ವಿಶೇಷ ವರದಿ-ಕಲಬುರಗಿ: ಶತಮಾನದ ಭೀಕರ ಮೇಘ ಸ್ಫೋಟದ ಅತಿವೃಷ್ಟಿ ನಡುವೆ ಅಳಿದುಳಿದ ತೊಗರಿಗೆ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ಪ್ರಕಟಿಸದೇ ಇರುವುದು ತೊಗರಿ ರೈತನಿಗೆ ಸಂಕ್ರಮಣ ಮತ್ತಷ್ಟು ಕಹಿ ಮಾಡಿದೆ. ಹಿಂದಿನ ವರ್ಷಗಳಿಗಿಂತ ಈ ಸಲ ಸರ್ಕಾರ ಬೇಗನೇ ಖರೀದಿ ಕೇಂದ್ರಗಳನ್ನು ಆರಂಭ ಮಾಡಲಾಗಿದೆ ಎಂದು ರೈತ ಸ್ವಲ್ಪ ಖುಷಿಯಾಗಿದ್ದ. ಆದರೆ ರಾಜ್ಯ ಸರ್ಕಾರ ಕೇಂದ್ರದ 6000 ರೂ. ಬೆಂಬಲ ಬೆಲೆಗೆ ನಯಾಪೈಸೆಯೂ ಪ್ರೋತ್ಸಾಹ ಧನ
ನೀಡದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆಯಲ್ಲದೇ ಸಂಭ್ರಮದ ಸಂಕ್ರಾಂತಿ ಮಂಕು ಕವಿದಿದೆ.
ಕೇಂದ್ರದ ಬೆಂಬಲ ಬೆಲೆ ಕ್ವಿಂಟಲ್‌ಗೆ 6000 ರೂ. ದರದಲ್ಲಿ ಖರೀದಿ ಮಾಡಲು ಜಿಲ್ಲಾದ್ಯಂತ 173 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಮೂರು ವಾರಗಳಿಂದ ಬರೀ ನೋಂದಣಿ ಪ್ರಕ್ರಿಯೆಯನ್ನೇ ಮುನ್ನೆಡೆಸಿಕೊಂಡು ಬರಲಾಗುತ್ತಿದೆ. ಇನ್ನೂ ಖರೀದಿ ಪ್ರಕ್ರಿಯೆ ಆರಂಭವಾಗಿಲ್ಲ. ಕಳೆದ ವರ್ಷ 2019-2020ನೇ ಸಾಲಿಗೆ ಇದೇ ಬಿಜೆಪಿ ಸರ್ಕಾರ 300 ರೂ. ಮಾತ್ರ ಪ್ರೋತ್ಸಾಹ ಧನ ನೀಡಿತ್ತು.
ಆವಾಗ ಕೇಂದ್ರದ 5800 ರೂ. ಬೆಂಬಲ ಬೆಲೆಗೆ ರಾಜ್ಯ ಸರ್ಕಾರದ 300 ಸೇರಿ ರೈತರಿಂದ 6100 ರೂ. ದರದಲ್ಲಿ ಖರೀದಿ ಮಾಡಲಾಗಿತ್ತು. ಆದರೆ ಈಗ ಉಲ್ಟಾ 100 ರೂ. ಕಡಿಮೆಯಾಗಿ ಕೇಂದ್ರದ 6000 ರೂ. ದರದಲ್ಲೇ ಖರೀದಿಗೆ ಮುಂದಾಗಲಾಗಿದೆ.
2018-19ರ ಸಾಲಿನಲ್ಲಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸರ್ಕಾರ ಕೇಂದ್ರದ ಬೆಂಬಲ ಬೆಲೆಗೆ 425 ರೂ. ಪ್ರೋತ್ಸಾಹ ಧನ ನೀಡಿತ್ತು. ಆಗ ಕೇಂದ್ರ ಸರ್ಕಾರದ ಕ್ವಿಂಟಲ್‌ಗೆ 5675 ರೂ. ಇದ್ದ ಬೆಂಬಲ ಬೆಲೆಗೆ ರಾಜ್ಯ ಸರ್ಕಾರದ 425 ರೂ. ಸೇರಿಸಿ 6100 ರೂ. ದರದಲ್ಲಿ ತೊಗರಿ ಖರೀದಿ ಮಾಡಲಾಗಿತ್ತು. ಆ ವರ್ಷ ತೊಗರಿ ಬಂಪರ್ ಬೆಳೆ ಬಂದಿತ್ತು. ಈ ವರ್ಷ ಶೇ. ಅರ್ಧಕ್ಕಿಂತ ಹೆಚ್ಚಿನ ಪ್ರಮಾಣದ ತೊಗರಿ ಹಾನಿಯಾಗಿದ್ದರಿಂದ ರಾಜ್ಯ ಸರ್ಕಾರ ಕನಿಷ್ಠ 500 ರೂ. ಪ್ರೋತ್ಸಾಹ ಧನ ಪ್ರಕಟಿಸಬೇಕಿತ್ತು.
ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಎರಡು ತಿಂಗಳ ಹಿಂದೆ 7000 ರೂ. ದರವಿತ್ತು. ಈಗ 5800 ರೂ. ಇಳಿದಿದೆ. ಒಂದು ವೇಳೆ ರಾಜ್ಯ ಸರ್ಕಾರ 500 ರೂ. ನೀಡಿದಲ್ಲಿ ಮಾರುಕಟ್ಟೆಯಲ್ಲೂ ದರ ಹೆಚ್ಚಳವಾಗಿ ಎಲ್ಲ ರೈತರಿಗೆ ಸಹಾಯವಾಗುತ್ತದೆ. ಪ್ರೋತ್ಸಾಹ ಧನ ನೀಡದ ಹಿನ್ನೆಲೆ ರೈತರು ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಲು ಹಿಂದೇಟು ಹಾಕುತ್ತಿದ್ದಾರೆ. ಹಿಂದಿನ ವರ್ಷಗಳಲ್ಲಿ 1.50 ಲಕ್ಷ ರೈತು ಹೆಸರು ನೋಂದಾಯಿಸಿದ್ದರೆ ಈ ವರ್ಷ 40 ಸಾವಿರ ದಾಟಿಲ್ಲ. ರೈತರು ಆಸಕ್ತಿ ತೋರದ ಹಿನ್ನೆಲೆಯಲ್ಲಿ ಸರ್ಕಾರ ಮತ್ತೆ ನೋಂದಣಿ ದಿನಾಂಕ ವಿಸ್ತರಿಸಿದೆ.
ಬಿಜೆಪಿ ಶಾಸಕರು ರಾಮಮಂದಿರ ನಿಧಿ ಸಂಗ್ರಹದಲ್ಲಿ ಬಿಜಿ
ಕಲ್ಯಾಣ ಕರ್ನಾಟಕ ತೊಗರಿ ರೈತರು ರಾಜ್ಯ ಸರ್ಕಾರದಿಂದ ನಯಾಪೈಸೆ ಪ್ರೋತ್ಸಾಹ ಧನ ನೀಡದಿರುವ ಬಗ್ಗೆ ಬೊಬ್ಬೆ ಹಾಕುತ್ತಿದ್ದರೆ ಆಡಳಿತಾರೂಢ ಬಿಜೆಪಿ ಶಾಸಕರು ಹಾಗೂ ಮುಖಂಡರು ರಾಮಮಂದಿರ ನಿರ್ಮಾಣದ ನಿಧಿ ಸಂಗ್ರಹದಲ್ಲಿ ಬ್ಯುಜಿಯಾಗಿದ್ದಾರೆ. ಬಿಜೆಪಿಗರಿಗೆ ರೈತರ ಬಗ್ಗೆ ಎಳ್ಳು ಕಾಳಷ್ಟು ಕಾಳಜಿ ಇಲ್ಲ ಎಂಬುದು ಈ ಮೂಲಕ ನಿರೂಪಿಸುತ್ತದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೇಳಿಕೆಗೆ ಸಿಮೀತ ಕಾಂಗ್ರೆಸ್ ಹೋರಾಟ
ಕೇಂದ್ರದ ಬೆಂಬಲ ಬೆಲೆಗೆ ರಾಜ್ಯ ಸರ್ಕಾರ ತನ್ನ ಪ್ರೋತ್ಸಾಹ ಧನ ನೀಡದಿದ್ದರೆ ಹೋರಾಟ ಮಾಡುವುದಾಗಿ ಕಾಂಗ್ರೆಸ್ ಮೂರು ವಾರಗಳ ಹಿಂದೆಯೇ ಎಚ್ಚರಿಕೆ ನೀಡಿತ್ತು. ಆದರೆ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ| ಅಜಯಸಿಂಗ್ ಹಾಗೂ ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಪತ್ರಿಕಾ ಹೇಳಿಕೆಗಳನ್ನು ಮಾತ್ರ ನೀಡಿದ್ದಾರೆ. ಕಾಂಗ್ರೆಸ್ ಪಕ್ಷವೂ ವಿಪಕ್ಷವಾಗಿ ಹೋರಾಟ ಮಾಡುವಲ್ಲಿ ವಿಫಲವಾಗಿದೆ ಎಂಬುದಾಗಿ ರೈತರು ಆರೋಪಿಸುತ್ತಾರೆ.