ಮುಂಬಯಿ, ಜೂ. 26: ರಾಜ್ಯದಲ್ಲಿ ಈವರೆಗೆ 1.45ಲಕ್ಷ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 30 ದಿನಗಳಲ್ಲಿ ಪ್ರಕರಣ ದ್ವಿಗುಣಗೊಳ್ಳುತ್ತಿವೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.
ಗುರುವಾರ ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 99 ವರ್ಷದ ಮಹಿಳೆ ಸೇರದಂತೆ ಸುಮಾರು 75 ಸಾವಿರ ಸೊಂಕಿತರು ಚೇತರಿಸಿ ಕೊಂಡಿದ್ದಾರೆ. ರಾಜ್ಯವನ್ನು ಟೀಕಿಸುವವರು ಇದನ್ನು ತಿಳಿಯಬೇಕು ಎಂದರು.
ಮಹಾರಾಷ್ಟ್ರದಲ್ಲಿ ಸುಮಾರು 65 ಸಾವಿರ ಸಕ್ರಿಯ ಪ್ರಕರಣಗಳಿವೆ. ಈ ಪೈಕಿ ಶೇ. 80 ರಷ್ಟು ಜನರು ಲಕ್ಷಣರಹಿತ ಮತ್ತು ಕೇವಲ ಶೇ. 4-5 ರಷ್ಟು ಸೋಂಕಿತರು ಆಮ್ಲಜನಕ ಅಥವಾ ವೆಂಟಿಲೇಟರ್ ಬೆಂಬಲವನ್ನು ಹೊಂದಿದ್ದಾರೆ. ರಾಜ್ಯದಲ್ಲಿ ಶೇ. 52ರಷ್ಟು ಚೇತರಿಕೆ ಪ್ರಮಾಣವನ್ನು ಹೊಂದಿದೆ ಎಂದರು. ರಾಜ್ಯದಲ್ಲಿ ಸಾವಿನ ಪ್ರಮಾಣ 10 ಲಕ್ಷ ಜನರಲ್ಲಿ 60 ಆಗಿದೆ. ಪ್ರತಿದಿನ 20 ಸಾವಿರ ಕೋವಿಡ್ ಪರೀಕ್ಷೆಗಳು ನಡೆಯುತ್ತಿವೆ ಮತ್ತು ಇದುವರೆಗೂ ನಾವು 8.50 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನು ಮಾಡಿದ್ದೇವೆ, ಇದು ದೇಶದಲ್ಲಿ ಅತಿ ಹೆಚ್ಚು ಪರೀಕ್ಷಾ ಪ್ರಮಾಣವಾಗಿದೆ ಎಂದರು.
ಆಂಟಿಜೆನ್ ಪರೀಕ್ಷೆಯ ಬಳಕೆ ರಾಜ್ಯ ಆಂಟಿಜೆನ್ ಪರೀಕ್ಷೆಯನ್ನು ನಡೆಸಲಿದ್ದು, ಇದು ಒಂದು ಗಂಟೆಯಲ್ಲಿ ಫಲಿತಾಂಶವನ್ನು ನೀಡುತ್ತದೆ ಎಂದು ಟೋಪೆ ಹೇಳಿದ್ದಾರೆ. ಶೀಘ್ರದಲ್ಲೇ ರಾಜ್ಯದಲ್ಲಿ 1 ಲಕ್ಷ ಆಂಟಿಜೆನ್ ಪತ್ತೆ ಸಾಧನಗಳನ್ನು ಲಭ್ಯಗೊಳಿಸಲಾಗುವುದು ಎಂದಿದ್ದಾರೆ.