ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿ ಕೋಟಾಗಳನ್ನು ರದ್ದುಗೊಳಿಸುವಂತೆ ಪ್ರತಿಪಾದಿಸುತ್ತಿರುವ ನಕಲಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಈ ಕುರಿತು ದೆಹಲಿ ಪೊಲೀಸರು ಭಾನುವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನಕಲಿ ವಿಡಿಯೋ ವೈರಲ್ ಆಗುತ್ತಿರುವ ಕುರಿತು ಕೇಂದ್ರ ಗೃಹ ಸಚಿವಾಲಯ ದೂರು ನೀಡಿದ್ದು, ನಕಲಿ ವಿಡಿಯೋ ಮೂಲಕ ಜನರಲ್ಲಿ ತಪ್ಪು ಮಾಹಿತಿಗಳನ್ನು ಹರಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದೆ.
ಅಮಿತ್ ಶಾ ಅವರ ನಕಲಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಕಿಡಿಕಾರಿದ ಬಿಜೆಪಿ ವಿಡಿಯೋದ ಸತ್ಯಾಸತ್ಯತೆಯ ಬಗ್ಗೆ ದೆಹಲಿ ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸಬೇಕು ಅಲ್ಲದೆ ಅಮಿತ್ ಶಾ ಅವಳ ಮೂಲ ಹೇಳಿಕೆಯನ್ನು ತಿರುಚಿ ವಿಡಿಯೋ ಎಡಿಟ್ ಮಾಡಲಾಗಿದೆ ಈ ರೀತಿ ಮಾಡಿದ ವ್ಯಕ್ತಿಯನ್ನು ಕೂಡಲೇ ಪತ್ತೆ ಹಚ್ಚಿ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದೆ.
ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ ಕೂಡ ನಕಲಿ ವಿಡಿಯೋ ಕುರಿತು ಕಿಡಿಕಾರಿದ್ದು ‘ಕಾಂಗ್ರೆಸ್ ಎಡಿಟ್ ಮಾಡಿದ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿದ್ದು ಈ ವಿಡಿಯೋ ಸಂಪೂರ್ಣ ನಕಲಿಯಾಗಿದೆ ಇದರಲ್ಲಿ ಯಾವುದೇ ಸತ್ಯ ಇಲ್ಲ, ಇದರ ಹಿಂದೆ ಹಿಂಸಾಚಾರ ನಡೆಸುವ ಉದ್ದೇಶ ಇದ್ದರೂ ಇರಬಹುದು. ಎಸ್‌ಸಿ/ಎಸ್‌ಟಿಗಳು ಮತ್ತು ಒಬಿಸಿಗಳ ಪಾಲನ್ನು ಕಡಿಮೆ ಮಾಡಿದ ನಂತರ, ಧರ್ಮದ ಆಧಾರದ ಮೇಲೆ ಮುಸ್ಲಿಮರಿಗೆ ನೀಡಲಾದ ಅಸಂವಿಧಾನಿಕ ಮೀಸಲಾತಿಯನ್ನು ತೆಗೆದುಹಾಕುವ ಬಗ್ಗೆ ಗೃಹ ಸಚಿವ ಅಮಿತ್ ಶಾ ಮಾತನಾಡಿದರು. ಈ ನಕಲಿ ವಿಡಿಯೋವನ್ನು ಹಲವು ಕಾಂಗ್ರೆಸ್ ವಕ್ತಾರರು ಪೋಸ್ಟ್ ಮಾಡಿದ್ದಾರೆ. ಯಾರು ಈ ವಿಡಿಯೋ ಮಾಡಿದ್ದರೋ ಅವರು ಕಾನೂನು ಪರಿಣಾಮಗಳಿಗೆ ಸಿದ್ಧರಾಗಿರಬೇಕು, ”ಎಂದು ಹೇಳಿದರು.