ಬೆಂಗಳೂರು: ದೇವಸ್ಥಾನಗಳಲ್ಲಿ ದೇವರ ಎದುರು ಭಕ್ತರು ಜೋರಾಗಿ ಘಂಟೆ ಹೊಡದರೆ, ದೇವಸ್ಥಾನಗಳಿಗೆ ಪೊಲೀಸ್ ನೋಟಿಸು ಬರುತ್ತದೆ. ಇಂತಹ ಘಟನೆ ನಡೆದಿರುವುದು ರಾಜಧಾನಿ ಬೆಂಗಳೂರಿನಲ್ಲಿ.
ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಡೆಸಿಬಲ್ ಶಬ್ದಕ್ಕಿಂತ ಹೆಚ್ಚಿನ ಶಬ್ದವನ್ನು ಬಳಸುತ್ತಿರುವುದಕ್ಕೆ ಪೊಲೀಸರು ನೋಟೀಸ್ ನೀಡಿದ್ದಾರೆ. ದೊಡ್ಡ ಗಣಪತಿ ದೇವಸ್ಥಾನ ಸಮೂಹಕ್ಕೆ ಬಸವನಗುಡಿ ಪೊಲೀಸ್ ಠಾಣೆಯಿಂದ ನೋಟೀಸ್ ನೀಡಲಾಗಿದೆ.
ಪೊಲೀಸ್ ನೋಟಿಸ್ ಹಿನ್ನೆಲೆಯಲ್ಲಿ ಹೆಚ್ಚಿನ ಶಬ್ದದ ಗಂಟೆ ಹೊಡೆಯದಂತೆ ಬಸವನಗುಡಿಯ ದೊಡ್ಡ ಗಣಪತಿ ಸಮೂಹ ದೇವಸ್ಥಾನಗಳ ಕಾರ್ಯನಿರ್ವಹಣಾಧಿಕಾರಿ ಸೂಚನೆ ನೀಡಿದ್ದು, ಸೂಚನೆಯ ಹೊರತಾಗಿಯೂ ಹೆಚ್ಚಿನ ಶಬ್ದ ಬರುವಂತೆ ಗಂಟೆ ಹೊಡೆದಲ್ಲಿ ಪ್ರಕರಣ ದಾಖಲು ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:‘ಹಿಜಾಬ್ ಪರೀಕ್ಷೆ’: ಪರೀಕ್ಷೆ ಬರೆಯಲು ಒಪ್ಪದ ಒಂದೇ ಶಾಲೆಯ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು!
ಢಮರುಗ, ಧ್ವನಿ ವರ್ಧಕ ಯಂತ್ರಗಳಿಂದ ಧ್ವನಿ ಹೊರಡಿಸಬಾರದು. ಹೆಚ್ಚಿನ ಶಬ್ದ ಶಬ್ದ ಮಾಲಿನ್ಯ (ನಿಯಂತ್ರಣ ಮತ್ತು ನಿಯಂತ್ರಣ ನಿಯಮಗಳು ತಿದ್ದುಪಡಿ ಕಾಯ್ದೆ 2000) ಅಡಿಯಲ್ಲಿ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಲಾಗಿದೆ.
ದೊಡ್ಡ ಗಣೇಶ ದೇವಸ್ಥಾನ, ಮಿಂಟೋ ಆಂಜನೇಯ ಸ್ವಾಮಿ ದೇವಸ್ಥಾನ, ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನ, ದೊಡ್ಡ ಬಸವಣ್ಣ ದೇವಸ್ಥಾನ, ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ ಹಾಗೂ ಇನ್ನಿತರ ದೇವಸ್ಥಾನಗಳು ದೊಡ್ಡಗಣೇಶ ದೇವಸ್ಥಾನ ಸಮೂಹದಲ್ಲಿ ಬರುತ್ತದೆ.