Advertisement

ಮಳೆಗಾಲದ ಸಾಂಕ್ರಾಮಿಕ ರೋಗಗಳು: ಇರಲಿ ಮುನ್ನೆಚ್ಚರಿಕೆ

02:50 AM Jun 02, 2018 | Karthik A |

ಉಡುಪಿ: ಮಳೆಗಾಲ ಬಂತೆಂದರೆ ಸಾಂಕ್ರಾಮಿಕ ರೋಗ ಭೀತಿ ಆರಂಭಗೊಳ್ಳುತ್ತದೆ. ಸಾಂಕ್ರಾಮಿಕ ರೋಗಗಳ ಹಾವಳಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಆರೋಗ್ಯ ಇಲಾಖೆ ನಿರಂತರವಾಗಿ ಪ್ರಯತ್ನಿಸುತ್ತಲೇ ಇದೆ. ಇದರಿಂದಾಗಿ ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣ‌ಗಳ ಸಂಖ್ಯೆ ಕಡಿಮೆಯಾಗಿದೆ. ಕಳೆದ ವರ್ಷದ ಅಂಕಿ ಅಂಶ ಗಮನಿಸಿದಾಗ ಈ ಬಾರಿ ಜನವರಿಯಿಂದ ಎಪ್ರಿಲ್‌ ವರೆಗೆ ಅಧಿಕ ಸಂಖ್ಯೆಯ ಕರುಳು ಬೇನೆ ಪ್ರಕರಣ ಅಂದರೆ 144 ಪ್ರಕರಣಗಳು ದಾಖಲಾಗಿತ್ತು. ಮಲೇರಿಯಾ – 39, ಡೆಂಗ್ಯೂ – 21, ಇಲಿಜ್ವರ – 24, ಜಾಂಡೀಸ್‌ – 9, ಕಾಲರಾ – 0, ಎಚ್‌1ಎನ್‌1 – 0 ಪ್ರಕರಣಗಳು ದಾಖಲಾಗಿವೆ. ವರ್ಷದಿಂದ ವರ್ಷಕ್ಕೆ ಸಾಂಕ್ರಾಮಿಕ ರೋಗಗಳ ಸಂಖ್ಯೆ ಕ್ಷೀಣಿಸುತ್ತಿವೆ.  

Advertisement

ರೋಗಗಳ ಲಕ್ಷಣಗಳು
ಜ್ವರ ಬರುವುದು, ಕಣ್ಣಿನ ಹಿಂಭಾಗ ನೋವು, ತಲೆನೋವು, ಸಂಧಿನೋವು, ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡರೆ ಅದು ಡೆಂಗ್ಯೂ ಜ್ವರದ ಲಕ್ಷಣ. ಶೀತ, ತಲೆನೋವು, ಕೆಮ್ಮು, ಮೈಮೇಲೆ ಬೊಕ್ಕೆಗಳು ಕಾಣಿಸಿಕೊಳ್ಳುವುದು, ಉಸಿರಾಟದ ತೊಂದರೆ, ಎದೆ, ಹೊಟ್ಟೆಯಲ್ಲಿ ನೋವು, ತಲೆ ಸುತ್ತುವುದು, ಆಗಾಗ ವಾಂತಿ, ಅತಿಸಾರ ಭೇದಿ, ಎಚ್ಚರ ತಪ್ಪುವುದು ಮುಂತಾದವು ಎಚ್‌1ಎನ್‌1ನ ಲಕ್ಷಣಗಳಾಗಿವೆ. ಜ್ವರ, ಮಾಂಸ ಖಂಡಗಳ ನೋವು, ತಲೆನೋವು, ಮೈಕೈ ನೋವು ಇಲಿಜ್ವರದ ಲಕ್ಷಣಗಳಾಗಿವೆ. ನಡುಕದಿಂದ ಕೂಡಿದ ಜ್ವರ, ತಲೆನೋವು, ಜ್ವರದ ಏರಿಳಿತ, ವಾಂತಿ ಮೊದಲಾದವು ಮಲೇರಿಯಾದ ಪ್ರಮುಖ ಲಕ್ಷಣಗಳಾಗಿವೆ.

