ಕಾರ್ಕಳ: ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಹೊಸ್ಮಾರು ನಿವಾಸಿ ವಿವಾಹಿತ ಸಂತೋಷ್ ದೇವಾಡಿಗ ಯಾನೆ ಹರಿತನಯ (43) ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಈದು ಮಾಪಾಲು ಬಳಿ ಜು. 20ರಂದು ಪತ್ತೆಯಾಗಿದ್ದಾರೆ.
ವಾರದ ಹಿಂದೆ ನಗರದ ಮಾರುಕಟ್ಟೆ ರಸ್ತೆಯ ಕಚೇರಿಯಲ್ಲಿ ಉದ್ಯೋಗಿಯಾಗಿದ್ದ ಪ್ರಮೀಳಾ (30) ಕರ್ತವ್ಯ ನಿರ್ವಹಿಸುತ್ತಿದ್ದ ಕಚೇರಿಯಲ್ಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವಿನ ಬಗ್ಗೆ ನಾನಾ ಅನುಮಾನಗಳು ವ್ಯಕ್ತಗೊಂಡಿದ್ದವು.
ಮಹಿಳೆಯ ದೂರದ ಸಂಬಂಧಿ ಸಂತೋಷ್ ಯಾನೆ ಹರಿತನಯ ಕಿರುಕುಳ ನೀಡುತ್ತಿದ್ದ ಬಗ್ಗೆ ಪ್ರಮೀಳಾ ಅವರು ತನ್ನ ಸ್ನೇಹಿತೆ ಜತೆ ಆತ್ಮಹತ್ಯೆಗೂ ಮುನ್ನ ಹೇಳಿಕೊಂಡಿದ್ದರು. ಘಟನೆ ನಡೆದ ಅನಂತರ ಈ ವಿಚಾರವನ್ನು ಸ್ನೇಹಿತೆ ಪ್ರಮೀಳಾ ಅವರ ಸಹೋದರನಿಗೆ ತಿಳಿಸಿದ್ದರು.
ಸಂತೋಷ್ ಕಿರುಕುಳದಿಂದಲೇ ಸಹೋದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಮೀಳಾ ಸಹೋದರ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದರು. ಅದರಂತೆ ಆತ್ಮಹತ್ಯೆಗೆ ಕಿರುಕುಳ ನೀಡಿದ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪೊಲೀಸರು ಸಂತೋಷ್‌ಗಾಗಿ ಹುಡುಕಾಟ ಆರಂಭಿಸಿದ್ದರು. ಈ ಬಗ್ಗೆ ಭಯಗೊಂಡ ಸಂತೋಷ್ ತಲೆಮರೆಸಿಕೊಂಡಿದ್ದ. ಗುರುವಾರ ಶವವಾಗಿ ಪತ್ತೆಯಾಗಿದ್ದಾರೆ. ಮೃತ ಸಂತೋಷ್ ಪತ್ನಿ ಹಾಗೂ ಪುಟ್ಟ ಮಗುವನ್ನು ಅಗಲಿದ್ದಾರೆ.
ಪ್ರಕರಣಕ್ಕೆ ತಿರುವು
ಕೌಟುಂಬಿಕ ಸಮಸ್ಯೆಯಿಂದ ಪ್ರಮೀಳಾ ಆತ್ಮಹತ್ಯೆ ಗೈದಿರಬಹುದು ಎಂದು ಮೇಲ್ನೋಟಕ್ಕೆ ಹೇಳಲಾಗಿತ್ತು. ಪ್ರಮೀಳಾ ಅವರ ಆತ್ಮಹತ್ಯೆಯ ನೋವು ತಾಳಲಾರದೆ ತನ್ನ ಬಳಿ ಪ್ರಮೀಳಾ ಹೇಳಿಕೊಂಡಿದ್ದ ಕೆಲವು ವಿಷಯಗಳನ್ನು ಅವರ ಸಹೋದರನಿಗೆ ಪ್ರಮೀಳಾ ಸ್ನೇಹಿತೆ ತಿಳಿಸಿದ್ದರು. ಇಲ್ಲಿಂದ ಪ್ರಕರಣ ತಿರುವು ಪಡೆದುಕೊಂಡಿತ್ತು.