Advertisement

ಜಾತಿ ರಾಜಕೀಯ ತಿರಸ್ಕರಿಸಿದ ಮತದಾರ

02:27 AM May 25, 2019 | sudhir |

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ನಿಚ್ಚಳ ಬಹುಮತವನ್ನು ಒದಗಿಸಿಕೊಟ್ಟ 2019ನೇ ಲೋಕಸಭೆ ಚುನಾವಣೆ ಈ ಕಾರಣಕ್ಕೆ ಮಾತ್ರ ಮುಖ್ಯವಾಗಿಲ್ಲ, ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಕೆಲವು ಮೂಲಭೂತವಾದ ಬದಲಾವಣೆಗಳಾಗುತ್ತಿರುವುದಕ್ಕೂ ಈ ಚುನಾವಣೆ ಸಾಕ್ಷಿಯಾಗಿದೆ. ಮುಖ್ಯವಾಗಿ ಸೋಗಿನ ಜಾತ್ಯತೀತತೆ, ಜಾತಿ ರಾಜಕೀಯ ಈ ಮೊದಲಾದ ರಾಜಕೀಯದ ಅವಿಭಾಜ್ಯ ಅನಿಷ್ಟ ಅಂಶಗಳು ನವ ಭಾರತದ ರಾಜಕೀಯದಲ್ಲಿ ಅಪ್ರಸ್ತುತವಾಗುತ್ತಿವೆ ಅಥವಾ ಮಹತ್ವ ಕಳೆದುಕೊಳ್ಳುತ್ತಿವೆ. ಮತದಾರರಲ್ಲಿ ಹೆಚ್ಚಿದ ರಾಜಕೀಯ ಅರಿವು ಇದಕ್ಕೆ ಕಾರಣವಾಗಿರಬಹುದು. ಆದರೆ ಇದು ಒಂದು ಸಕಾರಾತ್ಮಕವಾದ ಬದಲಾವಣೆ ಎಂಬ ಕಾರಣಕ್ಕೆ ಸ್ವಾಗತಾರ್ಹವಾಗಿದೆ.

Advertisement

2024ಕ್ಕಾಗುವಾಗ ದೇಶದ ರಾಜಕೀಯದಲ್ಲಿ ಹುಸಿ ಜಾತ್ಯತೀತವಾದ ನಡೆಯುವುದಿಲ್ಲ ಎಂಬ ಮಾತನ್ನು ಗುರುವಾರ ಪ್ರಧಾನಿ ನರೇಂದ್ರ ಮೋದಿ ಮತದಾರರಿಗೆ ಧನ್ಯವಾದ ಅರ್ಪಿಸುವ ಭಾಷಣದಲ್ಲಿ ಹೇಳಿದ್ದಾರೆ. ಜಾತ್ಯತೀತತೆ ನಮ್ಮ ಸಂವಿಧಾನದ ಮೂಲ ಲಕ್ಷಣವಾಗಿದ್ದರೂ ರಾಜಕೀಯ ಪಕ್ಷಗಳು ಅದನ್ನು ತಮ್ಮ ಮೂಗಿನ ನೇರಕ್ಕೆ ತಕ್ಕಂತೆ ವ್ಯಾಖ್ಯಾನಿಸಿದ ಪರಿಣಾಮವಾಗಿ ಜಾತ್ಯತೀತತೆ ಎನ್ನುವುದೀಗ ಒಂದು ನಿರ್ದಿಷ್ಟ ಕೋಮಿನವರನ್ನು ಓಲೈಸುವ ಅಸ್ತ್ರ ಎಂಬ ಗ್ರಹಿಕೆಗೆ ತುತ್ತಾಗಿದೆ. ದಶಕಗಳಿಂದ ಕೆಲವು ಪಕ್ಷಗಳು ಜಾತ್ಯತೀತತೆಯ ಅಸ್ತ್ರವಿಡಿದು ಓಲೈಕೆ ರಾಜಕೀಯ ಮಾಡುತ್ತಾ ಬಂದ ಪರಿಣಾಮ ಮತ ಧ್ರುವೀಕರಣಕ್ಕೆ ದಾರಿಯಾಯಿತು. ಇಂಥ ಹುಸಿ ಜಾತ್ಯತೀತವಾದವನ್ನು ಮತದಾರ ಯಾವುದೇ ಮುಲಾಜಿಲ್ಲದೆ ತಿರಸ್ಕರಿಸಿದ್ದಾನೆ.

