Advertisement

ಸಾಮಾಜಿಕ ಸಬಲೀಕರಣದಿಂದ ಜಾತಿ ಪದ್ಧತಿ ದೂರ

09:22 PM Mar 04, 2020 | Lakshmi GovindaRaj |

ಚಾಮರಾಜನಗರ: ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣವೇ ಜಾತಿ ಪದ್ಧತಿ ನಿರ್ಮೂಲನಾ ಅಸ್ತ್ರಗಳು. ಈ ನಿಟ್ಟಿನಲ್ಲಿ ಜನರು ಸಶಕ್ತರಾದಾಗ ಮಾತ್ರ ಜಾತಿ ವ್ಯವಸ್ಥೆ ಕೊನೆಗೊಳ್ಳುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಹೇಳಿದರು.

Advertisement

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪ್ರಜಾ ಪರಿವರ್ತನಾ ವೇದಿಕೆಯ ಸಂಯುಕ್ತಾಶ್ರಯದಲ್ಲಿ ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮ 1955 ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ 1989 ಹಾಗೂ ನಿಯಮಗಳು 1995ರ ಕುರಿತಾಗಿ ನಡೆದ ವಿಚಾರ ಸಂಕಿರಣ ಮತ್ತು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಾತಿ ಪಿಡುಗು ಇನ್ನೂ ಜೀವಂತ: ದೇಶ ಅನೇಕ ರೀತಿಯಲ್ಲಿ ಪ್ರಗತಿ ಸಾಧಿಸಿದ್ದರೂ, ಜಾತಿ ಎಂಬ ಪಿಡುಗು ಇನ್ನೂ ಜೀವಂತವಾಗಿದೆ. ಸಮಾಜದಲ್ಲಿರುವ ಈ ಜಾತಿ ಪದ್ಧತಿಯನ್ನು ನಿರ್ಮೂಲನೆ ಮಾಡಲು, ಪ್ರತಿಯೊಬ್ಬರೂ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಸಶಕ್ತರಾಗಬೇಕಿದೆ. ಜತೆಗೆ ಸಂವಿಧಾನ ನೀಡಿರುವ ಹಕ್ಕುಗಳ ಬಗೆಗೆ ಜಾಗೃತಿ ಮೂಡಿಸುವ ಕೆಲಸಗಳು ಆಗಬೇಕಿದೆ ಎಂದು ತಿಳಿಸಿದರು.

ಜಾತಿ ಕಾರಣದಿಂದ ಯಾರಾದರೂ ದಮನಕ್ಕೆ ಒಳಗಾದರೆ ಅದು ಕೇವಲ ಕಾನೂನಿನ ಉಲ್ಲಂಘನೆ ಮಾತ್ರ ಆಗದೇ, ಮಾನವೀಯತೆ ಹಾಗೂ ಸಂವಿಧಾನದ ಉಲ್ಲಂಘನೆಯಾಗುತ್ತದೆ. ಹೀಗಾಗಿ ಈ ಪಿಡುಗನ್ನು ಮೂಲದಿಂದ ತೊಡೆದು ಹಾಕಲು, ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡುವ ಅಂತಃಕರಣದ ಆಲೋಚನೆ ಅಗತ್ಯವಿದೆ. ಈ ಯೋಚನೆ ಪ್ರತಿಯೊಬ್ಬರ ಮನಸ್ಸಿನಲ್ಲೂ ಒಡಮೂಡಿದಾಗ ಜಾತಿ ಎಂಬುದೇ ಇಲ್ಲವಾಗಲಿದೆ ಎಂದು ಹೇಳಿದರು.

ಸಮಸ್ಯೆ ಎದುರಿಸಲು ಕಾನೂನು ನೆರವು: ದೌರ್ಜನ್ಯಕ್ಕೊಳಗಾದವರನ್ನು ರಕ್ಷಿಸಲು ಸಂವಿಧಾನ ಅನೇಕ ಹಕ್ಕು, ಅನುಕೂಲ ಹಾಗೂ ಕಾನೂನು ಭದ್ರತೆಯನ್ನು ಒದಗಿಸಿದೆ. ಈ ಕುರಿತ ಕಾನೂನುಗಳ ಬಗ್ಗೆ ಹೆಚ್ಚಿನ ಜಾಗೃತಿ ಹಾಗೂ ಪ್ರಚಾರ ಆಗಬೇಕಿದೆ. ಸಮಸ್ಯೆ ಎದುರಾದಾಗ ಕಾನೂನುಗಳು ನೆರವಿಗೆ ಬರಲಿವೆ. ಆದರೆ, ಸಮಸ್ಯೆಗಳೇ ಎದುರಾಗದಂತಹ ಸಾಮರಸ್ಯ ಸಮಾಜ ನಿರ್ಮಾಣವಾಗಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು.

