ಹೊಸದಿಲ್ಲಿ: ದೇಶದಲ್ಲಿ 2011ರಲ್ಲಿ ನಡೆಸಲಾಗಿದ್ದ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ (ಎಸ್‌ಇಸಿಸಿ) ವರ ದಿಯ ಅಂಶಗಳನ್ನು ಸದ್ಯಕ್ಕೆ ಬಿಡುಗಡೆ ಮಾಡಲಾಗುವುದಿಲ್ಲ ಎಂದು ಕೇಂದ್ರ ಸರಕಾರ ತಿಳಿಸಿದೆ.
ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಸದನಕ್ಕೆ ಮಾಹಿತಿ ನೀಡಿದ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರಾಯ್ ಜಾತಿ ವಿವರಗಳನ್ನು ಹೊರತುಪಡಿಸಿ ಇತರ ಅಂಶಗಳನ್ನು ಕ್ರೋಢೀಕರಿಸಲಾಗಿದೆ ಮತ್ತು ಅದನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ವೆಬ್‌ಸೈಟ್ ecc.gov.in/ ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದರು.
ಕೊರೊನಾ ಹಿನ್ನೆಲೆಯಲ್ಲಿ ಜನಗಣತಿಯನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದಿದ್ದಾರೆ ರಾಯ್.
2,544 ಸಾವು: ದೇಶಾದ್ಯಂತ 2021-22 ನೇ ಸಾಲಿನಲ್ಲಿ ಒಟ್ಟು 2,544 ಎನ್‌ಕೌಂಟರ್ ಮತ್ತು ಪೊಲೀಸ್ ಕಸ್ಟಡಿಯಲ್ಲಿ ಇರುವ ವೇಳೆ ಸಾವಿನ ಪ್ರಕರಣಗಳು ನಡೆದಿವೆ ಎಂದು ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರಾಯ್ ಹೇಳಿದ್ದಾರೆ. ಈ ಪೈಕಿ ಕರ್ನಾಟಕದಲ್ಲಿ 2020-21ನೇ ಸಾಲಿನಲ್ಲಿ ಪೊಲೀಸ್ ಕಸ್ಟಡಿಯಲ್ಲಿ 8 ಮತ್ತು 2021-22ನೇ ಸಾಲಿನಲ್ಲಿ 10 ಪ್ರಕರಣಗಳು ದೃಢಪಟ್ಟಿವೆ ಎಂದು ಸಚಿವರು ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ 2020-21ನೇ ಸಾಲಿನಲ್ಲಿ 451 ಮತ್ತು 2021-22ನೇ ಸಾಲಿನಲ್ಲಿ 501, ಮಧ್ಯಪ್ರದೇಶದಲ್ಲಿ 2020-21ನೇ ಸಾಲಿ ನಲ್ಲಿ 163, 2021-22ನೇ ಸಾಲಿನಲ್ಲಿ 201, ಮಹಾರಾಷ್ಟ್ರದಲ್ಲಿ 2020-21ನೇ ಸಾಲಿನಲ್ಲಿ 143, 2021-22ನೇ ಸಾಲಿ ನಲ್ಲಿ 197 ಪ್ರಕರಣಗಳು ದೃಢಪಟ್ಟಿವೆ ಎಂದು ಸಚಿವರು ತಿಳಿಸಿದ್ದಾರೆ.
ನ್ಯೂಸ್ ಪ್ರಿಂಟ್ ಆಮದು ಇಳಿಕೆ: ದೇಶದಲ್ಲಿ ಮುದ್ರಣ ಮಾಧ್ಯಮಕ್ಕೆ ಅಗತ್ಯವಾಗಿರುವ ನ್ಯೂಸ್ ಪ್ರಿಂಟ್ ಆಮದು ಪ್ರಮಾಣ ಇಳಿಕೆಯಾಗಿದೆ. 2017-18ನೇ ಸಾಲಿನಲ್ಲಿ 13.84 ಲಕ್ಷ ಕೆಜಿ ಆಮದಾಗಿದ್ದರೆ, 2020-21ನೇ ಸಾಲಿನಲ್ಲಿ ಅದರ ಪ್ರಮಾಣ 6.48 ಲಕ್ಷ ಕೆಜಿಗೆ ಇಳಿಕೆಯಾಗಿದೆ ಎಂದು ಸರಕಾರ ತಿಳಿಸಿದೆ.