Advertisement

ಗ್ರಾಪಂ ಹಂತದಲ್ಲಿ ಕಾಳಜಿ ಕೇಂದ್ರ ­

04:13 PM May 18, 2021 | Team Udayavani |

ಕೊಪ್ಪಳ: ಜಿಲ್ಲಾಡಳಿತ ಗ್ರಾಪಂ ಹಂತದಲ್ಲಿ ಶಾಲೆ ಅಥವಾ ವಸತಿ ನಿಲಯದಲ್ಲಿ ಕೋವಿಡ್‌ ಕೇರ್‌ ಸೆಂಟರ್‌(ಕಾಳಜಿ ಕೇಂದ್ರ) ಆರಂಭಕ್ಕೆ ಸಿದ್ಧತೆ ಮಾಡಿದ್ದು, ಇದಕ್ಕೆ ವಲಯವಾರು ಅಧಿಕಾರಿಗಳನ್ನು ನೇಮಕ ಮಾಡಿದೆ.

Advertisement

ಹೋಂ ಐಸೋಲೇಷನ್‌ಗೆ ಒಳಗಾದವರನ್ನು ಈ ಕೇಂದ್ರದಲ್ಲಿ ಆರೈಕೆ ಮಾಡಲು ಯೋಜನೆ ಹಾಕಿಕೊಂಡಿದೆ. ಹೌದು. ಜಿಲ್ಲೆಯಲ್ಲಿ ನಿತ್ಯ 600-700 ಜನರಿಗೆ ಕೊರೊನಾ ಸೋಂಕು ದೃಢಪಡುತ್ತಿರುವುದು ಜಿಲ್ಲೆಯ ಜನರ ನೆಮ್ಮದಿ ಕೆಡಿಸಿದೆ. ಜಿಲ್ಲಾಡಳಿತಕ್ಕೂ ದೊಡ್ಡ ಸಮಸ್ಯೆಯಾಗಿದೆ. ಒಂದೆಡೆ ಜಿಲ್ಲೆಯಲ್ಲಿ ಸೋಂಕು ದೃಢಪಟ್ಟವರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಲು ತೆರಳಿದರೆ ಬೆಡ್‌ ಸಿಗುತ್ತಿಲ್ಲ. ಯಾವುದೇ ಆಸ್ಪತ್ರೆಗೆ ತೆರಳಿದರೂ ಆಕ್ಸಿಜನ್‌ ಇಲ್ಲ. ವೆಂಟಿಲೇಟರ್‌ ಸಮಸ್ಯೆ, ಬೆಡ್‌ಗಳಿಲ್ಲ ಎನ್ನುವುದು ಸಾಮಾನ್ಯವಾಗಿದೆ.

ಇನ್ನೂ ಬಹುಪಾಲು ಜನರು ಆಸ್ಪತ್ರೆಯಲ್ಲಿನ ಅವ್ಯವಸ್ಥೆ ನೋಡಿ ಆಸ್ಪತ್ರೆಗಿಂತ ಮನೆಯಲ್ಲಿ ಇರುವುದು ಒಳಿತು ಎಂದು ಹೋಂ ಐಸೋಲೇಷನ್‌ಗೆ ಒಳಗಾಗುತ್ತಿದ್ದಾರೆ. ಕೆಲವೆಡೆ ಚಿಕ್ಕ ಚಿಕ್ಕ ಮನೆಗಳಲ್ಲಿ ನಾಲ್ಕೈದು ಜನರಿರುವ ಕುಟುಂಬ ಸದಸ್ಯನಿಗೆ ಸೋಂಕು ದೃಢಪಟ್ಟರೆ, ಅವರು ಹೋಮ್‌ ಐಸೋಲೇಷನ್‌ಗೆ ಒಳಗಾದಾಗ ಮನೆಯ ಇತರೆ ಸದಸ್ಯರಿಗೂ ಸೋಂಕು ತಗುಲುತ್ತಿದೆ. ಇದರಿಂದ ಹೋಮ್‌ ಐಸೋಲೇಷನ್‌ ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ ಎನ್ನುವುದನ್ನು ಅರಿತು ಸರ್ಕಾರ ಕೋವಿಡ್‌ ಕೇರ್‌ ಸೆಂಟರ್‌ ಹೆಚ್ಚಿಸಬೇಕೆಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕಾಳಜಿ ಕೇಂದ್ರ ಅಥವಾ ಕೋವಿಡ್‌ ಕೇರ್‌ ಸೆಂಟರ್‌ ಆರಂಭಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

