Advertisement

ನಟ ಸುಶಾಂತ್‌ ಸಾವಿನ ಹಿಂದೆ ವೃತ್ತಿ ವೈಷಮ್ಯ?

03:59 AM Jun 17, 2020 | Lakshmi GovindaRaj |

ಮುಂಬೈ: ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಹಿಂದೆ ವೃತ್ತಿ ವೈಷಮ್ಯದ ಕೈವಾಡ ಇದೆಯೇ ಎಂಬ ಬಗ್ಗೆ ತನಿಖೆ ನಡೆಸುವುದಾಗಿ ಮಹಾರಾಷ್ಟ್ರ ಸರ್ಕಾರ ಹೇಳಿದೆ. ಇದೇ ವೇಳೆ ಸುಶಾಂತ್‌ರನ್ನು ಬಾಲಿವುಡ್‌ ಅತ್ಯಂತ ಕೆಟ್ಟ ರೀತಿಯಲ್ಲಿ ನಡೆಸಿಕೊಂಡಿದೆ ಎಂದು ರಾಜಕಾರಣಿ, ಚಿತ್ರ ನಿರ್ದೇಶಕರು ದೂರಿದ್ದಾರೆ. ಸುಶಾಂತ್‌ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವನಲ್ಲ. ಆತನನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ಕುಟುಂಬ ಸದಸ್ಯರು ಅನುಮಾನ  ವ್ಯಕ್ತಪಡಿಸಿದ್ದರು.

Advertisement

ಜೊತೆಗೆ, ಬಾಲಿವುಡ್‌ ಹಾಗೂ ಅಭಿಮಾನಿಗಳ ವಲಯದಲ್ಲಿ ಸುಶಾಂತ್‌ರ ಅಕಾಲಿಕ ನಿಧನದ ಕುರಿತು ಬೇಸರ, ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಗೃಹ ಸಚಿವ ಅನಿಲ್‌ ದೇಶ್‌ಮುಖ್‌, “ಸುಶಾಂತ್‌ ವೃತ್ತಿ ವೈಷಮ್ಯದಿಂದಾಗಿ  ಖಿನ್ನತೆಗೆ ಒಳಗಾಗಿದ್ದರು ಎಂದು ವರದಿಗಳು ಹೇಳುತ್ತಿವೆ. ಈ ಅಂಶವನ್ನೇ ದೃಷ್ಟಿಯಲ್ಲಿರಿಸಿಕೊಂಡು ಪೊಲೀಸರು ತನಿಖೆ ನಡೆಸಲಿದ್ದಾರೆ,’ ಎಂದು ಹೇಳಿದ್ದಾರೆ.

ಸುಶಾಂತ್‌ ಅತ್ತಿಗೆ ಸಾವು: ಸುಶಾಂತ್‌ ಸಾವಿನ ಸುದ್ದಿ ಕೇಳಿ ಆಘಾತಕ್ಕೆ ಒಳಗಾಗಿದ್ದ ನಟನ ಅತ್ತಿಗೆ ಮಂಗಳವಾರ  ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಸುಶಾಂತ್‌ರ ಸೋದರ ಸಂಬಂಧಿಯ ಪತ್ನಿ, ಪಾಟ್ನಾದಲ್ಲಿ  ವಾಸವಿದ್ದ ಸುಧಾ ದೇವಿ ಸಾವಿನ ಸುದ್ದಿ ಕೇಳಿದಾಗಿನಿಂದ ಆಘಾತಕ್ಕೊಳಗಾಗಿ, ನೀರು, ನಿದ್ರೆ, ಆಹಾರ ತ್ಯಜಿಸಿದ್ದರು.

2019ರಲ್ಲಿ ಬಿಡುಗಡೆಯಾಗಿದ್ದ ನಿತೇಶ್‌ ತಿವಾರಿ ನಿರ್ದೇಶನದ “ಚಿಚೋರೆ’ ಚಿತ್ರ ಸೂಪರ್‌ ಹಿಟ್‌ ಆದ ಬಳಿಕ ಸುಶಾಂತ್‌  ಸಿಂಗ್‌ ರಜಪೂತ್‌ 7 ಚಿತ್ರಗಳನ್ನು ಒಪ್ಪಿಕೊಂಡಿದ್ದರು. ಆದರೆ, ಆರೇ ತಿಂಗಳ ಅವಧಿಯಲ್ಲಿ ಅವುಗಳು ಸುಶಾಂತ್‌ರ ಕೈತಪ್ಪಿ ಹೋಗಿದ್ದವು. ಹೀಗೆಂದು ಕಾಂಗ್ರೆಸ್‌ ಮುಖಂಡ ಸಂಜಯ್‌ ನಿರುಪಮ್‌ ಟ್ವೀಟ್‌ ಮಾಡಿದ್ದಾರೆ.

ಮಾನಸಿಕ ಅನಾರೋಗ್ಯಕ್ಕೆ ವಿಮೆ ರಕ್ಷಣೆ ಏಕಿಲ್ಲ?
ನವದೆಹಲಿ: ಮಾನಸಿಕ ಅನಾರೋಗ್ಯಕ್ಕೆ ವಿಮೆಯ ಮೂಲಕ ಹಣಕಾಸು ಪ್ರಯೋಜನ ನೀಡಲು ಏಕೆ ಸಾಧ್ಯವಿಲ್ಲ? ಎಂದು ಸುಪ್ರೀಂ ಕೋರ್ಟ್‌ ವಿಮಾ ಕಂಪನಿಗಳನ್ನು ಪ್ರಶ್ನಿಸಿದೆ.

Advertisement

ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಬಳಿಕ  ದೇಶಾದ್ಯಂತ ಮಾನಸಿಕ ಒತ್ತಡ ಮತ್ತು ಖಿನ್ನತೆಗೆ ಸಂಬಂಧಿಸಿದಂತೆ ಭಾರೀ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಮಾನಸಿಕ ಅನಾರೋಗ್ಯಕ್ಕೆ ತುತ್ತಾದವರಿಗೂ ವಿಮೆಯ ಹಣಕಾಸು ಪ್ರಯೋಜನಗಳನ್ನು ಒದಗಿಸುವಂತೆ ಕೋರಿ ಸಲ್ಲಿಕೆಯಾಗಿದ್ದ  ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಹಾಗೂ ಕೇಂದ್ರ ಸರ್ಕಾರಕ್ಕೆ ಮಂಗಳವಾರ ನೋಟಿಸ್‌ ನೀಡಿತು.

ಮಾನಸಿಕ ಅನಾರೋಗ್ಯವನ್ನು ಸಹ ಆರೋಗ್ಯ ವಿಮೆ ವ್ಯಾಪ್ತಿಗೆ ಸೇರಿಸಿಕೊಳ್ಳುವಂತೆ 2018ರಲ್ಲಿ ಐಆರ್‌ಡಿಎಐ, ವಿಮಾ ಕಂಪನಿಗಳಿಗೆ ಸೂಚನೆ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next