Advertisement

ಬೆಳೆಗಾರರಿಗೆ ಕೈಕೊಟ್ಟ ಗೋಡಂಬಿ ಬೆಳೆ!

01:35 PM Jun 20, 2023 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹಣ್ಣುಗಳ ರಾಜ ಮಾವುನಷ್ಟೇ ಪ್ರಮುಖ ವಾಣಿಜ್ಯ ಬೆಳೆ ಆಗಿರುವ ಗೋಡಂಬಿ ಬೆಲೆ ಮಾರುಕಟ್ಟೆಯಲ್ಲಿ ಕುಸಿತ ಕಂಡಿದ್ದು, ಉತ್ತಮ ಬೆಲೆ ನಿರೀಕ್ಷಿಸಿದ್ದ ಬೆಳೆಗಾರರನ್ನು ಸಹಜವಾಗಿಯೇ ಬೆಲೆ ಕುಸಿತ ತೀವ್ರ ಕಂಗಾಲಾಗಿಸಿದೆ.

Advertisement

ಬೇಡಿಕೆ ಇಲ್ಲ: ಕಳೆದ ಜನವರಿ, ಫೆಬ್ರವರಿಯಲ್ಲಿ ಕಾಡಿದ ಸತತ ಮಳೆ, ಹವಾಮಾನ ವೈಪರೀತ್ಯ ಹಿನ್ನೆಲೆ ಗೋಡಂಬಿ ಗುಣಮಟ್ಟ ಕಳೆದುಕೊಂಡಿರುವ ಪರಿಣಾಮ ಹಾಗೂ ಆಂಧ್ರದ ರಾಜಮಂಡ್ರಿ ಮತ್ತಿತರ ಕಡೆ ಗೋಡಂಬಿ ನಿರೀಕ್ಷೆಗೂ ಮೀರಿ ಬೆಳೆದಿದ್ದರಿಂದ ಜಿಲ್ಲೆಯ ಗೋಡಂಬಿಗೆ ಬೇಡಿಕೆ ಇಲ್ಲದಂತಾಗಿ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಕಂಡಿದೆ.

ಗುಣಮಟ್ಟದ ಕೊರತೆ, ಸಂಕಷ್ಟ: ಸದ್ಯ ಚಿಂತಾಮಣಿ ಎಪಿಎಂಸಿ ಮಾರುಕಟ್ಟೆಯಲ್ಲಿ ಗೋಡಂಬಿ ಕ್ವಿಂಟಲ್‌ 4000 ರಿಂದ ಆರಂಭ ಗೊಂಡು 10,000 ಒಳಗೆ ಮಾತ್ರ ಮಾರಾಟಗೊಳ್ಳು ತ್ತಿದ್ದು, ಉತ್ತಮ ಬೆಲೆ ನಿರೀಕ್ಷಿಸಿದ್ದ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ. ಕಳೆದ ವರ್ಷ ಕ್ವಿಂಟಲ್‌ಗೆ ಆರಂಭದ ದರವೇ 9000-12,000 ರೂ. ವರೆಗೂ ಮಾರಾಟಗೊಂಡಿತ್ತು. ಉತ್ತಮ ಗುಣಮಟ್ಟದ ಗೋಡಂಬಿ 15,000 ರೂ. ವರೆಗೂ ದಾಟಿತ್ತು. ಆದರೆ ಗುಣಮಟ್ಟದ ಕೊರತೆ ಎಂಬ ಕಾರಣಕ್ಕೆ ಗೋಡಂಬಿಯನ್ನು ವ್ಯಾಪಾರಸ್ಥರು ಕೈಗೆ ಬಂದ ಬೆಲೆಗೆ ಕೇಳುತ್ತಿರುವುದು ಬೆಳೆಗಾರರನ್ನು ಸಂಕಷ್ಟಕ್ಕೀಡು ಮಾಡಿದೆ.

1,400 ಹೆಕ್ಟೇರ್‌ಲ್ಲಿ ಗೋಡಂಬಿ: ಜಿಲ್ಲೆಯಲ್ಲಿ 1,400 ಹೆಕ್ಟೇರ್‌ಗೂ ಅಧಿಕ ಪ್ರಮಾಣದಲ್ಲಿ ಗೋಡಂಬಿ ಬೆಳೆಯುವ ರೈತರಿದ್ದು, ವಾರ್ಷಿಕವಾಗಿ ಒಮ್ಮೆ ಬೆಳೆಯುವ ಗೋಡಂಬಿಗೆ ಸಾವಿರಾರು ರೂ. ವೆಚ್ಚ ಮಾಡಿ ಕೀಟನಾಶಕ ಸಿಂಪಡಣೆಯಿಂದ ಹಿಡಿದು ಕೊಯ್ಲು ಮಾಡುವವರೆಗೂ ರೈತರು ಸಾಕಷ್ಟು ಬಂಡವಾಳ ಹೂಡಿಕೆ ಮಾಡಬೇಕಾಗುತ್ತದೆ. ಆದರೆ ಈ ಬಾರಿ ಗುಣಮಟ್ಟದ ಜೊತೆಗೆ ಬೇಡಿಕೆ ಇಲ್ಲದ ಪರಿಣಾಮ ಗೋಡಂಬಿ ಬೆಲೆ ಕಳೆದುಕೊಂಡು ರೈತರು ಹಾಕಿದ ಬಂಡವಾಳವೂ ಸಿಗದೇ ಕಣ್ಣೀರು ಸುರಿಸುವಂತಾಗಿದೆ.

