Advertisement

ಬಹುತೇಕ ಕಾಳಜಿ ಕೇಂದ್ರ ಬಂದ್‌

05:10 PM Oct 24, 2020 | Suhan S |

ಕಲಬುರಗಿ: ನಿರಂತರ ಮಳೆ ಮತ್ತು ಭೀಮಾ ನದಿಪ್ರವಾಹ ಸಂತ್ರಸ್ತರಾಗಿ ತೆರೆಯಲಾಗಿದ್ದ ಬಹುಪಾಲು ತಾತ್ಕಾಲಿಕ ಕಾಳಜಿ ಕೇಂದ್ರಗಳನ್ನು ಮುಚ್ಚಲಾಗಿದೆ. ಸಂಪೂರ್ಣ ಮನೆ ಕಳೆದುಕೊಂಡ ಕೆಲವರು ಇನ್ನೂ ಆಶ್ರಯ ಪಡೆದಿದ್ದಾರೆ. ಕೆಲವು ದಿನಗಳ ಕಾಲ ಎಲ್ಲನಿರಾಶ್ರಿತರಿಗೆ ಕಾಳಜಿ ಕೇಂದ್ರಗಳು ಆರಂಭ ಇರಬೇಕಿತ್ತು. ಬಡವರ ಊಟಕ್ಕಾದರೂ ಅನುಕೂಲವಾಗುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Advertisement

ಮಹಾರಾಷ್ಟ್ರದಿಂದ ಭೀಮಾ ನದಿಗೆ ದಾಖಲೆ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಪ್ರವಾಹ ಉಂಟಾಗಿ ಭೀಮಾ ತೀರದ ಅಫಜಲಪುರ, ಜೇವರ್ಗಿ, ಚಿತ್ತಾಪುರ ಮತ್ತು ಕಲಬುರಗಿ ತಾಲೂಕಿನ 126ಕ್ಕೂ ಅಧಿಕ ಗ್ರಾಮಗಳು ಹಾಗೂ ಕಾಗಿಣಾ ಹಿನ್ನೀರಿನ ಶಹಾಬಾದ್‌, ಕಾಳಗಿ, ಚಿತ್ತಾಪುರ 22 ಗ್ರಾಮಗಳಿಗೆ ಜಲ ಕಂಟಕ ಎದುರಾಗಿತ್ತು. ಜನತೆ ಭಾರಿ ಮಳೆಯಿಂದ ಕಲಬುರಗಿ ತಾಲೂಕಿನ ಸೈಯದ್‌ ಚಿಂಚೋಳಿ ಸೇರಿ ಕೆಲ ಗ್ರಾಮಗಳು ಜಲಾವೃತಗೊಂಡಿದ್ದವು. ಮಳೆ ಮತ್ತು ನೆರೆಯಿಂದ ನಿರಾಶ್ರಿತರಾದ ಜನರಿಗಾಗಿ ಅ.13ರಿಂದ ಒಟ್ಟು 160 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿತ್ತು. ಇದೀಗ ಕಳೆದ ಮೂರು ದಿನಗಳಿಂದ ಪ್ರವಾಹದ ನೀರು ಕಡಿಮೆಯಾಗಿದ್ದರಿಂದ ಜನರು ಮನೆಗಳಿಗೆ ಮರಳುತ್ತಿದ್ದಾರೆ. ಇದೇ ನೆಪದಲ್ಲಿ ಗುರುವಾರದಿಂದ ಕಾಳಜಿ ಕೇಂದ್ರಗಳನ್ನು ಮುಚ್ಚಲಾಗುತ್ತಿದೆ.  ಶುಕ್ರವಾರದ ವೇಳೆ ಬಹುತೇಕ ಕೇಂದ್ರಗಳನ್ನು ಬಂದ್‌ ಮಾಡಲಾಗಿತ್ತು.

