ಉಡುಪಿ: ಸರಕಾರಿ ಶಾಲೆಯ ಪದವೀಧರ ಶಿಕ್ಷಕರಾಗಲು ಎಲ್ಲ ಅರ್ಹತೆಯಿದ್ದು, ಸಿಂಧುತ್ವ ಪರೀಕ್ಷೆಯನ್ನು ಪೂರೈಸಿದ್ದರೂ ತಂದೆಯ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರವಿದೆ ಎಂಬ ಕಾರಣಕ್ಕೆ ನಮ್ಮನ್ನು ಕೌನ್ಸೆಲಿಂಗ್‌ನಿಂದ ಹೊರಗಿಟ್ಟಿದ್ದಾರೆ ಎಂದು ವಿವಾಹಿತ ಮಹಿಳಾ ಅಭ್ಯರ್ಥಿಗಳು ಆರೋಪಿಸಿದ್ದಾರೆ.
ಉಡುಪಿ ಜಿಲ್ಲೆಯ 16 ಅಭ್ಯರ್ಥಿಗಳು ಸೇರಿದಂತೆ ರಾಜ್ಯದ ಸುಮಾರು 450 ಅಭ್ಯರ್ಥಿಗಳು ಶಿಕ್ಷಕರ ಅರ್ಹತಾ ಪರೀಕ್ಷೆ ತೇರ್ಗಡೆಹೊಂದಿ ನೇಮಕಾತಿಗೆ ಎಲ್ಲ ರೀತಿಯ ಅರ್ಹತೆಯನ್ನು ಮೆರಿಟ್ ಆಧಾರದಲ್ಲಿ ಪಡೆದಿದ್ದರು. ನೇಮಕಾತಿಗೆ ಸಂಬಂಧಿಸಿದಂತೆ ಪಟ್ಟಿಯಲ್ಲೂ ನಮ್ಮ ಹೆಸರಿದೆ, ಸಿಂಧುತ್ವ ಪರೀಕ್ಷೆಯನ್ನು ಪೂರ್ಣಗೊಳಿಸಿ ಎಲ್ಲ ಮೂಲ ದಾಖಲೆಗಳನ್ನು ಸರಕಾರಕ್ಕೆ ಸಲ್ಲಿಸಿದ್ದೇವೆ. ಆದರೆ ಮದುವೆಯಾದ ಅನಂತರವೂ ತಂದೆಯ ಹೆಸರಿನಲ್ಲೇ ಇರುವ ಪ್ರಮಾಣಪತ್ರ ಮುಂದುವರಿದಿದೆ ಎಂಬ ಕಾರಣಕ್ಕೆ ನಮ್ಮನ್ನು ಆಯ್ಕೆ ಪಟ್ಟಿಯ ಕೌನ್ಸೆಲಿಂಗ್ ಪ್ರಕ್ರಿಯೆಯಿಂದ ಹೊರಗಿಡಲಾಗಿದೆ ಎಂದು ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ವಿವಾಹಿತ ಮಹಿಳಾ ಅಭ್ಯರ್ಥಿಗಳಿಗೆ ಮಾತ್ರವೇ ಈ ನಿಯಮ ಅನ್ವಯ ಏಕೆ? ವಿವಾಹಿತ ಪುರುಷ ಅಭ್ಯರ್ಥಿಗಳಿಗೇಕೆ ಈ ನಿಯಮ ಅನ್ವಯಿಸುವುದಿಲ್ಲ. ಎಲ್ಲದಕ್ಕೂ ನ್ಯಾಯಾಲಯದ ಮೆಟ್ಟಿಲೇರಲು ಸಾಧ್ಯವಾಗದು. ನಮ್ಮ ಎಲ್ಲ ದಾಖಲೆಗಳು ಸರಕಾರದ ಬಳಿಯೇ ಇರುವುದರಿಂದ ಬೇರೆ ಕಡೆ ಉದ್ಯೋಗಕ್ಕೆ ಹೋಗಲೂ ಸಾಧ್ಯವಾಗುತ್ತಿಲ್ಲ. ನೇಮಕಾತಿ ಕೌನ್ಸೆಲಿಂಗ್‌ಗೂ ನಮ್ಮನ್ನು ಪರಿಗಣಿಸಿಲ್ಲ. ಸರಕಾರ ನಮ್ಮ ಸಮಸ್ಯೆಗೆ ತತ್‌ಕ್ಷಣವೇ ಪರಿಹಾರ ನೀಡಬೇಕು ಆಗ್ರಹಿಸಿದ್ದಾರೆ.