ಕಾರ್ಮಿಕರಿಗೂ ಕೆಲಸ ಇಲ್ಲ : ಗೋಡಂಬಿ ಸುಗ್ಗಿ ಶುರುವಾಗುತ್ತಿದ್ದಂತೆ ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿ ಮಾರುಕಟ್ಟೆಯಲ್ಲಿ ನಿತ್ಯ ಕನಿಷ್ಠ ಎರಡು ತಿಂಗಳ ಕಾಲ ನೂರಾರು ಕೂಲಿ ಕಾರ್ಮಿಕರಿಗೆ, ಹಮಾಲಿಗಳಿಗೆ ಕೆಲಸ ಸಿಗುತ್ತಿತ್ತು. ಆದರೆ ಈ ಬಾರಿ ಫ‌ಸಲು ಸರಿಯಾಗಿ ಬಾರದ ಕಾರಣ ಕೂಲಿ ಕಾರ್ಮಿಕರಿಗೂ ಇತ್ತ ಕೆಲಸ ಇಲ್ಲದಂತಾಗಿದೆ. ಈಗ ದಿನಕ್ಕೆ 200 ರಿಂದ 300 ಚೀಲ ಬಿಟ್ಟರೆ ಹೆಚ್ಚು ಗೋಡಂಬಿ ಬರುತ್ತಿಲ್ಲ. ಅದರಲ್ಲೂ ಗೋಡಂಬಿ ಮಾರುಕಟ್ಟೆ ನಡೆಯುವುದೇ ವಾರದಲ್ಲಿ ಮೊದಲ ಸೋಮವಾರ ಮಾತ್ರ.

Advertisement

ಆಷಾಢದಲ್ಲಿ ಇನ್ನಷ್ಟು ಕುಸಿತ: ಸದ್ಯ ಆಷಾಢ ಮಾಸ ಶುರುವಾಗಿರುವ ಹಿನ್ನೆಲೆಯಲ್ಲಿ ಗೋಡಂಬಿ ಬೆಲೆ ಇನ್ನಷ್ಟು ಕುಸಿಯುವ ಆತಂಕ ಬೆಳೆಗಾರರಲ್ಲಿ ಆವರಿಸಿದೆ. ಆಷಾಢದಲ್ಲಿ ಯಾವುದೇ ಮದುವೆ, ನಾಮಕರಣ, ಗೃಹ ಪ್ರವೇಶ ಮತ್ತಿತರ ಶುಭ ಸಮಾರಂಭಗಳು ನಡೆಯುವುದಿಲ್ಲ. ಹಾಗಾಗಿ ಗೋಡಂಬಿ ಪಪ್ಪುನ್ನು ಬಳಸುವುದು ತೀರಾ ಕಡಿಮೆ. ಆದ್ದರಿಂದ ಆಷಾಢ ಮಾಸ ಕಳೆಯುವರೆಗೂ ಗೋಡಂಬಿ ಬಳಸುವುದು ಅಪರೂಪವಾಗಿರುವುದರಿಂದ ಮಾರುಕಟ್ಟೆಯಲ್ಲಿ ಖರೀದಿಗೆ ವರ್ತಕರು ಹೆಚ್ಚು ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಲೆ ಕುಸಿಯಬಹುದೆಂದು ವರ್ತಕರು ಹೇಳುತ್ತಿದ್ದಾರೆ.

