ಆರಂಭದಲ್ಲೇ ಜೋಡಿ ಕೊಲೆಗಳಾಗುತ್ತವೆ. ಅದರ ಬೆನ್ನಲ್ಲೇ ಮತ್ತೂಂದು ಕೊಲೆ. ಇವೆಲ್ಲವೂ ಕೊಲೆ ಮಾಡುವ ಉದ್ದೇಶದಿಂದ ನಡೆದಿಧ್ದೋ ಅಥವಾ ಆಕಸ್ಮಿಕವಾಗಿ ಜರುಗಿಧ್ದೋ ಎಂದು ತನಿಖೆ ಶುರುವಾಗುವ ಹೊತ್ತಿಗೆ ಮತ್ತೂಂದು ಹೆಣ ಬೀಳುತ್ತದೆ. ಪೊಲೀಸ್ ಇಲಾಖೆಗೆ ಇದೊಂಥರ ಚಾಲೆಂಜಿಂಗ್ ಕೇಸ್. ಹಂತಕನ ಪೊಲೀಸರು ಪತ್ತೆಗೆ ಬಲೆ ಬೀಸಿರುತ್ತಾರೆ.
ಅನ್ಯಧರ್ಮೀಯನನ್ನು ಪ್ರೀತಿಸಿದ ಕಾರಣಕ್ಕಾಗಿ ಅಣ್ಣ ಸಿಟ್ಟು ಮಾಡಿ ಕೊಂಡಿರುತ್ತಾನೆ. ನಾಯಕ-ನಾಯಕಿ ಮಾತ್ರ ಏನೇ ಕಷ್ಟಗಳು ಎದುರಾದರೂ ಮದುವೆ ಆಗಿಯೇ ತೀರುವ ತೀರ್ಮಾನ ತೆಗೆದುಕೊಂಡಿರುತ್ತಾರೆ. ಅದರೆ ನಾಯಕ ಆಗಷ್ಟೇ ಕೆಲಸಕ್ಕೆ ಸೇರಿರುವ ಆಸಾಮಿ. ಕೈಯಲ್ಲಿ ದುಡ್ಡಿಲ್ಲ, ಒಂದಷ್ಟು ಸಾಲದ ಹೊರೆ…
ಇವೆರಡೂ ಘಟನೆಯ ಜತೆಜತೆಗೆ ಕೊಂಡಾಣದಲ್ಲಿ ಮೂವರು ಪೊಲೀಸರ ಹತ್ಯೆಯಾಗುತ್ತದೆ. ಇದರ ಹಿಂದಿನ ರೂವಾರಿ ಯಾರು? ಮಧ್ಯರಾತ್ರಿಯಲ್ಲಿ ಕೊಲೆಗೈದವರಾರು? ಹಿನ್ನೆಲೆ ಏನು… ಇತ್ಯಾದಿ ವಿಷಯಗಳ ಕುರಿತು ಸಾಕಷ್ಟು ಚರ್ಚೆಯಾಗುತ್ತದೆ. ಇಷ್ಟೂ ಘಟನೆಗಳೂ ರಾತ್ರಿ ಹೊತ್ತು ನಡೆಯುತ್ತದೆ ಎಂಬುದು ವಿಶೇಷ. ಎಲ್ಲ ಘಟನೆಗೆ ಸಾಕ್ಷಿಯಾಗಿದ್ದ ವ್ಯಕ್ತಿಗಳು ಒಂದೇ ಕಡೆ ಸೇರುವ ಸಮಯ ಸಮೀಪಿಸುತ್ತದೆ. ಅಲ್ಲಿಗೆ ಮಧ್ಯಂತರ.
ಅಸಲಿ ಕಥೆ ಶುರುವಾಗುವುದೇ ದ್ವಿತೀಯಾರ್ಧದಲ್ಲಿ..! ಜತೆಗೊಂದಿಷ್ಟು ರೋಚಕತೆ. ಡಾರ್ಕ್ ಕ್ರೈಂ ಥ್ರಿಲ್ಲರ್ ಜಾನರ್‌ನಲ್ಲಿ ಮೂಡಿಬಂದಿರುವ “ಕೇಸ್ ಆಫ್ ಕೊಂಡಾಣ’ ನಾನಾ ಕಾರಣಗಳಿಂದಾಗಿ ಕುತೂಹಲ ಕೆರಳಿಸುತ್ತಾ ಸಾಗುತ್ತದೆ. ಪ್ರೇಕ್ಷಕರ ತಲೆಗೆ ಹೆಚ್ಚು ಹುಳ ಬಿಡದೇ ಸತ್ಯವನ್ನು ನೇರಾ ನೇರ ಪ್ರಸ್ತುತಪಡಿಸುತ್ತಾ ಹೋಗುವ ನಿರ್ದೇಶಕ, ಯೋಚಿಸುವ ಪ್ರಕ್ರಿಯೆಯನ್ನು ಪಾತ್ರಗಳಿಗೆ ಹೊರಿಸಿರುವುದು ಜಾಣ್ಮೆಯ ಆಲೋಚನೆ!