ಈ ಹಿನ್ನೆಲೆಯಲ್ಲಿ ಮೋದಿ ಹೇಳಿದ ಮಾತು ಹೆಚ್ಚು ಪ್ರಸ್ತುತವಾಗುತ್ತಿದೆ. ಹುಸಿ ಜಾತ್ಯತೀತವಾದವನ್ನು ವಿರೋಧಿಸುತ್ತಾ ಬಂದ ಪಕ್ಷ ಎರಡನೇ ಅವಧಿಗೆ ಮೊದಲಿಗಿಂತಲೂ ಹೆಚ್ಚಿನ ಸ್ಥಾನಗಳನ್ನು ಗಳಿಸಿಕೊಂಡು ಅಧಿಕಾರಕ್ಕೇರಿರುವಾಗ ಯಾರಾದರೂ ಇನ್ನು ಜಾತ್ಯತೀತತೆ ಅಪಾಯದಲ್ಲಿದೆ ಎಂದರೆ ಅಪಹಾಸ್ಯಕ್ಕೆ ಗುರಿಯಾಗಬಹುದಷ್ಟೆ. ಇಂಥ ಹುಸಿ ಜಾತ್ಯತೀತವಾದಿ ನಾಯಕರ ಸ್ಥಾನ ಎಲ್ಲಿ ಎಂದು ಮತದಾರರು ಸ್ಪಷ್ಟವಾಗಿ ತೋರಿಸಿಕೊಟ್ಟಿದ್ದಾರೆ.

ಅದೇ ರೀತಿ ರಾಜಕೀಯ ಪಕ್ಷಗಳ ಜಾತಿ ಲೆಕ್ಕಾಚಾರವೂ ಈ ಸಲ ಸಂಪೂರ್ಣವಾಗಿ ಬುಡಮೇಲಾಗಿದೆ. ಇದಕ್ಕೊಂದು ಉತ್ತಮ ಉದಾಹರಣೆ ಉತ್ತರ ಪ್ರದೇಶ ಮತ್ತು ಬಿಹಾರ. ಹಿಂದಿನಿಂದಲೂ ಜಾತಿ ರಾಜಕೀಯವನ್ನೇ ಮಾಡಿಕೊಂಡು ಬಂದಿರುವ ಸಮಾಜವಾದಿ ಪಾರ್ಟಿ, ಬಹುಜನ ಸಮಾಜವಾದಿ ಪಾರ್ಟಿ, ರಾಷ್ಟ್ರೀಯ ಜನತಾ ದಳ ಮತ್ತಿತರ ಪಕ್ಷಗಳು ನೆಲಕಚ್ಚಲು ಪ್ರಚಂಡ ಮೋದಿ ಅಲೆಯ ಜತೆಗೆ ಜನರು ಜಾತಿ ರಾಜಕೀಯವನ್ನು ತಿರಸ್ಕರಿಸಿದ್ದೂ ಕಾರಣ. ಯಾದವ ಮತ್ತು ಮುಸ್ಲಿಂ ಮತಗಳನ್ನು ಧ್ರುವೀಕರಿಸಿ ರಾಜಕೀಯ ಮಾಡುತ್ತಿದ್ದ ಎಸ್‌ಪಿ ಮತ್ತು ದಲಿತರ ಮತ ಬ್ಯಾಂಕ್‌ನ್ನು ನಂಬಿದ್ದ ಬಿಎಸ್‌ಪಿಗೆ ಈ ಸಲ ಭಾರೀ ಮುಖಭಂಗವಾಗಿದೆ. ಯಾದವರು, ಮುಸ್ಲಿಮರು ಮತ್ತು ದಲಿತರ ಮತಗಳನ್ನು ಧ್ರುವೀಕರಿಸಿದರೆ ಗೆಲ್ಲಬಹುದು ಎಂದು ಭಾವಿಸಿ ಈ ಪಕ್ಷಗಳು ಮಹಾಘಟಬಂಧನ್‌ ರಚಿಸಿದ್ದವು. ಇದರ ಜತೆಗೆ ಮೇಲ್ಜಾತಿಯವರಾದ ಜಾಟರ ಮತಗಳನ್ನು ಸೆಳೆಯಲು ಆರ್‌ಎಲ್‌ಡಿಯನ್ನು ಸೇರಿಸಿಕೊಳ್ಳಲಾಗಿತ್ತು. ಹೇಗೆ ಲೆಕ್ಕಾಚಾರ ಹಾಕಿದರೂ ಮಹಾಘಟಬಂಧನ್‌ ಕನಿಷ್ಠ 50 ಸ್ಥಾನಗಳನ್ನು ಗೆಲ್ಲಬೇಕಿತ್ತು. ಆದರೆ ದಕ್ಕಿದ್ದು ಬರೀ 15 ಸ್ಥಾನ ಮಾತ್ರ. ಅದೇ ರೀತಿ ಬಿಹಾರದಲ್ಲಿ ಯಾದವರ ಮತ್ತು ಹಿಂದುಳಿದ ವರ್ಗದವರ ಮತಗಳನ್ನು ಧ್ರುವೀಕರಿಸಿ ರಾಜಕೀಯ ಮಾಡುತ್ತಿದ್ದ ಲಾಲೂ ಪ್ರಸಾದ್‌ ನೇತೃತ್ವದ ಆರ್‌ಜೆಡಿ ಕೂಡಾ ಬರೀ ಒಂದು ಸ್ಥಾನ ಗೆದ್ದುಕೊಂಡಿದೆ. ಈ ಫ‌ಲಿತಾಂಶ ಮುಲಾಯಂ ಸಿಂಗ್‌ ಯಾದವ್‌, ಅವರ ಪುತ್ರ ಅಖೀಲೇಶ್‌ ಯಾದವ್‌, ಮಾಯಾವತಿ, ಲಾಲೂ ಮತ್ತು ಅವರ ಮಕ್ಕಳು ಮುಟ್ಟಿ ನೋಡಿಕೊಳ್ಳಬೇಕಾದ ಹೊಡೆತ ನೀಡಿದೆ. ಬರೀ ಜಾತಿಯನ್ನು ನೋಡಿಕೊಂಡು ಮತ ನೀಡುವಷ್ಟು ಅಪ್ರಬುದ್ಧರು ಜನರಲ್ಲ ಎನ್ನುವುದನ್ನು ಅವರು ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು.

