ಕನಕಪುರ: ರೇಷ್ಮೆ ಗೂಡಿನ ಬೆಲೆ ಏರಿಕೆಯಾಗು ತ್ತಿದ್ದಂತೆ ಖದೀಮರ ಕಣ್ಣು ರೈತರು ಬೆಳೆದ ರೇಷ್ಮೆ ಗೂಡಿನ ಮೇಲೆ ನೆಟ್ಟಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ತಾಲೂಕಿನಲ್ಲಿ ಎರಡು ತಿಂಗಳಲ್ಲಿ ಎರಡು ರೇಷ್ಮೆ ಗೂಡು ಕಳ್ಳತ ನಡೆದಿದೆ. ಇದು ರೈತರ ಆತಂಕವನ್ನು ಹೆಚ್ಚಿಸಿದ್ದು ಕಷ್ಟಪಟ್ಟು ಬೆಳೆದ ಗೂಡನ್ನು ಹಗಲು ರಾತ್ರಿ ನಿದ್ದೆಗೆಟ್ಟು ರಕ್ಷಣೆ ಮಾಡುವ ಪರಿಸ್ಥಿತಿ ರೈತರಿಗೆ ಎದುರಾಗಿದೆ. ರೇಷ್ಮೆ ಗೂಡಿನ ಬೆಲೆ ಏರಿಕೆಯಾಗಿರುವುದು ಕಳ್ಳರ ಕಣ್ಣು ರೇಷ್ಮೆ ಗೂಡಿನ ಮೇಲೆ ಬಿದ್ದಿದೆ.
ಹೈನುಗಾರಿಕೆ ಮತ್ತು ರೇಷ್ಮೆ ಕೃಷಿ ಮೇಲೆ ಅವಲಂಬಿತವಾಗಿದ್ದ ರೈತರಿಗೆ ನಿರಂತರವಾಗಿ ಸುರಿದ ಜಡಿ ಮಳೆಯಿಂದಾಗಿ ಮೇವಿನ ಕೊರತೆ ಸವಾಲಾಗಿ ಪರಿಣಮಿಸಿತ್ತು. ಅಂತಹ ಸಂದರ್ಭದಲ್ಲೂ ತಿಂಗಳು ಕಾಲ ಕಷ್ಟಪಟ್ಟು ರೈತರು ರೇಷ್ಮೆ ಬೆಳೆದಿದ್ದರು.
ರೇಷ್ಮೆ ಗೂಡು ಕಳವು: ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಶೆಟ್ಟಿಕೆರೆದೊಡ್ಡಿ ಗ್ರಾಮದ ಚಂದ್ರೇಗೌಡ ಎಂಬುವವರಿಗೆ ಸೇರಿದ ಗೂಡು ಕಳ್ಳತನವಾಗಿತ್ತು. ರೈತ ಚಂದ್ರೇಗೌಡ ಬೆಳೆದಿದ್ದ ಗೂಡನ್ನು ರೇಷ್ಮೆ ಮನೆಯಲ್ಲಿ ಇಟ್ಟಿದ್ದರು. ಇನ್ನು ಒಂದೆರಡು ದಿನದಲ್ಲಿ ಬಿಡಿಸಿ ಮಾರುಕಟ್ಟೆಗೆ ಹಾಕುವಷ್ಟರಲ್ಲಿ ರಾತ್ರೋರಾತ್ರಿ ರೇಷ್ಮೆ ಮನೆಗೆ ನುಗ್ಗಿದ ಖದೀಮರು ಸುಮಾರು 20 ರಿಂದ 30 ಚಂದ್ರಿಕೆಯಲ್ಲಿದ್ದ ರೇಷ್ಮೆ ಗೂಡನ್ನು ಬಿಡಿಸಿಕೊಂಡು ಪರಾರಿಯಾಗಿದ್ದರು.
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ರೈತ ಹಾಕಿದ ಬಂಡವಾಳ ತಿಂಗಳ ಶ್ರಮ ಎಲ್ಲವೂ ನಿರೀನಲ್ಲಿ ಹೋಮ ಮಾಡಿದಂತಾಗಿ ತ್ತು. ಕೋಡಿಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಆದರೇ 2 ತಿಂಗಳಾದರೂ ಖದೀಮರು ಪತ್ತೆಯಾಗಿಲ್ಲ.
100 ಕೆ.ಜಿ ರೇಷ್ಮೆ ಗೂಡು ಕಳವು: ತಾಲೂಕಿನ ಸಾತನೂರು ಹೋಬಳಿಯ ಅಚ್ಚಲು ಗ್ರಾಮದ ಸುನಂದಮ್ಮ ಮತ್ತು ಲೋಕೇಶ್ ಎಂಬುವವರಿಗೆ ಸೇರಿದ 50 ಸಾವಿರ ಬೆಲೆ ಬಾಳುವ ಸುಮಾರು 80ರಿಂದ 100 ಕೆ.ಜಿ ರೇಷ್ಮೆಗೂಡು ಮಂಗಳವಾರ ರಾತ್ರಿ ಕಳವಾಗಿದೆ. ರೈತ ಲೋಕೇಶ್ 100 ಮೊಟ್ಟೆ ರೇಷ್ಮೆ ಸಾಕಾಣಿಕೆ ಮಾಡಿದ್ದರು. ಬುಧವಾರ ಮಾರುಕಟ್ಟೆಗೆ ಹಾಕಲು ಹಿಂದಿನ ದಿನ ಮಂಗಳವಾರ ಚಂದ್ರಿಕೆಯಲ್ಲಿದ್ದ ಗೂಡನ್ನು ಬಿಡಿಸಿ ತೋಟದಲ್ಲಿರುವ ರೇಷ್ಮೆ ಮನೆಯಲ್ಲಿ ಇಟ್ಟಿದ್ದರು.
ಬೆಳಗ್ಗೆ ಬಂದು ನೋಡುವಷ್ಟರಲ್ಲಿ ರೇಷ್ಮೆ ಗೂಡು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ರೇಷ್ಮೆ ಬೆಳೆ ಕಳೆದುಕೊಂಡ ರೈತ ಕಂಗಾಲಾಗಿದ್ದಾನೆ. ಈ ಸಂಬಂಧ ಸಾತನೂರು ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಠಾಣೆಯ ಪಿಎಸ್‌ಐ ರವಿಕುಮಾರ್ ಸ್ಥಳ ಮಹಜರು ಮಾಡಿ ಸ್ಥಳೀಯ ಗ್ರಾಪಂನಲ್ಲಿ ಅಳವಡಿಸಿರುವ ಸಿಸಿ ಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.