ಹೊಸದಿಲ್ಲಿ: ಏಳು ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲಿ ಆಮ್ರಪಾಲಿ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಅನಿಲ್ ಶರ್ಮಾ ಹೆಸರು ಕೇಳಿಬಂದಿದೆ. ಪ್ರಕರಣದ ಆರು ಮಂದಿ ಆರೋಪಿಗಳ ಪೈಕಿ ಅನಿಲ್ ಶರ್ಮಾ ಹೆಸರೂ ಇದೆ.
2014ರಲ್ಲಿ ಬಿಹಾರದ ಲಖಿಸೆರಾಯ್ ನ ಬಾಲಿಕಾ ವಿದ್ಯಾಪೀಠದ ಕಾರ್ಯದರ್ಶಿ ಡಾ.ಶರದ್ ಚಂದ್ರ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಪಾಟ್ನಾ ಹೈಕೋರ್ಟ್‌ನ ಆದೇಶದ ಮೇರೆಗೆ ತನಿಖೆಯನ್ನು ವಹಿಸಿಕೊಂಡ ಕೇಂದ್ರೀಯ ತನಿಖಾ ದಳವು, ಈ ಕೊಲೆಯ ಹಿಂದೆ ಶಿಕ್ಷಣ ಸಂಸ್ಥೆಗೆ ಸೇರಿದ ಭೂಮಿ ಮತ್ತು ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ ಉದ್ದೇಶವಿತ್ತು ಎಂದು ಹೇಳಿದೆ. ಅನಿಲ್ ಶರ್ಮಾ ಇತರರ ಸಹಾಯದಿಂದ ಸಂಸ್ಥೆಯ ಭೂಮಿ ಮತ್ತು ಆಸ್ತಿಯನ್ನು ವಶಪಡಿಸಿಕೊಂಡ ನಂತರ ಚಂದ್ರ ಅವರನ್ನು ಅವರ ಸ್ಥಾನದಿಂದ ತೆಗೆದುಹಾಕಲಾಗಿತ್ತು.
“ಆಮ್ರಪಾಲಿ ಗ್ರೂಪ್ ನ ಎಂಡಿ ಅನಿಲ್ ಶರ್ಮಾ ಅವರು ರಾಜೇಂದ್ರ ಪ್ರಸಾದ್ ಸಿಂಘಾನಿಯಾ, ಡಾ. ಪ್ರವೀಣ್ ಕುಮಾರ್ ಸಿನ್ಹಾ, ಶ್ಯಾಮ್ ಸುಂದರ್ ಪ್ರಸಾದ್ ಮತ್ತು ಶಂಭು ಶರಣ್ ಸಿಂಗ್ ಅವರ ಸಹಾಯದಿಂದ ಬಾಲಿಕಾ ವಿದ್ಯಾಪೀಠದ ಟ್ರಸ್ಟನ್ನು ಕಸಿದುಕೊಂಡಿದ್ದಾರೆ” ಎಂದು ಸಿಬಿಐ ಹೇಳಿದೆ.
ಚಂದ್ರ ಅವರು ಮನೆಯ ಬಾಲ್ಕನಿಯಲ್ಲಿ ಕುಳಿತು ಪತ್ರಿಕೆ ಓದುತ್ತಿದ್ದಾಗ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.