ಸಿದ್ದಾಪುರ: ಬೈಂದೂರು-ವಿರಾಜಪೇಟೆ ರಾಜ್ಯ ಹೆದ್ದಾರಿಯ ಆರ್ಡಿ ಕೊಂಜಾಡಿ ತಿರುವಿನಲ್ಲಿ ಶನಿವಾರ ಬೆಳಗ್ಗೆ ಸ್ವಿಫ್ಟ್ ಕಾರುಗಳ ನಡುವೆ ಸಂಭವಿಸಿದ ಢಿಕ್ಕಿಯಲ್ಲಿ ಎರಡೂ ಕಾರುಗಳು ಜಖಂಗೊಂಡಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿನಿಂದ ಕುಟುಂಬ ಸಹಿತರಾಗಿ ಶಂಕರನಾರಾಯಣದಲ್ಲಿ ರವಿವಾರ ನಡೆಯಲಿರುವ ಮದುವೆ ಸಮಾರಂಭಕ್ಕೆ ಆಗುಂಬೆ ಮಾರ್ಗವಾಗಿ ಬರುತ್ತಿದ್ದ ಸ್ವಿಫ್ಟ್ ಕಾರಿಗೆ ಕೊಲ್ಲೂರಿನಲ್ಲಿ ದೇವರ ದರ್ಶನ ಮುಗಿಸಿ ಬೆಂಗಳೂರಿಗೆ ವಾಪಸಾಗುತ್ತಿದ್ದ ಪ್ರವಾಸಿರ ಸ್ವಿಫ್ಟ್ ಕಾರು ಢಿಕ್ಕಿ ಹೊಡೆದಿತ್ತು. ಢಿಕ್ಕಿಯ ಪರಿಣಾಮ ಎರಡೂ ಕಾರುಗಳ ಎದುರು ಭಾಗ ಜಖಂಗೊಂಡಿದೆ.
ಮದುವೆ ಇನ್ನಿತರ ಸಮಾರಂಭಗಳಿಗೆ ತೆರಳುವವರ ವಾಹನಗಳ ದಟ್ಟಣೆಯಿಂದ ಕೂಡಿರುತ್ತಿದ್ದ ಈ ಮಾರ್ಗದಲ್ಲಿ ಬೆಳಗ್ಗಿನ ಸಮಯ ವಾಹನಗಳ ಓಡಾಟ ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ಸಂಭವಿಸ ಬಹುದಾದ ಭಾರಿ ಅನಾಹುತ ತಪ್ಪಿದೆ.
ಈ ಅಪಘಾತದಿಂದ ಸುಮಾರು ಅರ್ಧ ಗಂಟೆಗೂ ಮಿಕ್ಕಿ ರಾಜ್ಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿದೆ.
ಸ್ಥಳೀಯರು ಜಖಂಗೊಂಡ ಕಾರುಗಳನ್ನು ತೆರವು ಗೊಳಿಸಿ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅನು ಕೂಲ ಮಾಡಿಕೊಟ್ಟರು.