Advertisement

ನ್ಯಾಯಾಲಯದ ಮೂಲಕವೇ ಜ್ಞಾನೇಂದ್ರ ವಿರುದ್ಧ ಪ್ರಕರಣ: ನಲಪಾಡ್

04:58 PM Apr 09, 2022 | Team Udayavani |

ವಿಜಯಪುರ : ರಾಜ್ಯದಲ್ಲಿ ಹಿಜಾಬ್, ಹಲಾಲ್, ಮುಸ್ಲಿಮರು ತಯಾರಿಸಿದ ಮೂರ್ತಿ ನಿಷೇಧ, ಜಾತ್ರೆಗಳಲ್ಲಿ ಮುಸ್ಲಿಮರಿಗೆ ವ್ಯಾಪಾರ ನಿಷೇಧದಂಥ ವಿವಾದಗಳು ನಡೆಯುತ್ತಿರುವಾಗ ಗೃಹ ಸಚಿವರಂಥ ಹುದ್ದೆಯಲ್ಲಿರುವ ವ್ಯಕ್ತಿ ಬೇಜವಾಬ್ದಾರಿ ಹೇಳಿಕೆ ನೀಡುವುದು ಸಮಾಜದ ಸ್ವಾಸ್ಥ್ಯ ಕದಡುವ ಕೆಲಸ ಮಾಡುತ್ತದೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್  ನಲಪಾಡ್ ಶನಿವಾರ ಕಿಡಿ ಕಾರಿದ್ದಾರೆ.

Advertisement

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅನಗತ್ಯವಾಗಿ ಕೋಮು ಭಾವನೆ ಕೆರಳಿಸುವ ಹೇಳಿಕೆ ನೀಡಿದ್ದರೂ ಗೃಹ ಸಚಿವ ಎಂಬ ಕಾರಣಕ್ಕಾಗಿ ಜ್ಞಾನೇಂದ್ರ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುವುದಿಲ್ಲ. ಹೀಗಾಗಿ, ನ್ಯಾಯಾಲಯದ ಮೂಲಕವೇ ಜ್ಞಾನೇಂದ್ರ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗುತ್ತೇವೆ ಎಂದರು.

ನಾನೊಬ್ಬ ಮುಸಲ್ಮಾನನಾಗಿ ಮೊದಲು ದೇವಸ್ಥಾನಕ್ಕೆ ಬಂದಿದ್ದೇನೆ. ನಾವೆಲ್ಲಾ ಭಾರತೀಯರು, ನಾವೆಲ್ಲಾ ಒಂದು ನಾವೆಲ್ಲಾ ಸೌಹಾರ್ದಯತವಾಗಿ ಬಾಳಬೇಕಿದೆ. ಆದರೆ ಕೇಂದ್ರ-ರಾಜ್ಯ ಸರ್ಕಾರಗಳು ಬೆಲೆ ಏರಿಕೆ ಸೇರಿದಂತೆ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಕೋಮು ಸಂಘರ್ಷ ಹುಟ್ಟು ಹಾಕಲು ಮುಂದಾಗಿವೆ ಎಂದು ಟೀಕಿಸಿದರು.

ಕುರಾನ್, ಬೈಬಲ್ ಭಗವದ್ಗೀತೆ ನಮ್ಮ ಸಂವಿಧಾನ ಎಲ್ಲವೂ ನಮ್ಮ ಪಾಲಿಗೆ ಪವಿತ್ರವೇ. ಆದರೆ ಅಧಿಕಾರದಲ್ಲಿದ್ದರೂ ಜನ ಸೇವೆ ಮಾಡುವಲ್ಲಿ ವಿಫಲವಾಗಿರುವ ಸರ್ಕಾರ ನಡೆಸುವವರು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಧರ್ಮ ಆಧಾರಿತ ವ್ಯಾಪಾರ, ಮಾಂಸದಂಥ ವಿಷಯಗಳನ್ನು ಮುಂದಿಟ್ಟು ಸಮಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರ-ರಾಜ್ಯ ಸರ್ಕಾರಗಳ ಜನ ವಿರೋಧಿ ನಡೆಗಳನ್ನು ಖಂಡಿಸಲು ಕಾಂಗ್ರೆಸ್ ಪಕ್ಷದ ಯುವ ಶಕ್ತಿ ಬೀದಿಗೆ ಇಳಿದಿದೆ. ಕೇಂದ್ರ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿದೆ. ಪರಿಣಾಮ ಜನ ಸಾಮಾನ್ಯರ ಪಾಕೆಟ್‍ನಿಂದ ಹಣ ಕೊಳ್ಳೆ ಹೊಡೆಯುತ್ತಿರುವ ಸರ್ಕಾರ ಖಾಸಗಿ ಕಂಪನಿಗಳಿಗೆ ಕೊಡುವ ಕೆಲಸ ಮಾಡುತ್ತಿದೆ ಎಂದು ಹರಿಹಾಯ್ದರು.

Advertisement

ಬೆಂಗಳೂರಿನಲ್ಲಿ ಯುವಕನ ಕೊಲೆಯ ವಿಷಯದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅರೆಜ್ಞಾನ ಇದ್ದವರು ಮಾತ್ರ ಈ ರೀತಿ ಹೇಳಿಕೆ ನೀಡಲು ಸಾಧ್ಯ. ಜ್ಞಾನ ಇದ್ದವರು, ಸಂಪೂರ್ಣ ಜ್ಞಾನ ಇದ್ದವರೂ ಈ ರೀತಿ ಹೇಳಿಕೆ ನೀಡಲು ಸಾಧ್ಯವಿಲ್ಲ. ನೈತಿಕತೆ ಇದ್ದರೆ ಕೂಡಲೇ ಆರಗ ಜ್ಞಾನೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟಿಲ್ಲ, ನಾಯಕರ ಮಧ್ಯೆ ಮುಖ್ಯಮಂತ್ರಿ ಕುರ್ಚಿಗಾಗಿ ಕಚ್ಚಾಟವಿದೆ ಎಂಬುದೆಲ್ಲ ಸುಳ್ಳು. ನಾನು ಯುವ ಘಟಕದ ರಾಜ್ಯಾಧ್ಯಕ್ಷನಾಗಿ ರಾಜ್ಯದಲ್ಲಿ ಪಕ್ಷ ಸಂಘಟನೆ ಹಂತದಲ್ಲಿ ಧ್ವಜ ಕಟ್ಟುವುದು ಮಾತ್ರ ನನ್ನ ಕೆಲಸ. ಪಕ್ಷದ ಹಿರಿಯ ನಾಯಕರ ವಿಷಯ ನನಗೇನೂ ಗೊತ್ತಿಲ್ಲ, ಆ ಬಗ್ಗೆ ಪ್ರತಿಕ್ರಯಿಸಲು ನಾನು ದೊಡ್ಡವನೂ ಅಲ್ಲ ಎಂದು ಜಾರಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next