ಫ‌ಸಲು ಭಾರೀ ಕಡಿಮೆ: ಸಾಮಾನ್ಯವಾಗಿ ಫ‌ಸಲು ಕಡಿಮೆ ಆದರೆ ಮಾರುಕಟ್ಟೆಯಲ್ಲಿ ಗೋಡಂಬಿಗೆ ಬೇಡಿಕೆ ಸೃಷ್ಠಿಯಾಗಿ ಬೆಲೆ ಕೂಡ ಹೆಚ್ಚಳ ಆಗುತ್ತದೆ. ಆದರೆ ಈ ಬಾರಿ ಮಳೆಯ ಜೊತೆಗೆ ಹವಾಮಾನ ವೈಪರೀತ್ಯದಿಂದ ವಿಪರೀತ ಬಿಸಿಲು ಕಾದ ಪರಿಣಾಮ ಗೋಡಂಬಿ ಸರಿಯಾಗಿ ಫ‌ಸಲು ಬಿಟ್ಟಿಲ್ಲ. ಎರಡು, ಮೂರು ತಿಂಗಳ ಹಿಂದೆ ಆಲಿಕಲ್ಲು ಸಹಿತ ಬಿರುಗಾಳಿ ಮಳೆ ಬಿದ್ದು ಅಪಾರ ಪ್ರಮಾಣದಲ್ಲಿ ಗೋಡಂಬಿ ಹೂ ನಾಶವಾಗಿ ಫ‌ಸಲು ಸರಿಯಾಗಿ ಬಂದಿಲ್ಲ. ಹೀಗಾಗಿ ಬೇಡಿಕೆಗೆ ತಕ್ಕಂತೆ ಗೋಡಂಬಿ ಕೂಡ ಮಾರುಕಟ್ಟೆಗೆ ಬಂದಿಲ್ಲ. ಆದರೂ ನೆರೆ ಹೊರೆ ರಾಜ್ಯಗಳಲ್ಲಿ ಗೋಡಂಬಿ ನಿರೀಕ್ಷೆಗೂ ಮೀರಿ ಬೆಳೆದಿರುವುದರ ಪರಿಣಾಮ ಜಿಲ್ಲೆಯ ಗೋಡಂಬಿಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಂತಾಗಿದೆ ಎನ್ನುತ್ತಾರೆ ಗೋಡಂಬಿ ವರ್ತಕರಾದ ಮಂಜುನಾಥ.

ಜಿಲ್ಲೆಯಲ್ಲಿ 1,400 ಹೆಕ್ಟೇರ್‌ ಪ್ರದೇಶದಲ್ಲಿ ಗೋಡಂಬಿ ಬೆಳೆಯಲಾಗುತ್ತಿದೆ. ಗುಣಮ ಟ್ಟದ ಕೊರತೆಯಿಂದ ಗೋಡಂಬಿ ಬೆಲೆ ತುಸು ಕಡಿಮೆ ಆಗಿರಬಹುದು. ಆದರೆ ಬೆಲೆ ಕುಸಿತ ಕಂಡಾಗ ಮಾರಾಟ ಮಾಡುವುದರ ಬದಲು ಶೇಖರಣೆ ಮಾಡಿಟ್ಟುಕೊಂಡು ಉತ್ತಮ ಬೆಲೆ ಬಂದಾಗ ಮಾರಾಟ ಮಾಡಿದರೆ ರೈತರಿಗೆ ಅನುಕೂಲ. ಶಿಡ್ಲಘಟ್ಟ ತಾಲೂಕಿನಲ್ಲಿ ಬಹಳಷ್ಟು ರೈತರು ಗೋಡಂಬಿ ಮಾರಾಟ ಮಾಡದೇ ಶೇಖರಣೆ ಮಾಡುತ್ತಿದ್ದಾರೆ. ● ಗಾಯತ್ರಿ, ಉಪ ನಿರ್ದೇಶಕರು, ತೋಟಗಾರಿಕಾ ಇಲಾಖೆ

ಈ ಬಾರಿ ಜನವರಿ, ಫೆಬ್ರವರಿ ತಿಂಗಳಲ್ಲಿ ಮಳೆ ಜಾಸ್ತಿ ಬಿದ್ದು ಹೂ ನಾಶವಾಗಿ ಫ‌ಸಲು ಸರಿಯಾಗಿ ಬಂದಿಲ್ಲ. ಸೀಮಾಂಧ್ರದ ರಾಜಮಂಡ್ರಿ ಕಡೆ ಗೋಡಂಬಿ ಕೂಡ ನಮ್ಮ ಕಡೆ ಮಾರಾಟಕ್ಕೆ ಬರುತ್ತಿದೆ. ಪ್ರತಿ ವರ್ಷ ಏಪ್ರಿಲ್‌, ಮೇ ತಿಂಗಳಲ್ಲಿ ಗೋಡಂಬಿ ಮಾರುಕಟ್ಟೆಗೆ ಬರುತ್ತಿತ್ತು. ಜೂನ್‌ ಅಂತ್ಯಕ್ಕೆ ಸಿಸನ್‌ ಮುಗಿಯುತ್ತಿತ್ತು. ಈ ಬಾರಿ ಗೋಂಡಬಿ ತಿಂಗಳ ತಡವಾಗಿ ಮಾರುಕಟ್ಟೆ ಪ್ರವೇಶಿಸಿದೆ. ಆಷಾಢ ಶುರುವಾಗಿರುವುದರಿಂದ ಬೇಡಿಕೆ ಕಡಿಮೆಯಿದ್ದು, ಬೆಲೆ ಕುಸಿದಿದೆ. ● ಜಯರಾಮ್‌, ಗೋಡಂಬಿ ವ್ಯಾಪಾರಿ, ಚಿಂತಾಮಣಿ

– ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next