ಇಲಾಖೆ ಕಾರ್ಯಕ್ರಮಗಳು
ಮಳೆಗಾಲದಲ್ಲಿ ಹೆಚ್ಚಾಗಿ ನೀರಿನಿಂದ ಬರಬಹುದಾದ ಸಾಂಕ್ರಾಮಿಕ ರೋಗಗಳಲ್ಲಿ ಡಯೇರಿಯಾ (ವಾಂತಿ ಭೇದಿ), ಸೊಳ್ಳೆಯಿಂದ ಬರುವ ಮಲೇರಿಯಾ, ಡೆಂಗ್ಯೂ ರೋಗಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇಲಾಖೆಯಿಂದ ಅತಿಸಾರ ನಿಯಂತ್ರಣ ಪಾಕ್ಷಿಕ ನಡೆಸಲಾಗುತ್ತಿದೆ. ಮನೆಗೆ ಭೇಟಿ ನೀಡಿ 5 ವರ್ಷದೊಳಗಿನ ಮಕ್ಕಳಿಗೆ ಭೇದಿ ಇದ್ದರೆ ಅವರಿಗೆ ORS ನೀಡಿ ಹತೋಟಿಗೆ ತರುವ ಕಾರ್ಯ, ರಕ್ತ ಪರೀಕ್ಷೆ ಇತ್ಯಾದಿಗಳನ್ನು ನಡೆಸಿ ವರದಿ ಸಲ್ಲಿಸಲಾಗುತ್ತಿದೆ. 

ಆರೋಗ್ಯ ಶಿಕ್ಷಣ
ಜಿಲ್ಲೆಯ ಆಯಾಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಪ್ರಯೋಗಾಲಯದಲ್ಲಿ ಸಾರ್ವಜನಿಕ ಬಾವಿಯ ನೀರು ಕುಡಿಯಲು ಯೋಗ್ಯವಿದೆಯೇ ಎಂದು ಪರೀಕ್ಷೆ ನಡೆಸಲಾಗುತ್ತಿದೆ. ಕುಡಿಯಲು ಯೋಗ್ಯವಲ್ಲದ ಬಾವಿಗಳ ಬಗ್ಗೆ ಗ್ರಾ.ಪಂ.ಗೆ ಸ್ವಚ್ಛಗೊಳಿಸುವುದಕ್ಕೆ ಮಾಹಿತಿ ನೀಡಲಾಗುವುದು. ಸಾಂಕ್ರಾಮಿಕ ರೋಗದ ಬಗ್ಗೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು ತಮ್ಮ ಪ್ರದೇಶ ವ್ಯಾಪ್ತಿಯಲ್ಲಿ ಮನೆಗಳಿಗೆ ತೆರಳಿ ಆರೋಗ್ಯ ಶಿಕ್ಷಣ ನೀಡುತ್ತಿದ್ದಾರೆ.
– ಡಾ| ರೋಹಿಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು

ದೃಢಪಟ್ಟ ಪ್ರಕರಣಗಳು
2014ರಲ್ಲಿ 1,639, 2015ರಲ್ಲಿ 1,366, 2016ರಲ್ಲಿ 1,168, 2017ರಲ್ಲಿ 513, 2018ರ ಮೇ 17ರವರೆಗೆ ಸುಮಾರು 39 ಮಲೇರಿಯಾ ಪ್ರಕರಣಗಳು ದಾಖಲಾಗಿವೆ. ಉಡುಪಿ ಮತ್ತು ಕುಂದಾಪುರಗಳಲ್ಲಿ ಬೇರೆ ಜಿಲ್ಲೆಗಳ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.  ಬಯಲು ಪ್ರದೇಶದಲ್ಲಿ, ಕೊಳಚೆ ಪ್ರದೇಶಗಳ ಪಕ್ಕದಲ್ಲಿಯೇ ಮಲಗುವುದರಿಂದ ಮಲೇರಿಯಾ ಹೆಚ್ಚು ಹರಡುತ್ತಿದೆ. ಇಂತಹ ಕಾರ್ಮಿಕರನ್ನು ನಿರಂತರವಾಗಿ ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆ, ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತಿದೆ. 
– ಪ್ರೇಮಾನಂದ ಕೆ., ಜಿಲ್ಲಾ ಮಲೇರಿಯಾ ಅಧಿಕಾರಿ ಉಡುಪಿ.

Advertisement

— ಎಸ್‌.ಜಿ. ನಾಯ್ಕ

Advertisement

Udayavani is now on Telegram. Click here to join our channel and stay updated with the latest news.

Next