ಪಡುಬಿದ್ರಿ: ವಿದ್ಯುತ್ ಪ್ರವಹಿಸಿ ಕಾರ್ಮಿಕ ಹಾವೇರಿ ಜಿಲ್ಲೆ ಹುನಗುಂದ ತಾ| ಐಹೊಳೆ ಗ್ರಾಮದ ನಿಂಗರಾಜು (19) ಪಡುಬಿದ್ರಿಯ ಭಾವ್ಯ ಪೆಟ್ರೋಲ್ ಬಂಕ್ ವಠಾರದಲ್ಲಿ ಸಾವನ್ನಪ್ಪಿದ್ದಾರೆ.
ಕರೆಂಟ್ ಅರ್ತ್ ಹೊಂಡ ತೋಡಲು ಯಾವುದೇ ಮುಂಜಾಗ್ರತ ಕ್ರಮಗಳನ್ನು ವಹಿಸದೆ ಕಾರ್ಮಿಕನನ್ನು ದುಡಿಸಲಾದ ಪರಿಣಾಮ ಈ ಅವಘಡ ಸಂಭವಿಸಿದೆ ಎನ್ನಲಾಗಿದ್ದು, ಈ ಕುರಿತು ಭಾವ್ಯ ಪೆಟ್ರೋಲ್ ಬಂಕ್ ಮಾಲಕ ಸುರೇಶ್ ಶೆಟ್ಟಿ ಹಾಗೂ ವಿದ್ಯುತ್ ಗುತ್ತಿಗೆದಾರ ಶಿವರಾಮ ಶೆಟ್ಟಿ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಗುರುವಾರ ದಾಖಲಾಗಿದೆ.
ಬೆಳಗ್ಗೆ ಪಡುಬಿದ್ರಿ ಪೇಟೆಯಲ್ಲಿ ನಾಲ್ವರು ಕಾರ್ಮಿಕರನ್ನು ಗೊತ್ತುಪಡಿಸಿ ಪಟ್ರೋಲ್ ಬಂಕ್‌ಗೆ ಕರೆಸಿ ಕೆಲಸಕ್ಕೆ ನಿಯೋಜಿಸಲಾಗಿತ್ತು. ಪೆಟ್ರೋಲ್ ಬಂಕ್ ಮಾಲಕ, ಗುತ್ತಿಗೆದಾರನಾಗಲಿ ಹೊಂಡ ತೋಡುವಲ್ಲಿ ಭೂಮಿಯ ಅಡಿ ವಿದ್ಯುತ್ ಕೇಬಲ್‌ಗಳನ್ನು ಅಳವಡಿಸಿರುವ ಬಗ್ಗೆ ಕಾರ್ಮಿಕರಿಗೆ ತಿಳಿಸಿರಲಿಲ್ಲ. ಮುಂಜಾಗ್ರತ ಕ್ರಮವಾಗಿ ಕೆಲಸದ ವೇಳೆ ಧರಿಸಲು ಕೈಗವಚಗಳನ್ನೂ ನೀಡಿರಲಿಲ್ಲ. ವಿದ್ಯುತ್ ಕೇಬಲ್ ಬಗೆಗೆ ಯಾವುದೇ ಅನುಮಾನವಾಗಲೀ, ತಿಳಿವಳಿಕೆಯಾಗಲೀ ಇಲ್ಲದ ಮೃತ ನಿಂಗರಾಜು, ಕಬ್ಬಿಣದ ಸೂಲಂಗಿಯ ಮೂಲಕ ಹೊಂಡ ತೋಡಲು ಬೀಸಿ ಹೊಡೆದಾಗ ವಿದ್ಯುತ್ ಪ್ರವಹಿಸಿದೆ.
ಆ ಕೂಡಲೇ ತನ್ನ ಚಿಕ್ಕಪ್ಪನನ್ನು “ಕಾಕಾ’ ಕರೆಂಟ್ ಎಂದು ಕೂಗಿರುವ ನಿಂಗರಾಜು ಸೂಲಂಗಿಯನ್ನು ಹಿಡಿದಿರುತ್ತಲೇ ನಿಂತಿದ್ದರು. ಚಿಕ್ಕಪ್ಪ ಮಂಗಳಪ್ಪ, ನಿಂಗರಾಜುವನ್ನು ಮುಟ್ಟಿದಾಗಲೂ ವಿದ್ಯುತ್ ಪ್ರವಹಿಸಿದೆ. ಆ ಕೂಡಲೇ ಮಂಗಳಪ್ಪ ಕೂಗಿದಾಗ ಪೆಟ್ರೋಲ್ ಬಂಕ್‌ನಲ್ಲಿನ ಕೆಲಸದಾಳು ವಿದ್ಯುತ್‌ನ ಮೈನ್ ಸ್ವಿಚ್ಚನ್ನು ಆಫ್ ಮಾಡಿದ್ದಾರೆ. ನೆಲಕ್ಕೆ ಬಿದ್ದ ನಿಂಗರಾಜುನನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಿ ನಿಂಗರಾಜು ಮೃತಪಟ್ಟಿದ್ದಾರೆ.