50ಕ್ಕೂ ಹೆಚ್ಚು ಕೇಂದ್ರ ಆರಂಭಕ್ಕೆ ಯೋಜನೆ: ಜಿಲ್ಲೆಯಲ್ಲಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಅಥವಾ 2-3 ಗ್ರಾಪಂ ಸೇರಿ ಒಂದು ಕೋವಿಡ್‌ ಕೇರ್‌ ಸೆಂಟರ್‌/ ಕಾಳಜಿ ಕೇಂದ್ರ ಆರಂಭಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಜಿಲ್ಲಾದ್ಯಂತ 50ಕ್ಕೂ ಹೆಚ್ಚು ಕೇಂದ್ರ ಆರಂಭವಾಗುವ ಸಾಧ್ಯತೆಯಿದೆ. 40-50 ಜನರ ಸಾಮರ್ಥ್ಯದ ಕೇಂದ್ರ ಆರಂಭಕ್ಕೆ ಸಿದ್ಧತೆ ನಡೆದಿದೆ.

ಶಾಲೆ, ಹಾಸ್ಟೆಲ್‌ ವ್ಯವಸ್ಥೆ ಪರಿಶೀಲನೆ: ಆರೈಕೆ ಕೇಂದ್ರ ಆರಂಭಿಸುವ ಕುರಿತಂತೆ ಜಿಲ್ಲಾದ್ಯಂತ ಆಯಾ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಶಾಲೆ ಹಾಗೂ ವಸತಿ ನಿಲಯಗಳನ್ನು ಪರಿಶೀಲನೆ ಮಾಡಲಾಗಿದೆ. ಅಲ್ಲಿ ಕುಡಿಯುವ ನೀರು, ಕಟ್ಟಡದ ಸ್ಥಿತಿಗತಿ, ಶೌಚಾಲಯ, ಗಾಳಿ, ಬೆಳಕಿನ ವ್ಯವಸ್ಥೆ, ಸಂಚಾರಕ್ಕೆ ಸುಲಭ ವ್ಯವಸ್ಥೆ ಸೇರಿದಂತೆ ವಿದ್ಯುತ್‌ ಸೌಲಭ್ಯ ಹಾಗೂ ಅಗತ್ಯ ಮೂಲ ಸೌಕರ್ಯಗಳ ಕುರಿತು ಪರಿಶೀಲಿಸಲಾಗಿದೆ. ಬೇಕು ಬೇಡಿಕೆಗಳ ಕುರಿತು ಪಟ್ಟಿಯನ್ನೂ ಮಾಡಲಾಗಿದೆ. ವಲಯವಾರು ಅಧಿಕಾರಿಗಳನ್ನೂ ನೇಮಕ ಮಾಡಲಾಗಿದೆ. ಈಗಾಗಲೇ ಅವರು ಶಾಲೆ, ಹಾಸ್ಟೆಲ್‌ ಪರಿಶೀಲನೆ ನಡೆಸಿದ್ದು, ಆಯಾ ತಾಲೂಕಿನ ತಹಶೀಲ್ದಾರ್‌ ನೇತೃತ್ವದಲ್ಲಿ ಸಭೆ ನಡೆದಿವೆ.

Advertisement

ಒಟ್ಟಿನಲ್ಲಿ ಜಿಲ್ಲಾಡಳಿತ ಸೋಂಕು ನಿಯಂತ್ರಣಕ್ಕೆ ಆಯಾ ಗ್ರಾಪಂ ವ್ಯಾಪ್ತಿಯಲ್ಲಿಯೇ ಆರೈಕೆ ಕೇಂದ್ರ ಆರಂಭಕ್ಕೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next