ಬೆಳಗಾವಿ: ಹೋರಾಟಗಳ ಸಂದರ್ಭಗಳಲ್ಲಿ ರೈತರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವ ಬಗ್ಗೆ ಸಚಿವ ಸಂಪುಟದ ಉಪ ಸಮಿತಿ ರಚಿಸಲಾಗಿದೆ. ಉಪ ಸಮಿತಿಯು ಆಯಾ ಎಸ್‌ಪಿಗಳಿಂದ ಮಾಹಿತಿ ಪಡೆಯುತ್ತಿದ್ದು, ವರದಿ ಸಲ್ಲಿಸಿದ ತಕ್ಷಣ ಸಕಾರಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಹಿರೇಬಾಗೇವಾಡಿಯಲ್ಲಿ ಪೊಲೀಸ್ ವಸತಿ ಸಮುತ್ಛಯಗಳ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ವೇಳೆ ಭಾರತೀಯ ಕೃಷಿಕ ಸಮಾಜ ವತಿಯಿಂದ ರಾಜ್ಯಾಧ್ಯಕ್ಷ ಸಿದ್ದಗೌಡ ಮೋದಗಿ ಅವರು ಈ ಕುರಿತು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಸಚಿವರು, ಕೂಡಲೇ ಈ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದರು.
ಕಳಸಾ-ಬಂಡೂರಿ ಯೋಜನೆಯನ್ನು ಬೇಗ ಪೂರ್ಣಗೊಳಿಸಲು ಸರ್ಕಾರ ಬದ್ಧವಾಗಿದೆ. ಈ ಯೋಜನೆ ಕಾಮಗಾರಿಗಳಿಗೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಸಮ್ಮತಿ ನೀಡಿದೆ. ಕಾಮಗಾರಿ ಆರಂಭಕ್ಕೆ ಸರ್ಕಾರ ತಕ್ಷಣ ಕ್ರಮ ಜರುಗಿಸಲಿದೆ. ಹಾವೇರಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಹಾಗೂ ಜಿಲ್ಲಾ ಸಹಕಾರಿ ಬ್ಯಾಂಕ್ ಸ್ಥಾಪನೆಯ ಬೇಡಿಕೆಗೆ ಸರ್ಕಾರ ಸ್ಪಂದಿಸಲಿದೆ. ಶೇಷಗಿರಿ ಅಣೆಕಟ್ಟಿನ ಬಗ್ಗೆಯೂ ಗಮನ ಹರಿಸಲಾಗುವುದು ಎಂದರು.
ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ರಾಜೀನಾಮೆ ನೀಡಲು ಸಿದ್ದರಾಮಯ್ಯ ಅವರೇ ಮೂಲ ಕಾರಣ. ಅವರೇ ನಮ್ಮನ್ನು ಪಕ್ಷದಿಂದ ಬೇರೆ ಕಡೆಗೆ ಕಳುಹಿಸಿದವರು ಎಂದು ಈಗಾಗಲೇ ಅನೇಕ ಬಾರಿ ಅನರ್ಹ ಶಾಸಕರು ಹೇಳಿದ್ದಾರೆ. ಈ ಹೇಳಿಕೆಗಳ ಬಗ್ಗೆಯೇ ತನಿಖೆ ಆಗಲಿ.
-ಬಸವರಾಜ ಬೊಮ್ಮಾಯಿ, ಗೃಹ ಸಚಿವಡಿ