Advertisement

ಜಾತಿ ಗಣತಿ ವರದಿ ವಿವರ ಶೀಘ್ರ ಬಹಿರಂಗ: ಸಚಿವ ಕೋಟ ಶ್ರೀನಿವಾಸ ಪೂಜಾರಿ

08:33 PM Dec 23, 2022 | Team Udayavani |

ಸುವರ್ಣವಿಧಾನಸೌಧ: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಜಾತಿ ಗಣತಿಯ ವಿವರಗಳನ್ನು ಮುಖ್ಯಮಂತ್ರಿಗಳ ಜತೆ ಮಾತನಾಡಿ ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ವೇಳೆ ಬಿಜೆಪಿ ಸದಸ್ಯ ಕೆ.ಪಿ.ನಂಜುಂಡಿ ಅವರ ಪ್ರಶ್ನೆಗೆ ಉತ್ತರಿಸಿ, ಈ ಹಿಂದೆ ರಚಿಸಲಾಗಿದ್ದ ಎಚ್‌.ಕಾಂತರಾಜ್‌ ಆಯೋಗವು ಸರ್ಕಾರಕ್ಕೆ ವರದಿ ನೀಡಿದೆ. ಆದರೆ ಅದರ ಪುನರ್‌ ಪರಿಶೀಲನೆ ಅಗತ್ಯವಿದೆ ಎಂದು ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಹೇಳಿದ್ದಾರೆ. ಹೀಗಾಗಿ ಶೀಘ್ರವೇ ವರದಿ ವಿವರಗಳನ್ನು ಬಹಿರಂಗಗೊಳಿಸುವುದಾಗಿ ಹೇಳಿದರು.

ಇದಕ್ಕೇ ಆಕ್ಷೇಪ ವ್ಯಕ್ತಪಡಿಸಿದ ಕೆ.ಪಿ.ನಂಜುಂಡಿ, ಕಳೆದ ನಾಲ್ಕು ವರ್ಷಗಳಿಂದಲೂ ಸರ್ಕಾರ ಹೀಗೆ ಹೇಳುತ್ತಲೇ ಬಂದಿದೆ. ಇನ್ನೂ ವರದಿ ವಿವರ ಬಹಿರಂಗಗೊಳಿಸಿಲ್ಲ ಎಂದರು. ಆದಷ್ಟು ಬೇಗ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ವರದಿ ವಿವರ ಬಹಿರಂಗಗೊಳಿಸುವುದಾಗಿ ಸಚಿವ ಪೂಜಾರಿ ಭರವಸೆ ನೀಡಿದರು.

ಹಿಂದುಳಿದ ವರ್ಗ ಮೀಸಲು ನಿಶ್ಚಿತ: ನಾಗಮೋಹನದಾಸ್‌ ವರದಿ ಕುರಿತು ಪ್ರಸ್ತಾಪಿಸಿದ ಜೆಡಿಎಸ್‌ ಸದಸ್ಯ ಟಿ.ಎ.ಶರವಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಬಿ.ಶ್ರೀರಾಮುಲು, ಎಸ್‌.ಟಿ.ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ನೀಡಲು ಆಗಿರಲಿಲ್ಲ. ಆದರೆ ಇದೇ ಮೊದಲ ಬಾರಿ ಕರ್ನಾಟಕದಲ್ಲಿ ಹಿಂದುಳಿದ ವರ್ಗದ ಮೀಸಲು ಪ್ರಮಾಣ ಹೆಚ್ಚಿಸಲಾಗಿದೆ. ಇದಕ್ಕೆ ಅಗತ್ಯ ಇರುವ ಎಲ್ಲಾ ಕಾನೂನು ಕ್ರಮಗಳನ್ನು ಪೂರ್ಣಗೊಳಿಸಿ ಕೇಂದ್ರದಿಂದ ಆಗಬೇಕಿರುವ ಕೆಲಸಗಳನ್ನು ಪೂರ್ತಿ ಮಾಡಿ ಇದನ್ನು 9ನೇ ಪರಿಚ್ಛೇದಕ್ಕೆ ಸೇರಿಸಲಾಗುವುದು ಎಂದು ಹೇಳಿದರು.