ಕಲಬುರಗಿ ತಾಲೂಕಿನ ಸೈಯದ್‌ ಚಿಂಚೋಳಿ ಗ್ರಾಮದ ಕಾಳಜಿ ಕೇಂದ್ರಕ್ಕೆ “ಉದಯವಾಣಿ’ ಭೇಟಿಕೊಟ್ಟಾಗ ಎರಡು ನಿರಾಶ್ರಿತ ಕುಟುಂಬದವರು ಇನ್ನೂ ಇದ್ದರು. ಶಾಲೆಯಲ್ಲಿ ಅವರೇ ಅಡುಗೆಮಾಡಿಕೊಳ್ಳುತ್ತಿದ್ದಾರೆ. ಕೆರೆ ಭೋಸಗಾ ಮತ್ತು ಸೈಯದ್‌ ಚಿಂಚೋಳಿ ಎರಡೂ ಕೆರೆಗಳು ಕೋಡಿ ಒಡೆದು ತುಂಬಿ ಹರಿದ ಪರಿಣಾಮ ಅರ್ಧ ಗ್ರಾಮಕ್ಕೆ ನೀರು ಹೊಕ್ಕಿತ್ತು. ಗ್ರಾಮದ 48 ಕುಟುಂಬಗಳು ನಿರಾಶ್ರಿತವಾಗಿದ್ದವು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾಗಿದ್ದ ಕಾಳಜಿ ಕೇಂದ್ರದಲ್ಲಿ 190 ಜನರು ಆಶ್ರಯ ಪಡೆದಿದ್ದರು.

“ಮಳೆ ಮತ್ತು ಕೆರೆ ನೀರು ನುಗ್ಗಿ ಕೆಳ ಭಾಗದ ಮನೆಗಳು ಜಲಾವೃತಗೊಂಡಿದ್ದವು. ರಾತ್ರೋರಾತ್ರಿ ಮನೆಗಳಿಂದ ಮಕ್ಕಳು-ಮರಿಗಳೊಂದಿಗೆ ಉಟ್ಟ ಬಿಟ್ಟಯಲ್ಲೇ ಹೊರಬಂದೆವು. ಈಗ ಮನೆಯಲ್ಲಿ ಅನೇಕ ವಸ್ತುಗಳು ಹಾನಿಯಾಗಿವೆ’ ಎಂದು ಸಂತ್ರಸ್ತ ಇಬ್ರಾಹಿಮ್‌ ಸಾಹೇಬ್‌ ತಮ್ಮ ಅಳಲು ತೋಡಿಕೊಂಡರು.

141 ಕಾಳಜಿ ಕೇಂದ್ರಗಳು ಸ್ಥಗಿತ : ಹಲವು ಕಡೆಗಳಲ್ಲಿ ಜನರು ಕಡಿಮೆಯಾಗಿದ್ದಾರೆ ಎಂದು ಕಾಳಜಿ ಕೇಂದ್ರಗಳು ಮುಚ್ಚಲಾಗಿದೆ. ಒಟ್ಟು 160 ಕಾಳಜಿ ಕೇಂದ್ರಗಳ ಪೈಕಿ 141 ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿದೆ. 19 ಕಾಳಜಿ ಕೇಂದ್ರಗಳು ಆರಂಭದಲ್ಲಿದ್ದು, 2,357 ಜನರು ಆಶ್ರಯ ಪಡೆದಿದ್ದಾರೆ ಕಲಬುರಗಿ ತಾಲೂಕಿನಲ್ಲಿ 8 ಕಾಳಜಿ ಕೇಂದ್ರಗಳನ್ನು ಬಂದ್‌ ಮಾಡಲಾಗಿದೆ. ಶಹಾಬಾದ್‌ ತಾಲೂಕಿನಲ್ಲಿ 12 ಸ್ಥಳದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿತ್ತು. ಇದರಲ್ಲಿ 10 ಕೇಂದ್ರಗಳನ್ನು ಬಂದ್‌ ಮಾಡಲಾಗಿದ್ದು, ಭಂಕೂರ ಮತ್ತು ಮುಂಟಗಾ ಕಾಳಜಿ ಕೇಂದ್ರಗಳು ಆರಂಭ ಇವೆ. ಎರಡೂ ಕೇಂದ್ರಗಳಲ್ಲಿ ಸುಮಾರು 600 ಜನರು ಆಶ್ರಯ ಪಡೆದಿದ್ದಾರೆ. ಚಿತ್ತಾಪುರ ತಾಲೂಕಿನಲ್ಲಿ ಆರಂಭಿಸಲಾಗಿದ್ದ 13 ಕಾಳಜಿ ಕೇಂದ್ರಗಳನ್ನೂ ಕಳೆದ ಎರಡು ದಿನದಲ್ಲಿ ಬಂದ್‌ ಮಾಡಲಾಗಿದೆ.ಜೇವರ್ಗಿಯಲ್ಲೂ ಎಲ್ಲ 30 ಕಾಳಜಿ ಕೇಂದ್ರಗಳನ್ನು ಬಂದ್‌ ಮಾಡಲಾಗಿದೆ.