ಈ ಬಗ್ಗೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲೂ ದೂರು ದಾಖಲಿಸಿದ್ದೇವೆ. ಕೆಎಟಿ ಕೂಡ ನಮ್ಮ ಪರವಾಗಿಯೇ ಆದೇಶ ಮಾಡಿದ್ದು, ಅದನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಈಗ ಇನ್ನೊಂದು ಗುಂಪು ಹೈಕೋರ್ಟ್ ದ್ವಿಸದಸ್ಯ ಪೀಠಕ್ಕೆ ರಿಟ್ ಅರ್ಜಿ ಸಲ್ಲಿಸಿದೆ. ನಮ್ಮ ಸಮಸ್ಯೆಯ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆದರೆ ಅವರು ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತಿಲ್ಲ. ವಿವಾಹಿತ ಮಹಿಳೆ ಮೀಸಲಾತಿಯನ್ನು ನೀಡುತ್ತಿಲ್ಲ. ಹೀಗಾಗಿ ನಮ್ಮನ್ನು ಸಾಮಾನ್ಯ ವರ್ಗದಡಿ ಪರಿಗಣಿಸಿದ್ದಾರೆ. ಕೆಲವು ಅಭ್ಯರ್ಥಿಗಳು ಸಾಮಾನ್ಯ ವರ್ಗದಡಿಯಲ್ಲೇ ಮುಂದುವರಿದಿದ್ದಾರೆ. ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಈಗ ಸಮಸ್ಯೆ ಎದುರಾಗಿದೆ.
ತಂದೆಯ ಜಾತಿ/ ಆದಾಯ ಪ್ರಮಾಣ ಪತ್ರ ಸಲ್ಲಿಸಿದ ವಿವಾಹಿತ ಮಹಿಳಾ ಅಭ್ಯರ್ಥಿಗಳ ಜಾತಿ ಮೀಸಲಾತಿಯನ್ನು ರದ್ದು ಗೊಳಿಸಿದ್ದರಿಂದ ಈ ಸಮಸ್ಯೆಯಾಗಿದೆ. ವಿವಾಹಿತ ಮಹಿಳೆ ತಂದೆಯ ಜಾತಿ / ಆದಾಯ ಪ್ರಮಾಣ ಪತ್ರ ನೀಡುವಂತಿಲ್ಲ ಎಂಬ ನಿಯಮವನ್ನು ಅಧಿಸೂಚನೆಯಲ್ಲಿ ತಿಳಿಸಿಲ್ಲ. ಅನಂತರವೂ ಪತಿಯ ಜಾತಿ/ ಆದಾಯ ಪ್ರಮಾಣ ಪತ್ರ ಸಲ್ಲಿಸಲು ಅವಕಾಶ ಕಲ್ಪಿಸಿಲ್ಲ. ಈ ಬಗ್ಗೆ ಸಚಿವರಿಗೆ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದೇವೆ ಎಂದು ನೊಂದ ಅಭ್ಯರ್ಥಿಗಳು ತಿಳಿಸಿದ್ದಾರೆ.
ಸರಕಾರವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿವಾಹಿತ ಮಹಿಳೆ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಶಿಕ್ಷಕರ ಕೌನ್ಸೆಲಿಂಗ್‌ನಲ್ಲಿ ಮೆರಿಟ್ ಆಧಾರದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಬೇಕು ಎಂದು ಸಂತ್ರಸ್ತರು ಆಗ್ರಹಿಸಿದ್ದಾರೆ.