ಬ್ರಾಹ್ಮಣ ಅಭಿವೃದ್ಧಿ ನಿಗಮದ ಹಣ ಬಿಡುಗಡೆಗೆ ಕ್ರಮ
ಸುವರ್ಣವಿಧಾನಸೌಧ: ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ ನೀಡಬೇಕಿರುವ ಬಾಕಿ ಹಣವನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಧಾರ್ಮಿಕ ದತ್ತಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

Advertisement

ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್‌ ಸದಸ್ಯ ಯು.ಬಿ.ವೆಂಕಟೇಶ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೋವಿಡ್‌ ಸಂದರ್ಭದಿಂದಾಗಿ ನಿಗಮಕ್ಕೆ ಅನುದಾನ ಪೂರೈಕೆಯಲ್ಲಿ ವ್ಯತ್ಯಾಸವಾಗಿರಬಹುದು. ಶೀಘ್ರವೇ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಅನುದಾನ ಪೂರೈಕೆ ಮಾಡಲಾಗುವುದು. ನಿಗಮದಿಂದ ಈ ಸಮುದಾಯದ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಸಾಕಷ್ಟು ಯೋಜನೆಗಳಿದ್ದು ಅವುಗಳನ್ನು ತಲುಪಿಸಲಾಗುವುದು ಎಂದು ಸಚಿವರು ಹೇಳಿದರು.

ರೈತ ಉತ್ಪಾದಕ ಕೇಂದ್ರಗಳಿಗೆ ಕೃಷಿ ಯಂತ್ರೋಪಕರಣ
ಸುವರ್ಣವಿಧಾನಸೌಧ: ಕೃಷಿ ಯಂತ್ರೋಪಕರಣಗಳ ನಿರ್ಮಾಣವನ್ನು ರೈತ ಉತ್ಪಾದಕ ಕೇಂದ್ರಗಳಿಗೆ ನೀಡಲು ಚಿಂತನೆ ನಡೆದಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಹೇಳಿದರು.

ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಅ.ದೇವೇಗೌಡ ಪ್ರಶ್ನೆಗೆ ಉತ್ತರಿಸಿ, ಕೃಷಿ ಯಂತ್ರೋಪಕರಣ ನಿರ್ಮಿಸುವ ಅನೇಕ ಖಾಸಗಿ ಕಂಪನಿಗಳು ಯಂತ್ರೋಪಕರಣ ನಿರ್ಮಿಸಿ ಕೊಡಲು ಹಿಂದೇಟು ಹಾಕಿವೆ. ಕೆಲವು ಕಂಪನಿಗಳು ಟೆಂಡರ್‌ ರದ್ದುಮಾಡಿಕೊಳ್ಳಲು ಮುಂದಾಗಿವೆ. ಒಟ್ಟು 400 ಕೋಟಿ ರೂ.ಗಳಷ್ಟು ಹಣವನ್ನು ಈಗಾಗಲೇ ಒದಗಿಸಲಾಗಿದೆ. ಅದರೆ ಕಂಪನಿಗಳ ಹಿಂದೇಟಿನಿಂದ ಯೋಜನೆಗೆ ಕೊಂಚ ಅಡೆತಡೆ ಎದುರಾಗಿವೆ. ಇದನ್ನು ಸರಿಪಡಿಸಿಕೊಂಡು ಯುವ ಮತ್ತು ಉತ್ಸಾಹಿ ಕಂಪನಿಗಳ ಜೊತೆಗೆ ರೈತ ಉತ್ಪಾದಕ ಕೇಂದ್ರಗಳಿಗೆ ಹೆಚ್ಚಿನ ಅವಕಾಶ ನೀಡಿ ಯಂತ್ರೋಪಕರಣಗಳನ್ನು ರೈತರಿಗೆ ಪೂರೈಕೆ ಮಾಡಲಾಗುವುದು ಎಂದು ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next