ಕೆ.ಆರ್.ಪುರ: “ನಿಮಗೆ ದೋಷವಿದೆ ನಿಮ್ಮ ಕುಟುಂಬದವರ ಪ್ರಾಣಕ್ಕೂ ತೊಂದರೆ ಇದೆ’ ಎಂದು ನಂಬಿಸಿದ ನಕಲಿ ಸ್ವಾಮೀಜಿಯೊಬ್ಬ ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಸಂಬಂಧ ಸಂತ್ರಸ್ತೆಯ ಪೋಷಕರು ಆರೋಪಿ ಆನಂದ್‌ಮೂರ್ತಿ ಮತ್ತು ಆತನ ಪತ್ನಿ ಲತಾ ವಿರುದ್ಧ ಕೆ.ಆರ್.ಪುರ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಹಾಗೂ ಬ್ಲ್ಯಾಕ್‌ಮೇಲ್ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.
ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹಿರಂಡಹಳ್ಳಿಯಲ್ಲಿ ನಕಲಿ ಸ್ವಾಮೀಜಿ ಆನಂದಮೂರ್ತಿ, ಆಶ್ರಮ ಮಾಡಿಕೊಂಡಿದ್ದು ಹಲವು ಮಹಿಳೆಯರಿಗೆ ಇದೇ ಲೈಂಗಿಕ ದೌರ್ಜನ್ಯ ಎಸಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂತ್ರಸ್ತೆ ಕಳೆದ ಐದಾರು ವರ್ಷಗಳ ಹಿಂದೆ ಸ್ನೇಹಿತೆಯ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದು, ಆಗ ಆರೋಪಿ ಸ್ವಾಮೀಜಿಯನ್ನು ಭೇಟಿಯಾಗಿದ್ದರು. ಅದೇ ಸಂದರ್ಭದಲ್ಲಿ ಯುವತಿಯನ್ನು ನೋಡಿ “ನಿಮ್ಮ ಜೀವನದಲ್ಲಿ ಗಂಡಾಂತರವಿದೆ. ಅದರಿಂದ ನಿಮ್ಮ ಕುಟುಂಬ ಸದಸ್ಯರಿಗೂ ತೊಂದರೆಯಾಗಲಿದೆ. ಪ್ರಾಣ ಕಳೆದುಕೊಳ್ಳುವ ಸನ್ನಿವೇಶ ಇದೆ. ನಾನು ಕಾಳಿದೇವಿಯ ಆರಾಧಕನಾಗಿದ್ದು ನಿಮ್ಮ ಕಷ್ಟಗಳನ್ನು ನಿವಾರಿಸುವೆ’ ಎಂದು ಸಂತ್ರಸ್ತೆಗೆ ನಂಬಿಸಿದ್ದಾನೆ. ಸ್ವಾಮೀಜಿ ಮಾತು ನಂಬಿದ ಸಂತ್ರಸ್ತೆ, ಆತ ಸೂಚಿಸಿದ ಮನೆಗೆ ಹೋಗಿದ್ದಾರೆ. ಈ ವೇಳೆ ಆಕೆಗೆ ಮತ್ತು ಬರುವ ಔಷಧ ಹಾಕಿ ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅದಕ್ಕೆ ಸ್ವಾಮೀಜಿಯ ಪತ್ನಿ ಲತಾ ಕೂಡ ಸಹಕಾರ ನೀಡಿದ್ದಾರೆ. ಬಳಿಕ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾಳೆ. ಯಾರಿಗಾದರೂ ವಿಷಯ ತಿಳಿಸಿದರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದರು. ಹೀಗಾಗಿ ಸಂತ್ರಸ್ತೆ ತನ್ನ ಮನೆಯವರಿಗೆ ಹೇಳಿರಲಿಲ್ಲ. ಹೀಗಾಗಿ ಆರೋಪಿ ಸಂತ್ರಸ್ತೆ ಮೇಲೆ ಸುಮಾರು ನಾಲ್ಕೈದು ವರ್ಷಗಳಿಂದ ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ಪೋಷಕರು ಆರೋಪಿಸಿದ್ದಾರೆ.
ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್ : ಮತ್ತೂಂದೆಡೆ ಸಂತ್ರಸ್ತೆಗೆ ನಿಶ್ಚಿತಾರ್ಥವಾಗಿದ್ದು, ಈ ವಿಚಾರ ತಿಳಿದ ಆರೋಪಿಗಳು, ಮದುವೆಯಾಗುವ ಯುವಕನನ್ನು ಭೇಟಿಯಾಗಿ ಯುವತಿ ಜತೆಗಿನ ಅಶ್ಲೀಲ ವಿಡಿಯೋ ತೋರಿಸಿ ನಿಶ್ಚಿತಾರ್ಥ ರದ್ದುಪಡಿಸಿದ್ದಾರೆ. ಅಲ್ಲದೆ, ಯುವತಿ ಪೋಷಕರಿಗೂ ಬೇರೆರೊಬ್ಬರ ಜತೆ ಮದುವೆ ಮಾಡಿದರೆ ವಿಡಿಯೋ ಮತ್ತು ಫೋಟೋಗಳನ್ನು ವೈರಲ್ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಈ ಸಂಬಂಧ ಸಂತ್ರಸ್ತೆ ಪೋಷಕರು ದೂರು ನೀಡಿದ್ದಾರೆ. ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.