Advertisement

ಸಂಸತ್ತಿನಲ್ಲಿ ಕಾಸ್ಟಿಂಗ್‌ ಕೌಚ್‌ಸತ್ಯ ಬೆಳಕಿಗೆ ಬರಲಿ 

06:00 AM Apr 26, 2018 | |

ಚಿತ್ರರಂಗದಲ್ಲಿ ಮಹಿಳೆಯರ ಲೈಂಗಿಕ ಶೋಷಣೆಯಾಗುತ್ತಿದೆ ಎನ್ನುವ ಆರೋಪ ಹೊಸದಲ್ಲ. ಬಾಲಿವುಡ್‌ನ‌ಲ್ಲಿ ಒಂದೂವರೆ ದಶಕದ ಹಿಂದೆಯೇ ಹಲವು ಖ್ಯಾತ ನಟರು, ನಿರ್ದೇಶಕರು ಮತ್ತು ನಿರ್ಮಾಪಕರು ಲೈಂಗಿಕ ಶೋಷಣೆ ಅಥವಾ ಕಾಸ್ಟಿಂಗ್‌ ಕೌಚ್‌ನ ಆರೋಪಕ್ಕೊಳಗಾಗಿದ್ದರು. ಆ ಕಾಲದ ಕೆಲವು ಜನಪ್ರಿಯ ನಟಿಯರೂ ಕೂಡಾ ತಾವು ಈ ರೀತಿ ಶೋಷಣೆ ಅನುಭವಿಸಿರುವ ಕುರಿತು ಹೇಳಿಕೊಂಡಿದ್ದರು. ಅನಂತರ ಕೆಲ ತಿಂಗಳ ಹಿಂದೆ ಹಾಲಿವುಡ್‌ ನಿರ್ಮಾಪಕ ಹಾರ್ವಿ ವೀನ್‌ಸ್ಟನ್‌ ವಿರುದ್ಧ ಕಾಸ್ಟಿಂಗ್‌ ಕೌಚ್‌ ಆರೋಪ ಪ್ರಬಲವಾಗಿ ಕೇಳಿ ಬಂತು. ಹಲವು ಜನಪ್ರಿಯ ನಟಿಯರು ವೀನ್‌ಸ್ಟನ್‌ನಿಂದ ತಾವು ಶೋಷಣೆಗೊಳಗಾದ ವಿಚಾರವನ್ನು ಬಹಿರಂಗಪಡಿಸಿದರು. ಇದರ ಹಿನ್ನೆಲೆಯಲ್ಲಿ ಹಾಲಿವುಡ್‌, ಬಾಲಿವುಡ್‌ ಮಾತ್ರವಲ್ಲದೆ ಪ್ರಾದೇಶಿಕ ಚಿತ್ರರಂಗಗಳಲ್ಲೂ ಕಾಸ್ಟಿಂಗ್‌ ಕೌಚ್‌ ಸದ್ದು ಮಾಡಿದೆ. ಕೆಲ ದಿನಗಳ ಹಿಂದೆ ತೆಲುಗು ಚಿತ್ರರಂಗ ಇದೇ ಆರೋಪಕ್ಕೆ ಗುರಿಯಾಯಿತು. ನಟಿ ಶ್ರೀ ರೆಡ್ಡಿ ತನ್ನನ್ನು ಶೋಷಿಸಿಯೂ ಸಿನೇಮಾಗಳಲ್ಲಿ ಅವಕಾಶ ನೀಡದಿರುವುದನ್ನು ಪ್ರತಿಭಟಿಸಿ ತೆಲುಗು ಚಿತ್ರ ಕಲಾವಿದರ ಸಂಸ್ಥೆ ಎದುರು ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದು ದೇಶಾದ್ಯಂತ ಸುದ್ದಿಯಾಯಿತು.  ಕನ್ನಡ ಚಿತ್ರರಂಗದಲ್ಲೂ ಈ ಮಾದರಿಯ ಶೋಷಣೆಯಾಗುತ್ತಿದೆ ಎನ್ನುವ ಗುಸುಗುಸು ಕೆಲ ಸಮಯದ ಹಿಂದೆ ಕೇಳಿ ಬಂದಿತ್ತು.

