ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಲೇಖನ ಬರೆದಿರುವುದೇ ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಸಂಕಷ್ಟಕ್ಕೆ ಕಾರಣವಾಗಿದೆ. ಇದೀಗ ಸಂಜಯ್ ರಾವುತ್ ವಿರುದ್ಧ ಬಿಜೆಪಿ ನಾಯಕ ನಿತಿನ್ ಅವರು ಯವತ್ಮಾಲ್‌ನ ಉಮರ್ಖೇಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಶಿವಸೇನೆಯ ಮುಖವಾಣಿ ‘ಸಾಮ್ನಾ’ದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಲೇಖನ ಬರೆದ ಆರೋಪ ಸಂಜಯ್ ರಾವತ್ ಮೇಲಿದೆ. ರಾವತ್ ಅವರು ತಮ್ಮ ಲೇಖನದ ಮೂಲಕ ಪ್ರಧಾನಿಯ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಭೂತಾಡ ಹೇಳಿದ್ದಾರೆ. ಸಂಜಯ್ ರಾವುತ್ ಅವರು ಡಿಸೆಂಬರ್ 11 ರಂದು ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಈ ಲೇಖನವನ್ನು ಬರೆದಿದ್ದಾರೆ. ಸಂಜಯ್ ‘ಸಾಮ್ನಾ’ದ ಸಂಪಾದಕರೂ ಕೂಡಾ ಹೌದು.
ಬಿಜೆಪಿಯ ಯವತ್ಮಾಲ್ ಸಂಚಾಲಕ ನಿತಿನ್ ಭೂತಾಡ ಅವರು ‘ಸಾಮ್ನಾ’ ಸಂಪಾದಕ ರಾವುತ್ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದರ ಆಧಾರದ ಮೇಲೆ ರಾವುತ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 (ಎ), 505 (2) ಮತ್ತು 124 (ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿವಸೇನೆಯ ಸಂಸದ ತಮ್ಮ ಹೇಳಿಕೆಗಳ ಮೂಲಕ ಮಾತ್ರವಲ್ಲದೆ ತಮ್ಮ ಲೇಖನಿಯ ಮೂಲಕವೂ ತಮ್ಮ ವಿರೋಧಿಗಳ ಮೇಲೆ ದಾಳಿ ನಡೆಸುವ ಮೂಲಕ ಆಗಾಗ್ಗೆ ವಿವಾದಗಳಿಗೆ ಸಿಲುಕುತ್ತಾರೆ.
ಈ ಹಿಂದೆ ಅಹಮದಾಬಾದ್‌ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯದ ಬಗ್ಗೆಯೂ ಅವರು ಬಿಜೆಪಿಯನ್ನು ಗುರಿಯಾಗಿಸಿಕೊಂಡಿದ್ದರು. ಬಿಜೆಪಿ ಕ್ರೀಡೆಯಲ್ಲೂ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು. ಇದರೊಂದಿಗೆ ಇತ್ತೀಚೆಗಷ್ಟೇ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆಯೂ ಹೇಳಿಕೆ ನೀಡಿದ್ದಾರೆ. ಮೂರು ರಾಜ್ಯಗಳಲ್ಲಿ ಬಿಜೆಪಿಯ ಗೆಲುವಿನ ಬಗ್ಗೆ ರಾವತ್, ಕನಿಷ್ಠ ಒಂದು ಚುನಾವಣೆಯನ್ನು ಬ್ಯಾಲೆಟ್ ಪೇಪರ್ ಮೂಲಕ ನಡೆಸಬೇಕಿತ್ತು ಎಂಬ ಹೇಳಿಕೆಯನ್ನು ನೀಡಿದ್ದರು.
ಇದನ್ನೂ ಓದಿ: Police Station: ಪಾಕ್ ಪೊಲೀಸ್ ಠಾಣೆಯಲ್ಲಿ ಆತ್ಮಾಹುತಿ ದಾಳಿ: 3 ಮೃತ್ಯು, ಹಲವರು ಗಂಭೀರ