Advertisement

ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಿ: ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದ್‌ ಕುಮಾರ್‌ ಮಾತನಾಡಿ, ದೇಶದಲ್ಲಿರುವ ಜಾತಿ ವ್ಯವಸ್ಥೆ ಹಾಗೂ ಸಾಮಾಜಿಕ ತಾರತಮ್ಯವನ್ನು ತೊಡೆದು ಹಾಕಲು, ದಮನಿತರಿಗೆ ಸಂವಿಧಾನ ನೀಡಿರುವ ಹಕ್ಕು, ಸೌಲಭ್ಯಗಳ ಬಗೆಗೆ ಜಾಗೃತಿ ಮೂಡಿಸಬೇಕಿದೆ. ಈ ಅರಿವು ಕಾರ್ಯಕ್ರಮಗಳು ಕೇವಲ ಜಿಲ್ಲಾ ಕೇಂದ್ರಗಳಲ್ಲಿ ಅಲ್ಲದೇ ಪ್ರತಿ ಗ್ರಾಮ ಮಟ್ಟದಲ್ಲಿ ನಡೆದಾಗ ಶೋಷಿತ ವರ್ಗದವರ ಮೇಲಾಗುವ ದೌರ್ಜನ್ಯ ಪ್ರಕರಣಗಳಿಗೆ ತೆರೆ ಎಳೆಯಬಹುದಾಗಿದೆ ಎಂದು ತಿಳಿಸಿದರು.

ಮಾನಸಿಕ ಪರಿವರ್ತನೆ ಅಗತ್ಯ: ಉರಿಲಿಂಗಿಪೆದ್ದಿಮಠದ ಪೀಠಾಧ್ಯಕ್ಷ ಜ್ಞಾನಪ್ರಕಾಶ್‌ ಸ್ವಾಮೀಜಿ ಮಾತನಾಡಿ, ಮಾನಸಿಕ ಪರಿವರ್ತನೆಯಾದರೆ ಜಾತಿ ಪದ್ಧತಿ ದೂರವಾಗಲಿದೆ. ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಪ್ರಗತಿಯಾದರೆ ಜಾತಿ ನಾಶವಾಗುತ್ತದೆ. ಶೋಷಿತ ಸಮುದಾಯ ಜಾಗೃತರಾದರೆ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಕನಸು ಸಾಕಾರಗೊಳ್ಳುತ್ತದೆ ಎಂದು ಹೇಳಿದರು.

ನಿಯೋಜಿತ ನಳಂದ ಬೌದ್ಧ ವಿಶ್ವವಿದ್ಯಾಲಯದ ಬೋಧಿದತ್ತ ಬಂತೇಜಿ, ವಕೀಲ ಡಾ.ಎನ್‌.ಗುರುಸ್ವಾಮಿ ಅಧಿನಿಯಮಗಳ ಕುರಿತು ವಿಚಾರ ಮಂಡಿಸಿದರು. ನಾಗರಿಕ ಹಕ್ಕುಗಳ ಸಂರಕ್ಷಣಾ ಅಧಿನಿಯಮ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ (ದೌರ್ಜನ್ಯ ಪ್ರತಿಬಂಧ) ಅಧಿನಿಯಮಗಳ ಕುರಿತಾದ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಹೊನ್ನೇಗೌಡ, ಸಹಾಯಕ ನಿರ್ದೇಶಕ ಚಿಕ್ಕಬಸವಯ್ಯ, ಪ್ರಜಾ ಪರಿವರ್ತನಾ ವೇದಿಕೆಯ ಅಧ್ಯಕ್ಷ ಸಿ.ಎಂ.ಕೃಷ್ಣಮೂರ್ತಿ ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಪ್ರತಿಮೆಗೆ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಸೇರಿದಂತೆ ಗಣ್ಯರು ಮಾಲಾರ್ಪಣೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next