Advertisement

ಆಸ್ಟ್ರೇಲಿಯನ್‌ ಓಪನ್‌ಗೆ ವೋಜ್ನಿಯಾಕಿ ನೂತನ ರಾಣಿ

06:00 AM Jan 28, 2018 | Team Udayavani |

ಮೆಲ್ಬರ್ನ್: ಪ್ರತಿಷ್ಠಿತ ಮತ್ತು ವರ್ಷದ ಪ್ರಥಮ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಕೂಟವಾದ ಆಸ್ಟ್ರೇಲಿಯನ್‌ ಓಪನ್‌ಗೆ ಡೆನ್ಮಾರ್ಕ್‌ನ ಕ್ಯಾರೋಲಿನಾ ವೋಜ್ನಿಯಾಕಿ ನೂತನ ರಾಣಿಯಾಗಿದ್ದಾರೆ. ಇದು ವೋಜ್ನಿಯಾಕಿಗೆ ವೃತ್ತಿ ಜೀವನದ ಮೊದಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯೂ ಹೌದು.

Advertisement

ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಫೈನಲ್‌ನಲ್ಲಿ ವೋಜ್ನಿಯಾಕಿ 7-6(7/2), 3 -6, 6-4 ರಿಂದ ವಿಶ್ವ ನಂ.1 ಆಟಗಾರ್ತಿ ಸಿಮೋನಾ ಹಾಲೆಪ್‌ ವಿರುದ್ಧ ಗೆಲುವು ಪಡೆದರು. ಇಬ್ಬರಿಗೂ ಆಸ್ಟ್ರೇಲಿಯನ್‌ ಓಪನ್‌ನ ಮೊದಲ ಫೈನಲ್‌ ಆಗಿತ್ತು. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ಪಂದ್ಯದಲ್ಲಿ ರೊಮೇನಿಯಾದ ಹಾಲೆಪ್‌ ಸೋಲುಂಡರು.

ಆರಂಭಕ್ಕೂ ಮುನ್ನವೇ ಹೋರಾಟದ ನಿರೀಕ್ಷೆ:
ಸದ್ಯ ಇಬ್ಬರು ಆಟಗಾರ್ತಿಯರು ಭರ್ಜರಿ ಫಾರ್ಮ್ನಲ್ಲಿದ್ದು, ಪ್ರಬಲ ಸ್ಪರ್ಧಿಗಳಾಗಿದ್ದರು. ಒಬ್ಬರು ವಿಶ್ವ ನಂ.1 ಆಗಿದ್ದರೆ, ಮತ್ತೂಬ್ಬರು ವಿಶ್ವ ನಂ.2 ಆಗಿದ್ದರು. ಈ ಗ್ರ್ಯಾನ್‌ಸ್ಲಾಮ್‌ಗೂ ಮುನ್ನ ವೋಜ್ನಿಯಾಕಿ ಯುಎಸ್‌ ಓಪನ್‌ನಲ್ಲಿ 2009 ಮತ್ತು 2014 ರಲ್ಲಿ ಫೈನಲ್‌ ತಲುಪಿ ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತರಾಗಿದ್ದರು. ಇದುವೇ ವೋಜ್ನಿಯಾಕಿಯ ಗರಿಷ್ಠ ಸಾಧನೆಯಾಗಿತ್ತು. ಅದೇ ರೀತಿ ಹಾಲೆಪ್‌ ಫ್ರೆಂಚ್‌ ಓಪನ್‌ನಲ್ಲಿ 2014 ಮತ್ತು 2014ರಲ್ಲಿ ಫೈನಲ್‌ ತಲುಪಿ ರನ್ನರ್‌ ಅಪ್‌ ಸ್ಥಾನ ಪಡೆದಿದ್ದರು. ಹೀಗಾಗಿ ಸಹಜವಾಗಿ ಪಂದ್ಯಕ್ಕೂ ಮುನವೇ ಭಾರೀ ಹೋರಾಟದ ನಿರೀಕ್ಷೆ ಅಭಿಮಾನಿಗಳಲ್ಲಿತ್ತು.

