲ್ ಕ್ಯಾಸ್ಟ್ರೋ
ಕ್ಯೂಬಾ ಎಂದಾಕ್ಷಣ ನೆನಪಿಗೆ ಬರುವ ಹೆಸರೇ ಫಿಡೆಲ್ ಕ್ಯಾಸ್ಟ್ರೋ. ಕ್ಯಾಸ್ಟ್ರೋ 20ನೇ ಶತಮಾನದ ಪ್ರಖ್ಯಾತ ಕ್ರಾಂತಿಕಾರಿಗಳಲ್ಲಿ ನಿಸ್ಸಂಶಯವಾಗಿಯೂ ಪ್ರಮುಖರು. ಅದರಲ್ಲೂ ಎಡಚಿಂತನೆಯವರ ವಲಯದಲ್ಲಿ ಕ್ಯಾಸ್ಟ್ರೋ ಬಹಳ ಜನಪ್ರಿಯರಾಗಿದ್ದರು. ಆದರೆ ದಮನಿತರ ಪರ ದನಿಯೆತ್ತುತ್ತಾ ಕ್ಯೂಬಾದ ಚುಕ್ಕಾಣಿ ಹೊತ್ತಿದ್ದ ಕ್ಯಾಸ್ಟ್ರೋ ಕ್ರಮೇಣ ಸರ್ವಾಧಿಕಾರದತ್ತ ವಾಲಿದ್ದು ದುರಂತ. ಸುಧಾರಣೆಗಳ ಜತೆಜತೆಗೇ ಸ್ವತಂತ್ರ ದನಿಗಳನ್ನು ಹತ್ತಿಕ್ಕಿದರು. ಅವರ ಅರ್ಧ ಶತಮಾನದ ಆಡಳಿತಾವಧಿಯಲ್ಲಿ 15,000ಕ್ಕೂ ಹೆಚ್ಚು ರಾಜಕೀಯವಿರೋಧಿಗಳನ್ನು ಬಂಧಿಸಲಾಯಿತು. ಕ್ಯಾಸ್ಟ್ರೋ 2008ರಲ್ಲಿ ಕ್ಯೂಬಾದ ಅಧ್ಯಕ್ಷ ಪದವಿಯನ್ನು ತಮ್ಮ ಸಹೋದರ ರೌಲ್ ಕ್ಯಾಸ್ಟ್ರೋಗೆ ವಹಿಸಿದ್ದರು. 2016 ನವೆಂಬರ್ 26ರಂದುತಮ್ಮ 90ನೇ ವಯಸ್ಸಲ್ಲಿ ಫಿಡೆಲ್ ಕ್ಯಾಸ್ಟ್ರೋ ಮೃತಪಟ್ಟಿದ್ದರು.