ಹೊಸದಿಲ್ಲಿ: I.N.D.I.A ಮೈತ್ರಿಕೂಟದಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವಿನ ಬಿರುಕು ಮತ್ತಷ್ಟು ಹೆಚ್ಚುತ್ತಿದೆ. ಸಮಾಜವಾದಿ ಪಕ್ಷ (ಎಸ್.ಪಿ)ದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಜಾತಿ ಗಣತಿ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಜಾತಿ ಗಣತಿ ನಡೆಸಿರಲಿಲ್ಲ ಎಂದು ನೆನಪಿಸಿದ್ದಾರೆ.
“ಸ್ವಾತಂತ್ರ್ಯದ ನಂತರ ಜಾತಿ ಗಣತಿ ನಡೆಸದ ಪಕ್ಷ ಕಾಂಗ್ರೆಸ್… ಲೋಕಸಭೆಯಲ್ಲಿ ಎಲ್ಲಾ ಪಕ್ಷಗಳು ಜಾತಿ ಗಣತಿಗೆ ಒತ್ತಾಯಿಸಿದಾಗ, ಅವರು ಜಾತಿ ಗಣತಿಯನ್ನು ನಡೆಸಲಿಲ್ಲ” ಎಂದು ಅಖಿಲೇಶ್ ಅವರು ಮಧ್ಯಪ್ರದೇಶದ ಚುನಾವಣಾ ಪ್ರಚಾರದಲ್ಲಿ ಹೇಳಿದ್ದಾರೆ.
“ಅವರಿಗೆ ಈಗ ಯಾಕೆ ಜಾತಿ ಗಣತಿ ಬೇಕಾಗಿದೆ? ಯಾಕೆಂದರೆ ಅವರ ಸಾಂಪ್ರದಾಯಿಕ ಮತ ಬ್ಯಾಂಕ್ ಈಗ ಅವರನ್ನು ಬಿಟ್ಟು ಹೋಗಿದೆ” ಎಂದು ಅಖಿಲೇಶ್ ಹೇಳಿದರು.
ಇದನ್ನೂ ಓದಿ:Cricket; ಸೆಹವಾಗ್, ಡಯಾನ ಎಡುಲ್ಜಿಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ
ಜಾತಿ ಗಣತಿ ನಡೆಸುವಂತೆ ಕಾಂಗ್ರೆಸ್ ಕೇಂದ್ರಕ್ಕೆ ಒತ್ತಾಯಿಸುತ್ತಿದೆ. ತಮ್ಮ ಬೇಡಿಕೆಯನ್ನು ಒಪ್ಪದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರದ ವಿರುದ್ಧ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಈತನ್ಮಧ್ಯೆ, ಇತರ ಇಂಡಿಯಾದ ಮೈತ್ರಿ ಪಕ್ಷಗಳು ಜಾತಿ ಗಣತಿಗಾಗಿ ತಮ್ಮ ಬೇಡಿಕೆಯನ್ನು ತೀವ್ರಗೊಳಿಸಿವೆ. ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ಜಾತಿ ಸಮೀಕ್ಷೆಯನ್ನು ನಡೆಸಿದೆ. ವಿರೋಧ ಪಕ್ಷಗಳ ನೇತೃತ್ವದ ಅನೇಕ ರಾಜ್ಯ ಸರ್ಕಾರಗಳು ಇದೇ ರೀತಿಯ ವ್ಯಾಯಾಮವನ್ನು ಘೋಷಿಸಿವೆ.