ನವದೆಹಲಿ: ನ್ಯಾಯಾಂಗದಲ್ಲಿನ ಬಿಕ್ಕಟ್ಟನ್ನು ಶಮನಗೊಳಿಸುವತ್ತ ಹೆಜ್ಜೆ ಇಟ್ಟಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು, ಸೂಕ್ಷ್ಮ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ನ್ಯಾಯಪೀಠಗಳಿಗೆ ಹಂಚಿಕೆ ಮಾಡುವ ವಿಚಾರದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಸಲಹೆ ಪಡೆದಿದ್ದಾರೆ.
ಸದ್ಯದಲ್ಲೇ ಅವರು ಕೇಸುಗಳ ಹಂಚಿಕೆಗೆ ಅಳವಡಿಸಿಕೊಳ್ಳುವ ಪ್ರಕ್ರಿಯೆಗಳ ಕುರಿತ ಮಾಹಿತಿಯನ್ನು ಬಹಿರಂಗಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು, ಭವಿಷ್ಯದ ಸಿಜೆಐಗಳಾದ ನ್ಯಾ.ಎಸ್.ಎ.ಬೊಬೆx, ನ್ಯಾ. ಎನ್.ವಿ.ರಮಣ, ನ್ಯಾ.ಯು.ಯು.ಲಲಿತ್ ಮತ್ತು ನ್ಯಾ. ಡಿ.ವೈ.ಚಂದ್ರಚೂಡ್ ಸೇರಿದಂತೆ ಕೆಲವು ನ್ಯಾಯಮೂರ್ತಿಗಳೊಂದಿಗೆ ಮಾತು ಕತೆ ನಡೆಸಿದ್ದು, ಅವರಿಂದಲೂ ಸಲಹೆಗಳನ್ನು ಪಡೆದಿದ್ದಾರೆ. ಜತೆಗೆ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ನೀಡಿದ ಸಲಹೆ ಗಳನ್ನೂ ಆಲಿಸಿದ್ದಾರೆ. ಕೇಸುಗಳ ಹಂಚಿಕೆಯಲ್ಲಿ ಸ್ಪಷ್ಟವಾದ ಸರತಿ ಪ್ರಕ್ರಿಯೆ(ರೋಸ್ಟರ್ ಸಿಸ್ಟಂ)ಯನ್ನು ಅನುಸರಿಸುವ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಸಿಜೆಐ ಮಿಶ್ರಾ ಅವರು ಕೈಗೊಳ್ಳುವ ನಿರ್ಧಾರವನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ಸದ್ಯದಲ್ಲೇ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದ್ದು, ಯಾವ ಕೇಸುಗಳನ್ನು ಯಾವ ನ್ಯಾಯಪೀಠ ವಿಚಾರಣೆ ನಡೆಸಲಿದೆ ಎಂಬುದು ಸಾರ್ವಜನಿಕರಿಗೂ ಗೊತ್ತಾಗುವಂತೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.