Advertisement

Acid Attack ಪ್ರಕರಣ; ಘಟನೆಗೆ ಮುನ್ನ ಸಂತ್ರಸ್ತೆಯನ್ನು ಭೇಟಿಯಾಗಿದ್ದ ಆರೋಪಿ

09:04 AM Mar 06, 2024 | Team Udayavani |

ಕಡಬ: ಪ್ರೀತಿ ನಿರಾಕರಣೆಯ ಹಿನ್ನೆಲೆಯಲ್ಲಿ ಮಾ. 4ರಂದು ಬೆಳಗ್ಗೆ ಕಡಬ ಸರಕಾರಿ ಪ.ಪೂ. ಕಾಲೇಜಿನ ಆವರಣದಲ್ಲಿ ಪರೀಕ್ಷೆ ಬರೆಯಲು ಸಿದ್ಧಳಾಗುತ್ತಿದ್ದ ತನ್ನ ಪ್ರೇಯಸಿಯ ಮೇಲೆ ಆ್ಯಸಿಡ್‌ ಎರಚಿ ಗಾಯಗೊಳಿಸಿದ ಆರೋಪಿ ಕೇರಳದ ಮಲಪ್ಪುರಂ ಜಿಲ್ಲೆಯ ನೆಲಂಬೂರು ತಾಲೂಕು ವಾಯಿಕಡವು ಗ್ರಾಮದ ಅಡಕ್ಕರ ನಿವಾಸಿ ಅಬಿನ್‌ ಸಿಬಿ (22) ಘಟನೆಗೆ ಸ್ವಲ್ಪ ಸಮಯದ ಮೊದಲು ಆಕೆಯನ್ನು ಭೇಟಿಯಾಗಿರುವುದು ಪೊಲೀಸ್‌ ತನಿಖೆಯಲ್ಲಿ ಬಯಲಾಗಿದೆ.

Advertisement

ಮಾ. 3ರಂದು ರಾತ್ರಿ ಕೇರಳದಿಂದ ರೈಲಿನಲ್ಲಿ ಮಂಗಳೂರಿಗೆ ಬಂದಿಳಿದಿದ್ದ ಅಬಿನ್‌ ರೈಲು ನಿಲ್ದಾಣದಲ್ಲಿಯೇ ರಾತ್ರಿ ಕಳೆದು ಮರುದಿನ ಮುಂಜಾನೆ ಬಸ್‌ ಹತ್ತಿ ಕಡಬಕ್ಕೆ ತಲುಪಿದ್ದ. ಬಸ್‌ನಿಂದ ಇಳಿದ ಆತ ಪರೀಕ್ಷೆ ಬರೆಯಲು ಕಾಲೇಜಿಗೆ ಬರುತ್ತಿದ್ದ ಸಂತ್ರಸ್ತ ವಿದ್ಯಾರ್ಥಿನಿಯನ್ನು ಕಡಬ ಪೇಟೆಯಲ್ಲಿ ಭೇಟಿಯಾಗಿ ಮಾತನಾಡಿ ರುವುದು ಅಂಗಡಿಯೊಂದರ ಸಿಸಿ ಕೆಮರಾದಲ್ಲಿ ದಾಖಲಾಗಿದೆ. ತನ್ನ ಪ್ರೀತಿಯನ್ನು ನಿರಾಕರಿಸದಂತೆ ಕೇಳಿಕೊಂಡಿದ್ದ ಎನ್ನಲಾಗಿದೆ.

ಬೇಕರಿಯಲ್ಲಿ ಫೋನ್‌ ಚಾರ್ಜ್‌ಗಿಟ್ಟಿದ್ದ

ಯುವತಿ ತನ್ನನ್ನು ನಿರ್ಲಕ್ಷಿಸಿ ಕಾಲೇಜಿಗೆ ಹೋದುದರಿಂದ ಸಿಟ್ಟಿಗೆದ್ದ ಅಬಿನ್‌ ಬಳಿಕ ಕಡಬದ ಬೇಕರಿಯೊಂದಕ್ಕೆ ತೆರಳಿ ಅಲ್ಲಿ ತನ್ನ ಮೊಬೈಲ್‌ ಫೋನ್‌ ಚಾರ್ಜಿಗಿಟ್ಟು ಸ್ವಲ್ಪ ಸಮಯದಲ್ಲಿ ಬರುವುದಾಗಿ ಬೇಕರಿ ಮಾಲಕರಲ್ಲಿ ಹೇಳಿ ಬೇರೆಡೆಗೆ ತೆರಳಿದ್ದ. ಆ ವೇಳೆ ಕಪ್ಪು ಪ್ಯಾಂಟ್‌ ಹಾಗೂ ಕಪ್ಪು ಅಂಗಿ ಧರಿಸಿದ್ದುದು ಸಿಸಿ ಕೆಮರಾದಲ್ಲಿ ದಾಖಲಾಗಿದೆ.

