Advertisement

ಅಂತರ್ಜಾತಿ ವಿವಾಹದಿಂದ ಜಾತಿ ನಾಶ

11:59 AM Jan 23, 2018 | Team Udayavani |

ಬೆಂಗಳೂರು: ಅಂತರ್ಜಾತಿ ಹಾಗೂ ಅಂತರ ಧರ್ಮೀಯ ವಿವಾಹಗಳಿಂದ ಮಾತ್ರ ಜಾತಿ ನಾಶ ಸಾಧ್ಯ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅಭಿಪ್ರಾಯಪಟ್ಟರು. ಶ್ರೀಬನಶಂಕರಿ ಸಾಮೂಹಿಕ ವಿವಾಹ ವೇದಿಕೆಯಿಂದ ಸೋಮವಾರ ಬನಶಂಕರಿ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ “19ನೇ ವರ್ಷದ ಸಾಮೂಹಿಕ ವಿವಾಹ’ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಜೋಡಿಗಳನ್ನು ಆಶೀರ್ವದಿಸಿದರು.

Advertisement

ಬಳಿಕ ಮಾತನಾಡಿ, ಸಮಾಜದಲ್ಲಿ ಒಂದೇ ಸಮುದಾಯಕ್ಕೆ ಸೇರಿದವರು ವಿವಾಹ ಮಾಡಿಕೊಳ್ಳುತ್ತಿದ್ದಾರೆ. ಜತೆಗೆ ಕುಟುಂಬಗಳಲ್ಲಿ ಅಂತರ್ಜಾತಿಯ ವಿವಾಹಗಳು ನಡೆಯುತ್ತಿಲ್ಲ. ಹೀಗಾಗಿ ಜಾತಿಗಳ ನಡುವಿನ ಅಂತರ ಮುಂದುವರಿದಿದ್ದು, ಅಂತರ್ಜಾತಿಯ ಹಾಗೂ ಅಂತರ ಧರ್ಮೀಯ ವಿವಾಹಗಳು ಹೆಚ್ಚಾದಾಗ ಮಾತ್ರ ಸಮಾಜದಲ್ಲಿನ ಜಾತಿ ವ್ಯವಸ್ಥೆ ನಶಿಸಲು ಸಾಧ್ಯವಾಗುತ್ತದೆ ಎಂದರು.

ನೂತನವಾಗಿ ದಾಂಪತ್ಯ ಜೀವನಕ್ಕೆ ಕಾಲಿಡುವವವರು ಆರ್ಥಿಕ ಸಂಕಷ್ಟ ಹಾಗೂ ಕೌಟುಂಬಿಕ ಕಲಹದಂತಹ ಸಮಸ್ಯೆಗಳಿಗೆ ಧೃತಿಗೆಡಬಾರದು. ಜತೆಗೆ ದಂಪತಿಗಳ ನಡುವೆಯ ಯಾವುದೇ ರೀತಿಯ ರಹಸ್ಯಗಳಿಲ್ಲದಂತೆ ನೋಡಿಕೊಳ್ಳಬೇಕು. ಜೀವನ ಎಂದರೆ ಕೇವಲ ಸುಖ ಮಾತ್ರವಲ್ಲ. ಬದಲಿಗೆ, ಕಷ್ಟ-ಸುಖಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು.

ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಮಾತನಾಡಿ, ಸರಳ ವಿವಾಹಗಳಿಂದ ಸಮಾಜದಲ್ಲಿ ದೊಡ್ಡ ಮಟ್ಟದ ಪರಿವರ್ತನೆಯಾಗುತ್ತದೆ. ರಾಜ್ಯದಲ್ಲಿ ಇಂತಹ ಸರಳ ವಿವಾಹಗಳು ಹೆಚ್ಚಾಗಬೇಕಿದೆ ಎಂದು ಸಲಹೆ ನೀಡಿದರು.

ಈ ವೇಳೆ ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ, ಮಾಜಿ ಸಚಿವ ಪಿ.ಜಿ.ಆರ್‌.ಸಿಂಧ್ಯಾ, ಮಾಜಿ ಮೇಯರ್‌ ಎಸ್‌.ಕೆ.ನಟರಾಜ್‌, ಬನಶಂಕರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ , ವೇದಿಕೆಯ ಎ.ಎಸ್‌.ಬಸವರಾಜು ಸೇರಿದಂತೆ ಪ್ರಮುಖರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next