Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸದಸ್ಯ ಕಾರ್ಯದರ್ಶಿ ಸಹಿ ಮಾಡದ ಹಿನ್ನೆಲೆಯಲ್ಲಿ ವರದಿ ಸ್ವೀಕೃತವಾಗಿಲ್ಲ. ಆದರೆ, ಸಹಿ ಹಾಕದಿರಲು ಕಾರಣ ಏನು ಎಂದು ಅಂದಿನ ಸದಸ್ಯ ಕಾರ್ಯದರ್ಶಿಗೆ ನೋಟಿಸ್ ನೀಡಲಾಗಿದೆ ಎಂದರು.
ರಾಜ್ಯಾದ್ಯಂತ ಹಲವಾರು ಜಾತಿ, ಜನಾಂಗ ಹಾಗೂ ಸಮುದಾಯಗಳಿಂದ ಹಿಂದುಳಿದ ವರ್ಗಗಳ ಮೀಸಲು ಪಟ್ಟಿಯ ವಿವಿಧ ಪ್ರವರ್ಗಗಳಿಗೆ ಸೇರ್ಪಡೆಗೊಳಿಸುವಂತೆ 133 ಮನವಿಗಳು ಸಲ್ಲಿಕೆಯಾಗಿದ್ದು, ಇವುಗಳ ವಿಚಾರಣೆ ನಡೆಸಿ ಒಟ್ಟು 34 ವರದಿಗಳನ್ನು ಸಿದ್ಧಪಡಿಸಲಾಗಿದೆ. ಮನವಿ ಮೇರೆಗೆ ಆಯಾ ಜನಾಂಗಗಳು ವಾಸವಾಗಿರುವ ಸ್ಥಳಗಳಿಗೆ ಪ್ರವಾಸ ಕೈಗೊಂಡು, ಸಾಮಾಜಿಕ-ಶೈಕ್ಷಣಿಕ ಸ್ಥಿತಿಗತಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ 34 ವರದಿಗಳನ್ನು ತಯಾರಿಸಲಾಗಿದೆ. ಉಳಿದ 42 ಮನವಿಗಳ ವರದಿ ಬಾಕಿ ಇದ್ದು, ಸುಮಾರು 57 ಮನವಿಗಳಿಗೆ ಸಂಬಂಧಿಸಿದಂತೆ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಹೆಗ್ಡೆ ತಿಳಿಸಿದರು. ಈಗಾಗಲೇ ಹಿಂದುಳಿದ ವರ್ಗಗಳ ಮೀಸಲಾತಿ ಜಾತಿ ಪಟ್ಟಿಯಲ್ಲಿರುವ 46 ಅಲೆಮಾರಿ/ಅರೆ ಅಲೆಮಾರಿ ಜಾತಿಗಳಿಗೆ ಜಾತಿ ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ ಆಯಾ ಜಾತಿಯ ಮುಂದೆ ಅಲೆಮಾರಿ/ಅರೆ ಅಲೆಮಾರಿ ಎಂದು ನಮೂದಿಸಿ ಜಾತಿ ಪ್ರಮಾಣ ಪತ್ರವನ್ನು ನೀಡುವಂತೆ ಶಿಫಾರಸು ಮಾಡಲು ಆಯೋಗ ತೀರ್ಮಾನಿಸಿದೆ ಎಂದರು.
Related Articles
ಎಷ್ಟು ಸರಕಾರಿ ನೌಕರರು?
ರಾಜ್ಯದಲ್ಲಿ ಯಾವ ಜಾತಿಯ ಎಷ್ಟು ಜನ ಸರಕಾರಿ ಉದ್ಯೋಗದಲ್ಲಿದ್ದಾರೆ? ಯಾವ ಹುದ್ದೆಗಳಲ್ಲಿದ್ದಾರೆ? ಸಮು ದಾಯದ ವಿದ್ಯಾರ್ಥಿಗಳು ಎಷ್ಟು ಶಿಕ್ಷಣ ಪಡೆದಿದ್ದಾರೆ? ಇಂತಹ ಹಲವು ಮಹತ್ವದ ಮಾಹಿತಿಗಳನ್ನು ಕಲೆಹಾಕಲು ಮುಂದಾಗಿರುವ ಹಿಂದುಳಿದ ವರ್ಗಗಳ ಆಯೋಗ, ಈ ಸಂಬಂಧ ವಿವಿಧ ಇಲಾಖೆಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಮಾಹಿತಿ ನೀಡುವಂತೆ ಕೋರಿದೆ. ಈ ಮಾಹಿತಿ ಲಭ್ಯವಾದರೆ, ಯಾವ ಸಮುದಾಯಕ್ಕೆ ಎಷ್ಟು ಶಿಕ್ಷಣ ದೊರಕಿದೆ? ಯಾರಿಗೆ ಎಷ್ಟು ಸರ್ಕಾರಿ ಉದ್ಯೋಗ ದೊರಕಿದೆ ಎಂಬುದು ಸುಲಭವಾಗಿ ಗೊತ್ತಾಗಲಿದೆ. ಈ ಎಲ್ಲ ಮಾಹಿತಿಗಳ ಸಂಗ್ರಹಕ್ಕೆ ಬಿಇಎಲ್ (ಭಾರತ್ ಅರ್ತ್‌ಮೂವರ್ಸ್ ಲಿ.)ನಿಂದ ಸಾಫ್ಟ್ವೇರ್ ಕೂಡ ಸಿದ್ಧಪಡಿಸಲು ಮನವಿ ಮಾಡಲಾಗಿದೆ. ಆದರೆ, ಎಂಟು ತಿಂಗಳ ಹಿಂದಿನಿಂದ ಹಲವು ಬಾರಿ ಪತ್ರ ಬರೆದರೂ ಇದುವೆಗೆ ಶೇ. 50ರಷ್ಟು ಮಾಹಿತಿ ಮಾತ್ರ ಲಭ್ಯವಾಗಿದೆ ಎಂದು ಜಯಪ್ರಕಾಶ ಹೆಗ್ಡೆ ಬೇಸರ ವ್ಯಕ್ತಪಡಿಸಿದರು.
Advertisement