Advertisement

ಸಮಾನ ಅವಕಾಶವಿದ್ದರೂ ಜಾತಿ ಪದ್ಧತಿ ಹೋಗಿಲ್ಲ 

12:06 PM Apr 26, 2017 | |

ಬೆಂಗಳೂರು: ನಾನಾ ವೈವಿಧ್ಯವಿರುವ ದೇಶದಲ್ಲಿ ಎಲ್ಲ ಜನರ ಕಲ್ಯಾಣಕ್ಕೆ ಪೂರಕವಾದ ಅಂಶಗಳನ್ನು ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಸಂವಿಧಾನದಲ್ಲಿ ಕಲ್ಪಿಸಿದರೂ ಸಮಾಜ ಜಾತೀಯತೆಯ ಪ್ರಭಾವದಿಂದ ಹೊರಬರದಿರುವುದು ದುರದೃಷ್ಟಕರ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅಭಿಪ್ರಾಯಪಟ್ಟರು. 

Advertisement

ಕೆಎಸ್‌ಟಿಡಿಸಿ ಪರಿಶಿಷ್ಟ ಜಾತಿ/ ವರ್ಗದ ನೌಕರರ ಕಲ್ಯಾಣ ಸಂಸ್ಥೆ ಹಾಗೂ ಕೆಎಸ್‌ಟಿಡಿಸಿ ಕಾರ್ಮಿಕರ ಒಕ್ಕೂಟ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಸಮಾನತೆ ವಿರುದ್ಧ ಹೋರಾಡಿದ ಅಂಬೇಡ್ಕರ್‌ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದರೂ ಸಮಾಜ ಇಂದಿಗೂ ಜಾತೀಯತೆಯಿಂದ ಹೊರಬಂದಿಲ್ಲ.

ಶಿಕ್ಷಣ, ಉದ್ಯೋಗಾವಕಾಶ ದೊರೆತರೂ ಬಹಳಷ್ಟು ಶೋಷಿತರು ಅಂಜಿಕೆ ಮನೋಭಾವ ತೊರೆದಿಲ್ಲ. ಇನ್ನೊಂದೆಡೆ ಇತರ ವರ್ಗದವರು ಸುಧಾರಿತ ಶೋಷಿತರನ್ನು ಅನುಮಾನದಿಂದಲೇ ಕಾಣುತ್ತಿದ್ದಾರೆ. ಏನೇ ಆದರೂ, ಅಸಮಾನತೆ ತೊಡೆದುಹಾಕುವ ಪ್ರಯತ್ನ ನಿರಂತರವಾಗಿ ನಡೆಯಬೇಕು,’ ಎಂದು ಅವರು ಹೇಳಿದರು.

ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ನವೀನ್‌ರಾಜ್‌ ಸಿಂಗ್‌, “ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಸಂವಿಧಾನ ರಚಿಸಿದ ಕಾರಣದಿಂದಲೇ ಇಂದು ಐಎಎಸ್‌, ಐಪಿಎಸ್‌ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲು ಅವಕಾಶವಾಯಿತು ಎಂಬ ಭಾವನೆ ನನ್ನದು. ಸಣ್ಣ ಕಾನೂನು ತರಲು ಮೂರ್‍ನಾಲ್ಕು ತಿಂಗಳು ಕಸರತ್ತು ನಡೆಸುತ್ತೇವೆ.

ಆದರೆ ಇಡೀ ದೇಶದ ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನ ರಚಿಸಬೇಕಾದ ಮಹತ್ವದ ಕಾರ್ಯವನ್ನು ಅಂಬೇಡ್ಕರ್‌ ಅವರು ಸಮರ್ಥವಾಗಿ ನಿರ್ವಹಿಸಿದರ ಪರಿಣಾಮವಾಗಿ ಇಂದು ಸಾಕಷ್ಟು ಬದಲಾವಣೆ ಕಾಣುತ್ತಿದ್ದೇವೆ’ ಎಂದು ಹೇಳಿದರು. ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಕುಮಾರ್‌ ಪುಷ್ಕರ್‌, “ಜಗತ್ತಿನಲ್ಲೇ ಅತಿ ಶ್ರೇಷ್ಠ ಸಂವಿಧಾನ ರಚಿಸಿದ ಕೀರ್ತಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಸಲ್ಲುತ್ತದೆ.

Advertisement

ಸಂವಿಧಾನ ರಚನೆಯಾಗಿ ಆರು ದಶಕ ಕಳೆದರೂ ಇಂದಿಗೂ ಯಾವುದೇ ಗೊಂದಲ ಸೃಷ್ಟಿಯಾಗದಿರುವುದನ್ನು ಗಮನಿಸಿ  ದರೆ ಅಂಬೇಡ್ಕರ್‌ ಅವರ ದೂರದರ್ಶಿತ್ವ ಎಂಥದ್ದು ಎಂಬುದು ಅರಿವಾಗುತ್ತದೆ. ಅವರ ಕೊಡುಗೆ ಸ್ಮರಿಸುತ್ತಾ ಅವರ ಆಶಯದಲ್ಲಿ ಎಲ್ಲರೂ ಕಾರ್ಯ ನಿರ್ವಹಿಸಬೇಕು’ ಎಂದು ಹೇಳಿದರು. ವಿಧಾನ ಪರಿಷತ್‌ ಮಾಜಿ ಸದಸ್ಯ ಡಾ.ಎಲ್‌.ಹನುಮಂತಯ್ಯ, ಕೆಎಸ್‌ಟಿಡಿಸಿ ಮಾಜಿ ಅಧ್ಯಕ್ಷ ಎಸ್‌.ಇ.ಹುಸೇನ್‌, ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಡಾ.ಎಸ್‌.ಮಂಜುಳಾ ಇದ್ದರು. 

ಹೆಚ್ಚು ಅಧಿಕಾರ ಬೇಕು 
ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಒಂದೆರಡು ವರ್ಷಕ್ಕೆ ವ್ಯವಸ್ಥಾಪಕ ನಿರ್ದೇಶಕರು ಬದಲಾಗುವುದರಿಂದ ಕಾರ್ಯ ವಿಧಾನವೂ ವ್ಯತ್ಯಾಸವಾಗಲಿದೆ. ಹಾಗಾಗಿ ಉನ್ನತ ಹುದ್ದೆಯಲ್ಲಿರುವವರು ಕನಿಷ್ಠ ಐದು ವರ್ಷ ಒಂದೇ ಹುದ್ದೆಯಲ್ಲಿದ್ದರೆ ಬದಲಾವಣೆ ತರಲು ಸಾಧ್ಯವಾಗಲಿದ್ದು, ಈ ಸಂಬಂಧ ಸರ್ಕಾರವೂ ಚಿಂತನೆ ನಡೆಸಬೇಕು ಎಂದು ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next