ಮೊದಲ ಸೆಟ್‌ನಲ್ಲಿ ತೀವ್ರ ಹೋರಾಟ:
ನಿರೀಕ್ಷೆಯಂತೆ ಮೊದಲ ಸೆಟ್‌ನಲ್ಲಿ ಇಬ್ಬರು ಆಟಗಾರ್ತಿಯರ ನಡುವೆ ಭಾರೀ ಸ್ಪರ್ಧೆ ಕಂಡುಬಂತು. ಇಬ್ಬರ ನಡುವಿನ ಕಾಳಗದಲ್ಲಿ ಯಾರು ಗೆಲುವು ಸಾಧಿಸುತ್ತಾರೆ ಅನ್ನುವುದೇ ಕಷ್ಟವಾಗಿತ್ತು. ಟೆನಿಸ್‌ ಅಭಿಮಾನಿಗಳನ್ನು ತುದಿಗಾಗಲ್ಲಿ ನಿಲ್ಲಿಸಿತ್ತು. ಅಂತಿಮವಾಗಿ ಟೈಬ್ರೇಕ್‌ನಲ್ಲಿ ವೋಜ್ನಿಯಾಕಿ ಗೆಲುವು ಸಾಧಿಸಿ ಮೇಲುಗೈ ಸಾಧಿಸಿದರು.

ತಿರುಗೇಟು ನೀಡಿದ ಹಾಲೆಪ್‌:
ಮೊದಲ ಸೆಟ್‌ನಲ್ಲಿ ಹೋರಾಟದ ಸೋಲುಂಡ ಹಾಲೆಪ್‌ ನಿರೀಕ್ಷೆಯಂತೆ 2ನೇ ಸೆಟ್‌ನಲ್ಲಿ ತಿರುಗಿಬಿದ್ದರು. ಎದುರಾಳಿಯ ಸರ್ವ್‌ಗಳಿಗೆ ತಕ್ಕ ತಿರುಗೇಟು ನೀಡಿದರು. ಹಾಲೆಪ್‌ ಹೊಡೆತಕ್ಕೆ ವೋಜ್ನಿಯಾಕಿ ಕಕ್ಕಾಬಿಕ್ಕಿಯಾದರು. ಇದರಿಂದಾಗಿ ಹಾಲೆಪ್‌ 6-3 ರಿಂದ ಸುಲಭ ಜಯ ಸಾಧಿಸಿ ಪಂದ್ಯವನ್ನು ಸಮಬಲಕ್ಕೆ ತಂದರು. ಇದರಿಂದಾಗಿ ಪಂದ್ಯ ನಿರ್ಣಾಯಕ ಮೂರನೇ ಸೆಟ್‌ಗೆ ಹೋಯಿತು.

Advertisement

ನಿರ್ಣಾಯಕ ಸೆಟ್‌ನಲ್ಲಿ ಜಾರಿದ ಹಾಲೆಪ್‌:
ಒಮ್ಮೆ ಈ ಸೆಟ್‌ ಹಾಲೆಪ್‌ ಗೆದ್ದರೆ ಆಕೆಗೂ ಮೊದಲ ಗ್ರ್ಯಾನ್‌ಸ್ಲಾಮ್‌ ಕಿರೀಟವಾಗುತ್ತಿತ್ತು. ಆದರೆ ಅದಕ್ಕೆ ವೋಜ್ನಿಯಾಕಿ ಅವಕಾಶ ನೀಡಲಿಲ್ಲ. ಮೂರನೇ ಸೆಟ್‌ನ ಆರಂಭದಿಂದಲೇ ವೋಜ್ನಿಯಾಗಿ ಮುನ್ನಡೆ ಪಡೆಯುತ್ತಾ ಆತ್ಮವಿಶ್ವಾಸ ಬೆಳೆಸಿಕೊಂಡರು. ಹಾಲೆಪ್‌ ಪ್ರಯತ್ನಿಸಿದರೂ ಅದು ಫ‌ಲ ನೀಡಲಿಲ್ಲ. ಅಂತಿಮವಾಗಿ 3ನೇ ಸೆಟ್‌ನಲ್ಲಿ ವೋಜ್ನಿಯಾಗಿ 6-4 ರಿಂದ ಗೆದ್ದು ಆಸ್ಟ್ರೇಲಿಯನ್‌ ಓಪನ್‌ಗೆ ಹೊಸ ರಾಣಿಯಾದರು. ಈ ಮೂಲಕ ವೋಜ್ನಿಯಾಕಿ ಮುಂದಿನ ವಾರ ಬಿಡುಗಡೆಯಾಗಲಿರುವ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೆ ಜಿಗಿಯುವುದು ಖಚಿತವಾಗಿದೆ. ಇದು ವೋಜ್ನಿಯಾಕಿಗೆ 6 ವರ್ಷಗಳ ನಂತರ ನಂ.1 ಪಟ್ಟ ದೊರೆತಂತಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next