ಹೊಸದಿಲ್ಲಿ: ಸ್ಪೇನ್‌ನ ಕಾರ್ಲೋಸ್ ಅಲ್ಕರಾಝ್ ಅವರ ಅಮೋಘ ಆಟದಿಂದಾಗಿ ಸ್ಪೇನ್ ತಂಡವು ದಕ್ಷಿಣ ಕೊರಿಯವನ್ನು ಸೋಲಿಸಿ ಡೇವಿಸ್ ಕಪ್ ಕೂಟದಲ್ಲಿ ಕ್ವಾರ್ಟರ್‌ಫೈನಲಿಗೇರಿದ ಸಾಧನೆ ಮಾಡಿತು.
ದಕ್ಷಿಣ ಕೊರಿಯದ ಕ್ವಾನ್ ಸೂನ್ ವೂ ಅವರನ್ನು 6-4, 7-6 (1) ಸೆಟ್‌ಗಳಿಂದ ಅಲ್ಕರಾಝ್ ಸೋಲಿಸಿದರು. ಇದು ವಿಶ್ವದ ನಂಬರ್ ವನ್ ಸ್ಥಾನ ಅಲಂಕರಿಸಿದ ಬಳಿಕ ಅವರ ಮೊದಲ ಗೆಲುವು ಆಗಿದೆ. ಈ ಮೊದಲು ರಾಬೆರ್ಟೊ ಬಾಟಿಸ್ಟ ಆಗುಟ್ ಅವರು ಹಾಂಗ್ ಸಿಯಾಂಗ್ ಚಾನ್ ಅವರನ್ನು 6-1, 6-3 ಸೆಟ್‌ಗಳಿಂದ ಸೋಲಿಸುವ ಮೂಲಕ ಸ್ಪೇನ್‌ಗೆ ಮುನ್ನಡೆ ಒದಗಿಸಿಕೊಟ್ಟಿದ್ದರು.
ಆರು ಬಾರಿಯ ವಿಜೇತ ಸ್ಪೇನ್ ತಂಡವು ಕ್ವಾರ್ಟರ್‌ಫೈನಲ್‌ನಲ್ಲಿ ಕ್ರೊವೇಶಿಯವನ್ನು ಎದುರಿಸಲಿದೆ. ಬೊಲೊಗ್ನದಲ್ಲಿ ನಡೆದ ಇನ್ನೊಂದು ಹೋರಾಟದಲ್ಲಿ ಇಟಲಿ ತಂಡವು ಸ್ವೀಡನ್ ತಂಡವನ್ನು ಸೋಲಿಸಿದ್ದರಿಂದ ಕ್ರೊವೇಶಿಯ ಅಂತಿಮ ಎಂಟರ ಸುತ್ತಿಗೇರಿತ್ತು. “ಎ’ ಬಣದಲ್ಲಿ ನಡೆದ ಈ ಹೋರಾಟದಲ್ಲಿ ಕ್ರೊವೇಶಿಯ ಮೊದಲು ಇಟಲಿ ವಿರುದ್ಧ 0-3 ಅಂತರದಿಂದ ಸೋತಿತ್ತು. ಆಬಳಿಕ ಸ್ವೀಡನ್ (2-1) ಮತ್ತು ಆರ್ಜೆಂಟೀನಾ ವಿರುದ್ಧ 3-0 ಅಂತರದಿಂದ ಜಯಿಸಿತ್ತು.
ಹ್ಯಾಂಬರ್ಗ್‌ನಲ್ಲಿ ನಡೆದ “ಸಿ’ ಬಣದ ಹೋರಾಟದಲ್ಲಿ ಜರ್ಮನಿ ಮತ್ತು ಆಸ್ಟ್ರೇಲಿಯ ತಮ್ಮ ಅಂತಿಮ ಸುತ್ತಿನ ಪಂದ್ಯಾಟದಲ್ಲಿ ಅನುಕ್ರಮವಾಗಿ ಫ್ರಾನ್ಸ್ ಮತ್ತು ಬೆಲ್ಜಿಯಂ ವಿರುದ್ಧ ಜಯ ಸಾಧಿಸಿತ್ತು. ಬಣದ ಮೊದಲೆರಡು ಸ್ಥಾನ ಪಡೆದ ಜರ್ಮನಿ ಮತ್ತು ಆಸ್ಟ್ರೇಲಿಯ ಕ್ವಾರ್ಟರ್‌ಫೈನಲಿಗೇರಿದೆ.
ಕ್ವಾರ್ಟರ್‌ಫೈನಲ್ ಹೋರಾಟವು ಮಲಗದಲ್ಲಿ ನ. 22ರಿಂದ 27ರ ವರೆಗೆ ನಡೆಯಲಿದೆ. ತವರಿನಲ್ಲಿ ನಡೆಯಲಿರುವ ಕಾರಣ ಸ್ಪೇನ್ ತಂಡಕ್ಕೆ ಮುನ್ನಡೆಯುವ ಉತ್ತಮ ಅವಕಾಶ ಲಭಿಸಿದೆ.