Advertisement

ಅಫಜಲಪುರ ತಾಲೂಕಿನಲ್ಲಿ ಅರ್ಧಕ್ಕೆ ಅರ್ಧ ಕಾಳಜಿ ಕೇಂದ್ರಗಳು ಸ್ಥಗಿತಗೊಳಿಸಲಾಗಿದೆ. ತಾಲೂಕಿನಲ್ಲಿ ಒಟ್ಟಾರೆ 48 ಗ್ರಾಮಗಳಿಗೆ ಪ್ರವಾಹದ ನೀರು ಹೊಕ್ಕು, ಹತ್ತು ಸಾವಿರಕ್ಕೂ ಅಧಿಕ ಜನರು ನಿರಾಶ್ರಿತರಾಗಿದ್ದಾರೆ. ತಾಲೂಕಿನಾದ್ಯಂತ 25 ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿತ್ತು. ಈಗ 14 ಕಾಳಜಿ ಕೇಂದ್ರಗಳು ಕಾರ್ಯ ಪ್ರಾರಂಭ ಇವೆ. ಹಲವು ಗ್ರಾಮಗಳಲ್ಲಿ ಪ್ರವಾಹ ಕುಸಿತವಾಗಿದ್ದು, ದಸರಾ ಹಬ್ಬ ಇದೆ ಎಂದು ಜನರೇ ಕಾಳಜಿ ಕೇಂದ್ರಗಳಿಂದ ಹೋಗಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು

ಹತ್ತು ಸಾವಿರ ಪರಿಹಾರ ಜಮೆ :  ಜಿಲ್ಲೆಯಲ್ಲಿ ಮಳೆ ಮತ್ತು ಪ್ರವಾಹದಿಂದ ಪ್ರಾಥಮಿಕ ವರದಿ ಪ್ರಕಾರ 10,796 ಮನೆಗಳಿಗೆ ನೀರು ನುಗ್ಗಿ ಬಟ್ಟೆ-ಪಾತ್ರೆ ನಷ್ಟವಾಗಿದೆ. 3,628 ಮನೆಗಳು ಭಾಗಶಃ ಮನೆಗಳು ಹಾನಿಯಾಗಿವೆ. 65 ಮನೆಗಳು ಸಂಪೂರ್ಣ ಮನೆ ನೆಲಸಮವಾಗಿವೆ ಎಂಬುವುದು ಜಿಲ್ಲಾಡಳಿತದ ಅಂಕಿ-ಅಂಶ. ಚಿತ್ತಾಪುರದಲ್ಲಿ ಸುಮಾರು 500, ಜೇವರ್ಗಿಯಲ್ಲಿ312, ಶಹಾಬಾದ್‌ನಲ್ಲಿ 260 ಕುಟುಂಬಗಳಿಗೆ ಈಗಾಗಲೇ ಸರ್ಕಾರದಿಂದ ಪರಿಹಾರದ ಹಣ ಜಮೆ ಮಾಡಲಾಗಿದೆ. ಉಳಿದವರಿಗೂ ಹಣ ಜಮೆ ಮಾಡಲಾಗುತ್ತಿದೆ. ಫಲಾನುಭವಿಗಳ ದಾಖಲೆಗಳು ಮತ್ತು ಬ್ಯಾಂಕ್‌ ಖಾತೆ ತಾಳೆ ಮಾಡುವ ಕಾರ್ಯಪ್ರಗತಿಯಲ್ಲಿ ಇದೆ ಎಂದು ಆಯಾ ತಾಲೂಕಿನ ತಹಶೀಲ್ದಾರ್‌ಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next