ಇಂಥ ಕಥೆಗಳಿಗೆ ನಿರೂಪಣೆಯಲ್ಲಿ ವೇಗ ಇರಬೇಕು. ಅಷ್ಟೇ ಗಟ್ಟಿಯಾದ ಕಥೆಯ ಎಳೆಯೂ ಇರಬೇಕು. ಎರಡನ್ನೂ ಸರಿಸಮನಾಗಿ ಬೆರೆಸಿ ಚಿತ್ರಕಥೆಯಲ್ಲಿ ಬಿಗಿ ಕಾಪಾಡಿಕೊಳ್ಳುವಲ್ಲಿ ಸಫಲರಾಗಿದ್ದಾರೆ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ. ಕಾನೂನಾತ್ಮಕ ಚೌಕಟ್ಟಿನಲ್ಲಿ ಏನೆಲ್ಲಾ ಹೇಳಬಹುದು ಎಂಬ ಜಾಣ್ಮೆ ಅವರಲ್ಲಿದೆ. ಹೀಗಾಗಿ ಎಲ್ಲೂ ಅತಿರೇಕದ ಸನ್ನಿವೇಶಗಳಿಲ್ಲ. ಕಣ್ಣೆದುರೇ ನಡೆಯುತ್ತಿರುವ ಘಟನೆ ಎಂಬಂತೆ ನೈಜತೆಗೆ ಹೆಚ್ಚು ಒತ್ತು ಕೊಟ್ಟಿರುವುದು ಪ್ರಕರಣದ ತೀವ್ರತೆಯ ಅನಾವರಣವಾಗುತ್ತದೆ. ಮುಖ್ಯವಾಗಿ ತಾಂತ್ರಿಕತೆಯತ್ತ ಹೆಚ್ಚು ಗಮನ ಹರಿಸಿರುವುದರಿಂದ ವೃತ್ತ ಪರಿ ಪೂರ್ಣವಾಗಿದೆ.
ಕಲಾವಿದರೂ ಅಷ್ಟೇ ನೈಜತೆಯಿಂದ ಕ್ಯಾಮೆರಾ ಎದುರಿಸಿದ್ದಾರೆ. ನೆರಳು-ಬೆಳಕಿನಾಟ, ಕಳ್ಳ-ಪೊಲೀಸ್ ಕಣ್ಣಾಮುಚ್ಚಾಲೆ ಯಲ್ಲಿ ಸತ್ಯ ಎಷ್ಟರಮಟ್ಟಿಗೆ ಹೊರಬೀಳುತ್ತದೆ ಎಂಬುದೇ ಕೌತುಕದ ವಿಷಯ. ಅದನ್ನು ಕೊನೆಯವರೆಗೂ ತೆಗೆದುಕೊಂಡು ಹೋಗಿರುವ ಪರಿ ಮೆಚ್ಚುಗೆಗೆ ಅರ್ಹ.
ವಿಜಯ ರಾಘವೇಂದ್ರ ತಣ್ಣಗೆ ಪಾತ್ರದಾಳಕ್ಕೆ ಇಳಿದು ಕಥೆಯ ತೀವ್ರತೆಯನ್ನು ಹೆಚ್ಚಿಸುತ್ತಾರೆ. ಭಾವನಾ ಮೆನನ್ ಪೊಲೀಸ್ ಅಧಿಕಾರಿಯಾಗಿ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಖುಷಿ ರವಿ, ರಂಗಾಯಣ ರಘು, ಪೆಟ್ರೋಲ್ ಪ್ರಸನ್ನ ಮೊದಲಾದವರ ನಟನೆ ಗಮನಾರ್ಹ. ಛಾಯಾಗ್ರಾಹಕ ವಿಶ್ವಜಿತ್ ರಾವ್ ಕ್ಯಾಮೆರಾ ಕೈಚಳಕ ಅಚ್ಚುಕಟ್ಟಾಗಿದೆ. ಸಂಭಾಷಣೆಯ ಮೂಲಕ ದೃಶ್ಯವನ್ನು ಮತ್ತೂಂದು ಹಂತಕ್ಕೆ ಕೊಂಡೊಯ್ಯುವಲ್ಲಿ ಜೋಗಿ ಸಂಭಾಷಣೆ ಕೆಲಸ ಮಾಡಿದೆ.
ಆರ್.ಪಿ