ಅಸ್ಸಾಂ: ಭಾರತ್ ಜೋಡೋ ಯಾತ್ರೆಯ ಮಾರ್ಗಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅಸ್ಸಾಂ ಪೊಲೀಸರು ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಮತ್ತು ಅದರ ಆಯೋಜಕ ಕೆಬಿ ಬೈಜು ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಗುರುವಾರ ಮಧ್ಯಾಹ್ನ ಯಾತ್ರೆ ಜೋರ್ಹತ್ ಪಟ್ಟಣದ ಮೂಲಕ ಹಾದು ಹೋಗುತ್ತಿದ್ದಂತೆ ರಾಲಿ ಸಂಘಟಕರು ನಿಯೋಜಿತ ನಿರ್ದೇಶನಗಳನ್ನೂ ಗಾಳಿಗೆ ತೂರಿ ಮಾರ್ಗ ಬಡಾವಣೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರ್ಗದಲ್ಲಿ ಹಠಾತ್ ಬದಲಾವಣೆ ಮಾಡಿದ್ದರಿಂದ ಯಾತ್ರೆಗೆ ಅಡ್ಡಿಪಡಿಸಲು ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ, ಯಾತ್ರೆಯ ಸಂಘಟಕರು ಟ್ರಾಫಿಕ್ ಬ್ಯಾರಿಕೇಡ್‌ಗಳನ್ನು ಮುರಿಯಲು ಜನರನ್ನು ಪ್ರಚೋದಿಸಿದರು ಇದನ್ನು ತಡೆಯಲು ಹೋದ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದರು ಎಂದು ಹೇಳಿದ್ದಾರೆ.
ರಾಹುಲ್ ಅವರ ಭಾರತ್ ಜೋಡೋ ಯಾತ್ರೆಯ ವಿರುದ್ಧ ವಿರೋಧ ಪಕ್ಷದ ನಾಯಕರು ಇದೊಂದು ಜನರ ದಿಕ್ಕು ತಪ್ಪಿಸುವ ಯಾತ್ರೆ, ಯಾತ್ರೆಯ ಹೆಸರಿನಲ್ಲಿ ದೇಶದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಯಾತ್ರೆಯ ವೇಳೆ ಜನರ ಹಠಾತ್ ನೂಕುನುಗ್ಗಲಿನಿಂದಾಗಿ ಕೆಲವರು ಬಿದ್ದು ಕಾಲ್ತುಳಿತದಂತಹ ಪರಿಸ್ಥಿತಿ ಸೃಷ್ಟಿಯಾಯಿತು. ಯಾತ್ರೆ ಮತ್ತು ಅದರ ಮುಖ್ಯ ಸಂಘಟಕರ ವಿರುದ್ಧ ಜೋರ್ಹತ್ ಸದರ್ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಜನವರಿ 14 ರಂದು ಮಣಿಪುರದಿಂದ ಆರಂಭವಾದ ಯಾತ್ರೆ ಮಾರ್ಚ್ 20 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ. ಒಟ್ಟಾರೆ ಯೋಜನೆಯು 15 ರಾಜ್ಯಗಳಾದ್ಯಂತ 110 ಜಿಲ್ಲೆಗಳಲ್ಲಿ ಸಂಚರಿಸುವ, 67 ದಿನಗಳಲ್ಲಿ 6,713 ಕಿಮೀ ಯಾತ್ರೆಯನ್ನು ಒಳಗೊಂಡಿದೆ.
ಇದನ್ನೂ ಓದಿ: Ayodhya: ಹೆಚ್ಚಿದ ಭದ್ರತೆ… ಮೂವರು ಅನುಮಾನಾಸ್ಪದ ವ್ಯಕ್ತಿಗಳ ಬಂಧನ, ತೀವ್ರ ವಿಚಾರಣೆ