Advertisement

ನಕಲಿ ವೈದ್ಯೆ ವಿರುದ್ಧ ಪ್ರಕರಣ ದಾಖಲು

06:23 PM Sep 05, 2020 | Suhan S |

ಬಳ್ಳಾರಿ: ನಗರದ ರೂಪನಗುಡಿ ರಸ್ತೆಯ ಮನೆಯೊಂದರಲ್ಲಿ ಕ್ಲಿನಿಕ್‌ ನಡೆಸುತ್ತಿದ್ದ ನಕಲಿ ವೈದ್ಯರೊಬ್ಬರನ್ನು ನೆರೆಹೊರೆಯವರ ಸಹಕಾರದಿಂದ ಪತ್ತೆಹಚ್ಚಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ಲಿನಿಕ್‌ನ್ನು ಬಂದ್‌ ಮಾಡಿ, ನಕಲಿ ವೈದ್ಯರ ವಿರುದ್ಧ ನಗರದ ಬ್ರೂಸ್‌ ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.

Advertisement

ನಾಜೀನ್‌ ನಕಲಿ ವೈದ್ಯೆ. ನೆರೆಯ ಆಂಧ್ರ ಪ್ರದೇಶದಲ್ಲಿ ಪ್ಯಾರಾಮೆಡಿಕಲ್‌ ವ್ಯಾಸಂಗ ಮಾಡಿರುವ ಪ್ರಮಾಣ ಪತ್ರವನ್ನು ಹೊಂದಿರುವ ನಾಜೀನ್‌ ಎನ್ನುವವರು ನಗರದ ರೂಪನಗುಡಿ ರಸ್ತೆಯಲ್ಲಿ ಮನೆಯೊಂದರಲ್ಲಿ ಕಳೆದ ಹಲವು ವರ್ಷಗಳಿಂದ ವೈದ್ಯರೆಂದು ಹೇಳಿಕೊಂಡು ಕ್ಲಿನಿಕ್‌ ತೆರೆದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಚಿಕಿತ್ಸೆಗಾಗಿ ಬಂದ ರೋಗಿಗಳು ನೆರೆಹೊರೆಯ ಮನೆಗಳ ಮುಂದೆಯೇ ವಾಂತಿ ಮಾಡಿಕೊಳ್ಳುವುದು, ವಯೋವೃದ್ಧ ರೋಗಿಗಳು ಸಮೀಪದಲ್ಲೇ ಮೂತ್ರ ವಿಸರ್ಜನೆ ಮಾಡಿಸುವುದು, ಬಳಸಿದ ವಸ್ತುಗಳನ್ನು ಪಕ್ಕದ ತಿಪ್ಪೆಗುಂಡಿಯಲ್ಲೇ ಎಸೆಯುವುದು ಸೇರಿ ಇನ್ನಿತರೆ ಸಮಸ್ಯೆಗಳು ನೆರೆಹೊರೆಯವರಿಗೆ ಕಿರಿಕಿರಿ ಉಂಟು ಮಾಡಿದೆ. ಈ ಕುರಿತು ನಾಜೀನ್‌ ಅವರಿಗೆ ಮನವರಿಕೆ ಮಾಡಿದರೂ ಕೇಳಿಲ್ಲ. ಇದರಿಂದ ಬೇಸತ್ತ ನೆರೆಹೊರೆಯವರು ಆರೋಗ್ಯ ಇಲಾಖೆಯ ಗಮನ ಸೆಳೆದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು ನಾಜೀನ್‌ ಅವರ ಪ್ರಮಾಣ ಪತ್ರಗಳನ್ನು ಪರಿಶೀಲಿಸಿ ನಕಲಿ ವೈದ್ಯೆ ಎಂದು ಖಚಿತಪಡಿಸಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಪ್ಯಾರಾಮೆಡಿಕಲ್‌ ವ್ಯಾಸಂಗದ ಪ್ರಮಾಣ ಪತ್ರದಿಂದ ಬಳ್ಳಾರಿಯಲ್ಲಿ ಕ್ಲಿನಿಕ್‌ ತೆರೆದು ಚಿಕಿತ್ಸೆ ನೀಡಲು ಅನುಮತಿ ನೀಡುವಂತೆ ಅನುಮತಿ ನೀಡಿದವರು ಯಾರು ಎಂದು ಪ್ರಶ್ನಿಸಿದರೆ, ಅದಕ್ಕೆ ನಾಜೀನ್‌ ಅವರು ನನಗೆ ಕ್ಲಿನಿಕ್‌ ನಡೆಸಲು ಅನುಮತಿ ಇದೆ ಎಂದು ಡ್ರಗ್‌ ಕಂಟ್ರೋಲ್‌ನವರು ದಾಳಿ ನಡೆಸಿ ಔಷಧ ಬಳಕೆಗೆ ನಿರ್ಬಂಧ ಹೇರಿ ನೀಡಿದ್ದ ದಾಖಲೆಗಳನ್ನು ತೋರಿಸಿದ್ದಾರೆ. ಮೇಲಾಗಿ ವೈದ್ಯಾಧಿಕಾರಿಗಳ ಜತೆಗೂ ವಾಗ್ವಾದ ನಡೆಸಿದ ಅವರು, ಎಲ್ಲ ಆರ್‌ ಎಂಪಿ ಕ್ಲಿನಿಕ್‌ಗಳನ್ನು ಬಂದ್‌ ಮಾಡಿದರೆ ಮಾತ್ರ ನನ್ನ ಕ್ಲಿನಿಕ್‌ನ್ನು ಬಂದ್‌ ಮಾಡುತ್ತೇನೆ ಎಂದು ದಬಾಯಿಸಿದರು.

ಬಳಿಕ ಕ್ಲಿನಿಕ್‌ನ್ನು ಪರಿಶೀಲಿಸಿದ ವೈದ್ಯಾಧಿಕಾರಿ ಡಾ| ರವಿಚಂದ್ರ ಅವರು, ಅಲ್ಲಿದ್ದ ಗ್ಲೂಕೊಸ್‌ ಬಾಟಲ್‌ ಸೇರಿ ಇನ್ನಿತರೆ ಔಷಧ, ಮಾತ್ರೆಗಳನ್ನು ಸೀಜ್‌ ಮಾಡಿ ಕೊಂಡೊಯ್ದರು. ಬಳಿಕ ಬ್ರೂಸ್‌ ಪೇಟೆ ಪೊಲೀಸ್‌ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ನಕಲಿ ವೈದ್ಯೆ ನಾಜೀನ್‌ ವಿರುದ್ಧ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next