Advertisement

ಲೈಂಗಿಕ ಶೋಷಣೆ ಬಗ್ಗೆ ಇತರ ಕ್ಷೇತ್ರಗಳಿಂದಲೂ ಆಗಾಗ ದೂರುಗಳು ಬರುತ್ತಿವೆ. ಕೆಲವು ಪ್ರತಿಷ್ಠಿತ ಕಾರ್ಪೋರೇಟ್‌ ಕಂಪೆನಿಗಳಲ್ಲಿ ಸಂಭವಿಸಿದ ಕಾಸ್ಟಿಂಗ್‌ ಕೌಚ್‌ ಪ್ರಕರಣಗಳು ವರದಿಯಾಗಿದ್ದವು. ಆದರೆ ಚಿತ್ರರಂಗ ಜನಪ್ರಿಯವಾದ ಕ್ಷೇತ್ರವಾಗಿರುವುದರಿಂದ ಅಲ್ಲಾಗುವ ಚಿಕ್ಕ ಘಟನೆಯೂ ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತದೆ. ಇಂತಹ ನಕರಾತ್ಮಕ ಸುದ್ದಿಗಳು ಕಾಸ್ಟಿಂಗ್‌ ಕೌಚ್‌ ಎನ್ನುವುದು ಚಿತ್ರರಂಗದ ಒಪ್ಪಿತ ಸೂತ್ರ ಎಂಬ ಭಾವನೆ ಉಂಟು ಮಾಡುವ ಅಪಾಯವೂ ಇದೆ. ಇದೀಗ ನೃತ್ಯ ನಿರ್ದೇಶಕಿ ಸರೋಜ್‌ ಖಾನ್‌ ನೀಡಿರುವ ಹೇಳಿಕೆಯಿಂದಾಗಿ ಕಾಸ್ಟಿಂಗ್‌ ಕೌಚ್‌ ಚರ್ಚೆ ಮತ್ತೂಮ್ಮೆ ಮುನ್ನೆಲೆಗೆ ಬಂದಿದೆ. ಪರೋಕ್ಷ ಸಮ್ಮತಿಯ ನಂತರವೇ ಇದು ನಡೆಯುತ್ತದೆ. ಕನಿಷ್ಠ ಇದರಿಂದ ನಟಿಯರಿಗೆ ಕೆಲಸ ದೊರಕುತ್ತದೆ. ಎಲ್ಲೆಡೆಯೂ ಇದು ನಡೆಯುತ್ತದೆ. ಸರಕಾರಿ ಅಧಿಕಾರಿಗಳೂ ಮಾಡುತ್ತಾರೆ. ನೀವೇಕೆ ಚಿತ್ರರಂಗವನ್ನೇ ಗುರಿ ಮಾಡಿಕೊಳ್ಳುತ್ತೀರಿ ಎಂದಿದ್ದಾರೆ ಸರೋಜ್‌ ಖಾನ್‌.  ಈ ಚರ್ಚೆಯನ್ನು ಮತ್ತೂಂದು ನೆಲೆಗೆ ಕೊಂಡೊಯ್ದದ್ದು ಹಿರಿಯ ರಾಜಕಾರಣಿ ರೇಣುಕಾ ಚೌಧರಿ.ಸಂಸತ್ತು ಕೂಡಾ ಕಾಸ್ಟಿಂಗ್‌ ಕೌಚ್‌ಗೆ ಹೊರತಾಗಿಲ್ಲ ಎನ್ನುವ ಮೂಲಕ ಚೌಧರಿ ವ್ಯವಸ್ಥೆಗೆ ದೊಡ್ಡದೊಂದು ಆಘಾತವನ್ನು ನೀಡಿದ್ದಾರೆ. ಇದು ಓದಿ ಪಕ್ಕಕ್ಕಿಡುವ ಸುದ್ದಿಯಲ್ಲ. ಅದರಲ್ಲೂ ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಇನ್ನಷ್ಟು ಪ್ರಾತಿನಿಧ್ಯ ಸಿಗಬೇಕೆಂಬ ವಾದ ಪ್ರಬಲವಾಗುತ್ತಿರುವಾಗಲೇ ಸಂಸತ್ತಿನಲ್ಲೂ ಅವರಿಗೆ ರಕ್ಷಣೆಯಿಲ್ಲ ಎಂಬ ಮಾತನ್ನು ಸ್ವತಃ ಹಲವು ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿರುವ ಮಹಿಳೆಯೊಬ್ಬರು ಹೇಳಿದ್ದಾರೆಂದರೆ ಗಂಭೀರವಾದದ್ದೇ.

