ಸಿನಿಮಾದ ಸೋಲು-ಗೆಲುವು ಏನೇ ಇರಬಹುದು, ಆದರೆ ವಿಭಿನ್ನ ಪಾತ್ರಗಳಿಗೆ ತೆರೆದುಕೊಳ್ಳುತ್ತಾ, ಹೊಸದನ್ನು ಪ್ರೋತ್ಸಾಹಿಸುವ ಕೆಲವೇ ಕೆಲವು ನಟರ ಸಾಲಿನಲ್ಲಿ ಸಿಗುವ ಹೆಸರು ವಿಜಯ ರಾಘವೇಂದ್ರ. ವಿಜಯ ರಾಘವೇಂದ್ರ ಅವರ ಸಿನಿಯಾನವನ್ನು ನೀವು ಒಮ್ಮೆ ಗಮನಿಸಿದರೆ ಅಲ್ಲಿ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾಗಳ ಜೊತೆಗೆ ವಿಭಿನ್ನ ಕಥಾಹಂದರದ, ಹೊಸದೆನಿಸುವ ಪಾತ್ರಗಳ ಸಿನಿಮಾಗಳು ಸಿಗುತ್ತವೆ. ಅದೇ ಕಾರಣದಿಂದ ವಿಜಯ ರಾಘವೇಂದ್ರ ಅವರು ಸಿನಿಮಾ ಮೇಲೆ ಸಿನಿಮಾ ಮಾಡುತ್ತಾ ಬಿಝಿಯಾಗಿದ್ದಾರೆ. ಈಗ ವಿಜಯ ರಾಘವೇಂದ್ರ ಅವರು ನಿರೀಕ್ಷೆಯಿಂದ ಕಾಯುತ್ತಿದ್ದ ಸಿನಿಮಾವೊಂದು ಇಂದು ತೆರೆಕಾಣುತ್ತಿದೆ. ಅದು “ಕೇಸ್ ಆಫ್ ಕೊಂಡಾಣ’.
ಈಗಾಗಲೇ ಟೀಸರ್, ಟ್ರೇಲರ್ ಮೂಲಕ ನಿರೀಕ್ಷೆ ಹುಟ್ಟಿಸಿರುವ ಸಿನಿಮಾವಿದು. ಪಕ್ಕಾ ಸಸ್ಪೆನ್ಸ್-ಥ್ರಿಲ್ಲರ್ ಜಾನರ್‌ನಲ್ಲಿ ಮೂಡಿಬಂದಿರುವ ಈ ಚಿತ್ರದ ಮೇಲೆ ವಿಜಯ ರಾಘವೇಂದ್ರ ಅವರಿಗೆ ನಂಬಿಕೆ ಇದೆ. ಅದಕ್ಕೆ ಕಾರಣ ತಂಡ.
ಹೌದು, ಈ ಹಿಂದೆ “ಸೀತಾರಾಮ್ ಬಿನೋಯ್’ ಸಿನಿಮಾ ಮಾಡಿದ್ದ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಹಾಗೂ ಆ ಸಿನಿಮಾದ ನಿರ್ಮಾಣದಲ್ಲಿ ತೊಡಗಿದ್ದ ಸಾತ್ವಿಕ್ ಹೆಬ್ಟಾರ್ ಈಗ ಜೊತೆಯಾಗಿ ಮಾಡಿರುವ ಸಿನಿಮಾವೇ “ಕೇಸ್ ಆಫ್ ಕೊಂಡಾಣ’. ಮೊದಲ ಸಿನಿಮಾದಲ್ಲಿ ಈ ತಂಡದ ಶ್ರದ್ಧೆ ನೋಡಿ ಖುಷಿಯಾಗಿರುವ ವಿಜಯ ರಾಘವೇಂದ್ರ “ಕೇಸ್ ಆಫ್ ಕೊಂಡಾಣ’ಕ್ಕೆ ಒಂದಾಗಿದ್ದಾರೆ.
