ಬೆಂಗಳೂರು: ನಗರದ ಕಾಚರಕನಹಳ್ಳಿಯ ಕೊಳೆಗೇರಿ ಪ್ರದೇಶದಲ್ಲಿ ವಾಸ ಮಾಡುತ್ತಿದ್ದ ವಲಸೆ ಕಾರ್ಮಿಕರ ಗುಡಿಸಲುಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ. ಈ ಕುರಿತು ವಕೀಲೆ ವೈಶಾಲಿ ಹೆಗಡೆ ಬರೆದ ಪತ್ರ ಆಧರಿಸಿ ದಾಖಲಿಸಿಕೊಂಡ ಸ್ವಯಂ ಪ್ರೇರಿತ ಸಾರ್ವ ಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ನ್ಯಾಯ ಪೀಠಕ್ಕೆ ಸರ್ಕಾರಿ ವಕೀಲರು ಈ ಭರವಸೆ ನೀಡಿದರು.
ಸರ್ಕಾರದ ಪರ ವಕೀಲ ವಿಕ್ರಂ ಹೋಯಿಲಗೋಳ್, ರಾಜ್ಯ ನಗರಾಭಿವೃದ್ಧಿ ಇಲಾಖೆ ಮತ್ತು ಪೊಲೀಸರು ಸಲ್ಲಿಸಿದ ಮೆಮೋ ಅನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ನಂತರ ವಾದ ಮಂಡಿಸಿದ ಅವರು, ಗುಡಿಸಲುಗಳಿರುವ ಜಾಗ ಇನ್ನೂ ಕಂದಾಯ ಇಲಾಖೆ ಅಧೀನದಲ್ಲಿದೆ. ಆ ಜಾಗವನ್ನು ತನಗೆ ಹಸ್ತಾಂತರಿಸುವಂತೆ ಬಿಡಿಎ ಸಲ್ಲಿರುವ ಮನವಿ ಕುರಿತು ಇನ್ನೂ ಸರ್ಕಾರ ಕ್ರಮ ಕೈಗೊಂಡಿಲ್ಲ.
ಅಲ್ಲಿದ್ದ ಸುಮಾರು 40ರಿಂದ 50 ಗುಡಿಸಲುಗಳಿಗೆ ಕೆಲ ದುಷ್ಕರ್ಮಿಗಳು ಬೆಂಕಿ ಹಂಚಿದ್ದಾರೆ. ಅದರಿಂದ ಜಾಗ ಬಿಟ್ಟು ಹೋಗಿದ್ದ 170 ಕುಟುಂಬಗಳು ಇದೀಗ ವಾಪಸ್ ಬಂದು ಗುಡಿಸಲು ಗಳನ್ನು ದುರಸ್ತಿ ಮಾಡಿಕೊಂಡು ನೆಲಸಲು ಆರಂಭಿಸಿವೆ. ಬೆಂಕಿ ಹಚ್ಚಿದವರ ಹಾಗೂ ಜೆಸಿಬಿ ಮೂಲಕ ಗುಡಿಸಲು ಗಳನ್ನು ನಾಶ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ವಾಸ ಮಾಡುತ್ತಿರುವ, ಗುಡಿಸಲುಗಳಿಗೆ ಬೆಂಕಿ ಹಚ್ಚಿದಾಗ ಸರ್ಕಾರ ಖಂಡಿತವಾಗಿಯೂ ಸಂತ್ರಸ್ತರಿಗೆ ಪರಿಹಾರ ನೀಡಬೇಕಾಗುತ್ತದೆ ಎಂದು ತಿಳಿಸಿತು.
ಸರ್ಕಾರಿ ವಕೀಲರು ಉತ್ತರಿಸಿ, ಮೊದಲ ಹಂತದಲ್ಲಿ ಅವರೆಲ್ಲರೂ ಮರಳಿ ತಾವಿದ್ದ ಜಾಗಕ್ಕೆ ಬಂದು ನೆಲೆಸುವಂತೆ ಮಾಡಲಾಗುತ್ತಿದೆ. ಎರಡನೇ ಹಂತದಲ್ಲಿ ಕಾನೂನು ಪರಿಹಾರ ಒದಗಿಸಲಾಗುವುದು ತಿಳಿಸಿದರು. ನ್ಯಾಯಪೀಠ ಪ್ರತಿಕ್ರಿಯಿಸಿ, ತಪ್ಪು ಮಾಡಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅಭಿಪ್ರಾಯಪಟ್ಟು, ಪ್ರಕರಣದಲ್ಲಿ ನೆಲೆ ಕಳೆದುಕೊಂಡ ಕುಟುಂಬಗಳಿಗೆ ಯಾವಾಗ ಪರಿಹಾರ ನೀಡಲಾಗುತ್ತದೆ ಎನ್ನುವ ಬಗ್ಗೆ ಜು.25ರಂದು ತಿಳಿಸುವಂತೆ ಸೂಚಿಸಿತು.