ಚೌಧರಿ ಒಂದು ಪಕ್ಷ ಅಥವಾ ಓರ್ವ ನಾಯಕನನ್ನು ಉದ್ದೇಶಿಸಿ ಈ ಮಾತನ್ನು ಹೇಳಿದ್ದರೆ ಅದು ರಾಜಕೀಯ ಕಾರಣ ಎಂದುಕೊಳ್ಳಬಹುದಿತ್ತು. ಆದರೆ ಅವರು ಪ್ರಜಾತಂತ್ರದ ದೇಗುಲ ಎಂದು ಅರಿಯಲ್ಪಡುವ ಸಂಸತ್ತಿಗೆ ಸಂಬಂಧಿಸಿ ಹೇಳಿರುವುದರಿಂದ ಮಾತಿಗೆ ಹೆಚ್ಚು ಮಹತ್ವವಿದೆ. ಚಿತ್ರ ರಂಗವಾಗಲಿ, ಸಮಾಜದ ಬೇರೆ ಯಾವುದೇ ಕ್ಷೇತ್ರವಾಗಿರಲಿ ಅಲ್ಲಾಗುವ ಶೋಷಣೆ, ಅನ್ಯಾಯಗಳನ್ನು ಬಗೆಹರಿಸಲು ಸೂಕ್ತವಾದ ಶಾಸನ ತರುವ ಹೊಣೆಯಿರುವುದು ಸಂಸತ್ತು ಅಥವಾ ರಾಜ್ಯಗಳ ಶಾಸನ ಸಭೆಗಳಿಗೆ. ಅಂತಹ ವ್ಯವಸ್ಥೆಯಲ್ಲೇ ಶೋಷಣೆ ನಡೆಯುತ್ತಿದೆ ಎಂದಾದರೆ ಅದು ಹೇಗೆ, ಯಾರಿಂದ ಎಂಬುದು ಬಹಿರಂಗವಾಗುವ ಅಗತ್ಯವಿದೆ.

ಅಮೆರಿಕದಂತಹ ದೇಶದಲ್ಲಿ ರಾಜಕೀಯ ಮುಖಂಡರ ಕಾಸ್ಟಿಂಗ್‌ ಕೌಚ್‌ ಪ್ರಕರಣಗಳು ಮಾಧ್ಯಮಗಳ ಪಾಲಿಗೆ ರಸಗವಳವಾಗುತ್ತದೆ. ಅಲ್ಲಿನ ಅಧ್ಯಕ್ಷರೇ ಇಂತಹ ಪ್ರಕರಣಗಳ ಸಿಕ್ಕಿ ಬಿದ್ದದ್ದುಂಟು.ನಮ್ಮಲ್ಲೂ ರಾಜಕಾರಣಿ ಗಳು ಇಂತಹ ಪ್ರಕರಣಗಳ ಸುಳಿಗೆ ಬಿದ್ದು ಹೆಸರು ಕೆಡಿಸಿಕೊಂಡದ್ದುಂಟು.ಆದರೆ ಸಂಸತ್ತಿನ ತನಕ ಮುಟ್ಟಿರಲಿಲ್ಲ ಎಂದೇ ಭಾವಿಸಿದ್ದೆವು. ಹೀಗಾಗಿ ಸಂಸತ್ತು ಈಗಲೂ ಪವಿತ್ರ ದೇಗುಲ ಎಂಬ ಭಾವನೆ ಜನರ ಮನಸ್ಸಿನಲ್ಲಿದೆ. ಇದೀಗ ಚೌಧರಿ ಹೇಳಿಕೆ ಈ ಭಾವನೆಯನ್ನು ಅಲ್ಲಾಡಿಸುವಂತಿದೆ. ಸಂಸತ್ತಿನ ಸಂದರ್ಭದಲ್ಲಿ ಮಾಡಿರುವ ಈ ಆರೋಪಕ್ಕೆ ಸಂಬಂಧಿಸಿದ ವಿಚಾರಗಳು ಇನ್ನಷ್ಟು ವಿಸ್ತೃತವಾಗಿ ಬೆಳಕಿಗೆ ಬರಬೇಕು. ಇದು ಬರೀ ತನಿಖೆಯಿಂದ ಮುಗಿಯಬಹುದಾದ ಆರೋಪವಲ್ಲ. ಆರೋಪ ಸತ್ಯವೇ ಆಗಿದ್ದರೆ  ಪ್ರತಿಯೊಬ್ಬ ಜನಪ್ರತಿನಿಧಿಯೂ ಕಳಂಕ ನಿವಾರಿಸಲು ತಮ್ಮ ಹೊಣೆಗಾರಿಕೆಯನ್ನರಿತು ಗಂಭೀರವಾಗಿ ಚಿಂತಿಸಬೇಕಾದ ವಿಚಾರ.

Advertisement

Udayavani is now on Telegram. Click here to join our channel and stay updated with the latest news.

Next