“ಕೇಸ್ ಆಫ್ ಕೊಂಡಾಣ’ ಹೆಸರಿಗೆ ತಕ್ಕಂತೆ ಕೇಸ್‌ವೊಂದರ ಬೆನ್ನತ್ತಿ ಸಾಗುವ ಸಿನಿಮಾ. ಕೊಂಡಾಣ ಎಂಬ ಊರೊಂದರಲ್ಲಿ ನಡೆಯುವ ಕಥೆಯನ್ನು ಇಲ್ಲಿ ಹೇಳಲಾಗಿದೆ. ಚಿತ್ರದ ಬಗ್ಗೆ ಮಾತನಾಡುವ ವಿಜಯ ರಾಘವೇಂದ್ರ, “ಇದು ಮೂರು ನಾಲು ಸ್ಟೋರಿ ಜೊತೆಯಾಗಿ ಸಾಗುವ ಸಿನಿಮಾವಿದು. ಇದು ಕಾಲ್ಪನಿಕ ಕಥೆಯಾಗಿದ್ದು, ಹೈಪರ್ ಲಿಂಕ್ ಜಾನರ್‌ಗೆ ಸೇರಿದ ಸಿನಿಮಾ ಇದು. “ಸೀತಾರಾಮ್ ಬಿನೋಯ್ ಆದ ಮೇಲೆ ಇನ್ನೊಂದು ಹಂತ ಬೆಳೆಯಬೇಕು. ಬೆಳವಣಿಗೆ ಕಾಣಬೇಕು. ಕಥೆ ರೂಪದಲ್ಲಿ ಅಥವಾ ಅದನ್ನು ಪ್ರಸೆಂಟ್ ಮಾಡುವ ರೀತಿಯ ಬೆಳವಣಿಗೆಯನ್ನು ಕಥೆ ರೂಪದಲ್ಲಿ ತಂದಿದ್ದರು. ಕೇಸ್ ಕೊಂಡಾಣ ಶೇ. 80 ರಿಂದ 90 ರಾತ್ರಿ ಶೂಟ್ ಮಾಡಲಾಗಿದೆ. ಕೆಲಸದ ಬಗ್ಗೆ ಸಮಾಧಾನವಿದೆ. ಆ್ಯಕ್ಷನ್, ಎಮೋಶನ್ ಎಲ್ಲಾ ಒಟ್ಟಿಗೆ ಸಾಗುತ್ತದೆ. ನಿರ್ದೇಶಕ ದೇವಿ ಪ್ರಸಾದ್ ಅವರಿಗೆ ಸಿನಿಮಾ ಬಗ್ಗೆ ಕ್ಲಾರಿಟಿ ಇದೆ. ಒಬ್ಬ ನಟನಾಗಿ ನಾನು ಬಹಳಷ್ಟು ಕಲಿತ್ತಿದ್ದೇನೆ. ತುಂಬಾ ಖುಷಿ ಖುಷಿಯಿಂದ ಕೆಲಸ ಮಾಡಿದ್ದೇವೆ. ನಮ್ಮ ಸಿನಿಮಾದ ಕಂಟೆಂಟ್ ಚೆನ್ನಾಗಿದೆ’ ಎನ್ನುತ್ತಾರೆ.
ಚಿತ್ರಕ್ಕೆ ಹಿರಿಯ ಪತ್ರಕರ್ತ ಜೋಗಿ ಸಂಭಾಷಣೆ ಬರೆದಿದ್ದಾರೆ. ಕೊಂಡಾಣದಲ್ಲಿ ಖುಷಿ ರವಿ ಮತ್ತು ರಂಗಾಯಣ ರಘು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತ, ವಿಶ್ವ ಜಿತ್ ರಾವ್ ಛಾಯಾಗ್ರಹಣ, ಭವಾನಿ ಶಂಕರ್ ಆನೆಕಲ್ಲು ಕಲಾ ನಿರ್ದೇಶನ ಹಾಗೂ ಶಶಾಂಕ್ ನಾರಾಯಣ್ ಸಂಕಲನವಿದೆ. ಪ್ರಮೋದ್ ಮರವಂತೆ, ವಿಶ್ವ ಜಿತ್ ರಾವ್ ಸಾಹಿತ್ಯವಿರುವ ಈ ಚಿತ್ರಕ್ಕೆ ಜೋಗಿಯವರು ಸಂಭಾಷಣೆ ಬರೆದಿದ್ದಾರೆ. ನಿರ್ದೇಶನದ ಜೊತೆಗೆ ದೇವಿಪ್ರಸಾದ್ ಶೆಟ್ಟಿಯವರು ಸಾತ್ವಿಕ್ ಹೆಬ್ಟಾರ್ ಜೊತೆ ನಿರ್ಮಾಣಕ್ಕೂ ಕೈ ಜೋಡಿಸಿದ್ದಾರೆ.