ಜಾತಿ ರಾಜಕೀಯ ಎಲ್ಲ ರಾಜ್ಯಗಳಲ್ಲಿ ಮತ್ತು ಎಲ್ಲ ಪಕ್ಷಗಳಲ್ಲಿ ಇವೆ. ಕರ್ನಾಟಕದಲ್ಲೂ ಜಾತಿ ಪ್ರಾಬಲ್ಯ ನೋಡಿಕೊಂಡೇ ಸೀಟು ಹಂಚಿಕೆಯಾಗುತ್ತದೆ. ಬಿಜೆಪಿಯೂ ಜಾತಿ ರಾಜಕೀಯಕ್ಕೆ ಹೊರತಾಗಿಲ್ಲ. ಆದರೆ ಅದನ್ನು ವಿಪರೀತ ಎನ್ನುವಷ್ಟು ಮಾಡುತ್ತಿಲ್ಲ ಎನ್ನುವುದೊಂದು ಸಮಾಧಾನ. ಜಾತಿಯನ್ನೇ ನಂಬಿಕೊಂಡಿರುವ ಎಸ್‌ಪಿ,ಬಿಎಸ್‌ಪಿ,ಆರ್‌ಜೆಡಿಯಂಥ ಪಕ್ಷಗಳ ನಾಯಕತ್ವ ಹೊಸ ಪೀಳಿಗೆಗೆ ದಾಟಿ ಬಂದಿದ್ದರೂ ಪಕ್ಷಗಳ ಮೂಲ ರೂಪ ಮಾತ್ರ ಹಾಗೆಯೇ ಉಳಿದುಕೊಂಡಿರುವುದೊಂದು ದುರಂತ. ಇದೀಗ ಈ ಪಕ್ಷಗಳು ಮತ್ತು ಅವುಗಳ ನಾಯಕರ ಭವಿಷ್ಯದ ಮುಂದೊಂದು ಪ್ರಶ್ನಾರ್ಥಕ ಚಿಹ್ನೆಯಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next