ಬೇಕರಿಯಿಂದ ತನ್ನ ಬ್ಯಾಗ್‌ ಸಮೇತ ಹೊರಟ ಆತ ಕಡಬ ಎಪಿಎಂಸಿ ಪ್ರಾಂಗಣದ ಬಳಿಯಿಂದ ಕಡಬ ಸರಕಾರಿ ಪ.ಪೂ. ಕಾಲೇಜಿಗೆ ಹೋಗುವ ಕಾಂಕ್ರೀಟ್‌ ರಸ್ತೆಯಲ್ಲಿ ನಡೆದು ಹೋಗಿ ಅಲ್ಲಿಯೇ ರಸ್ತೆಯ ಪಕ್ಕದಲ್ಲಿ ಜನವಸತಿ ಇಲ್ಲದ ಮನೆಯೊಂದರ ಹಿಂಬದಿ ಯಾರಿಗೂ ಕಾಣದಂತೆ ಬಟ್ಟೆ ಬದಲಾಯಿಸಿ ಕಾಲೇಜಿನ ಸಮವಸ್ತ್ರವನ್ನು ಹೋಲುವ ಬಿಳಿ ಅಂಗಿ ಮತ್ತು ನೀಲಿ ಪ್ಯಾಂಟ್‌ ಧರಿಸಿ ನೇರ ಕಾಲೇಜಿಗೆ ತೆರಳಿದ್ದ.

Advertisement

ಕೇರಳದಿಂದ ಕಡಬಕ್ಕೆ ಹಲವು ಬಾರಿ ಬಂದಿದ್ದ ಆತ ಯುವತಿಯ ಜತೆಗೆ ಈ ಹಿಂದೆ ಕಾಲೇಜಿನ ಬಳಿಯೂ ಬಂದಿದ್ದ ಎನ್ನುವುದು ತನಿಖೆಯಿಂದ ಬಯಲಾಗಿದೆ. ಕಡಬದ ಅಂಗಡಿಗಳು, ಕಾಲೇಜನ್ನು ಸಂಪರ್ಕಿಸುವ ರಸ್ತೆ ಸೇರಿದಂತೆ ಎಲ್ಲ ಮಾಹಿತಿಗಳನ್ನು ಹೊಂದಿದ್ದ ಆರೋಪಿ ಕೊನೆಯ ಬಾರಿ ಯುವತಿಯ ಜತೆ ಮಾತನಾಡಿ ಆಕೆ ತನ್ನ ಪ್ರೀತಿಗೆ ಸ್ಪಂದಿಸದೇ ಹೋದಲ್ಲಿ ಆ್ಯಸಿಡ್‌ ದಾಳಿ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಂಡು ಬಂದಿದ್ದ ಎನ್ನಲಾಗಿದೆ.

ಘಟನೆಯಲ್ಲಿ ಆರೋಪಿಯು ತಾನು ಪ್ರೀತಿಸುತ್ತಿದ್ದ ವಿದ್ಯಾರ್ಥಿನಿಯನ್ನು ಗುರಿಯಾ ಗಿರಿಸಿ ಆ್ಯಸಿಡ್‌ ಎರಚಿದಾಗ ಆಕೆಯ ಹತ್ತಿರದಲ್ಲಿದ್ದ ಆಕೆಯ ಇಬ್ಬರು ಸ್ನೇಹಿತೆಯರಿಗೂ ಆ್ಯಸಿಡ್‌ ತಗಲಿ ಗಾಯಗಳಾಗಿವೆ.

ಪೊಲೀಸ್‌ ಕಸ್ಟಡಿ

ಆರೋಪಿಯನ್ನು ತನಿಖೆಗೊಳಪಡಿಸಿ ಸ್ಥಳ ಮಹಜರು ಇತ್ಯಾದಿ ನಡೆಸಿರುವ ಪೊಲೀಸರು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿ ಸಿದ್ದು, ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next