Advertisement
ಈ ವರ್ಷ ಈ ದಿನಕ್ಕಾಗಿ ವಿಶ್ವ ಹೃದಯ ಪ್ರತಿಷ್ಠಾನವು “ಪ್ರತೀ ಹೃದಯಕ್ಕಾಗಿ ಹೃದಯವನ್ನು ಉಪಯೋಗಿಸಿ’ ಎಂಬ ಘೋಷವಾಕ್ಯವನ್ನು ರೂಪಿಸಿದೆ. ಇದರ ಅರ್ಥವೇನು? “ಹೃದಯವನ್ನು ಉಪಯೋಗಿಸಿ’ ಎಂದರೆ ಈ ಧ್ಯೇಯ ಸಾಧನೆಗಾಗಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು, ಧೈರ್ಯದಿಂದ ಕಾರ್ಯೋನ್ಮುಖರಾಗಲು, ಇತರರಿಗೆ ಸಹಾಯ ಮಾಡಲು ವಿಭಿನ್ನವಾಗಿ ಆಲೋಚಿಸುವುದು. “ಪ್ರತೀ ಹೃದಯಕ್ಕಾಗಿ’ ಎಂಬುದು ಕಾರ್ಯೋನ್ಮುಖತೆಗಿಂತ ಹೆಚ್ಚಾಗಿ ಫಲಾನುಭವಿಯನ್ನು ಕೇಂದ್ರೀಕರಿಸಿದೆ.ಹೀಗಾಗಿ ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ಮಣಿಪಾಲದ ಫಿಸಿಯೋಥೆರಪಿ ವಿಭಾಗದ ಕಾರ್ಡಿಯಾಕ್ ರಿಹ್ಯಾಬಿಲಿಟೇಶನ್ ಕ್ಲಿನಿಕ್ ಮತ್ತು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ, ಕೆ.ಎಂ.ಸಿ.ಯ ಕಾರ್ಡಿಯಾಲಜಿ ಮತ್ತು ಕಾರ್ಡಿಯೊವಾಸ್ಕಾಲಾರ್ ಹಾಗೂ ಥೊರಾಸಿಕ್ ಸರ್ಜರಿ ವಿಭಾಗಗಳು ಜತೆಗೂಡಿ ಈ ವರ್ಷದ ವಿಶ್ವ ಹೃದಯ ದಿನಕ್ಕಾಗಿ “ಹೃದಯ ಪುನಶ್ಚೇತನದ ಪ್ರಚಾರಕ್ಕೆ ಹೃದಯವನ್ನು ಉಪಯೋಗಿಸಿ’ ಎಂಬ ಧ್ಯೇಯವಾಕ್ಯವನ್ನು ರೂಪಿಸಿವೆ.
Related Articles
Advertisement
ಫಿಸಿಯೋಥೆರಪಿ ವಿಭಾಗದ ಒಂದು ಅಂಗವಾದ ಕಾರ್ಡಿಯಾಕ್ ರಿಹ್ಯಾಬಿಲಿಟೇಶನ್ ಸೆಂಟರ್ ಅಥವಾ ಹೃದಯ ಪುನಶ್ಚೇತನ ಕೇಂದ್ರವು ಕಸ್ತೂರ್ಬಾ ಆಸ್ಪತ್ರೆಯ ಕಾರ್ಡಿಯಾಲಜಿ ವಿಭಾಗ ಹಾಗೂ ಕಾರ್ಡಿಯೊವಾಸ್ಕಾಲಾರ್ ಮತ್ತು ಥೊರಾಸಿಕ್ ಸರ್ಜರಿ ವಿಭಾಗಗಳ ಸಹಯೋಗದಲ್ಲಿ ನಡೆಯುತ್ತಿದೆ. ಕಾರ್ಡಿಯಾಕ್ ರಿಹ್ಯಾಬಿಲಿಟೇಶನ್ ಸೆಂಟರ್ ಮೂಲಕ ಫಿಸಿಯೋಥೆರಪಿ ವಿಭಾಗವು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದವರು, ಸ್ಟೆಂಟ್ ಅಳವಡಿಸಿಕೊಂಡವರು ಮತ್ತು ಹಠಾತ್ ಹೃದಯ ತುರ್ತುಪರಿಸ್ಥಿತಿಗಳಿಂದಾಗಿ ಆಸ್ಪತ್ರೆಗೆ ದಾಖಲಾದವರಿಗಾಗಿ ಒಳರೋಗಿ ಸೇವೆಗಳನ್ನು ಒದಗಿಸುತ್ತಿದೆ.
ನಾವು ಚಿಕಿತ್ಸೆಗೆ ಒಳಪಡಿಸುವ ಕೆಲವು ಹೃದಯ ಅನಾರೋಗ್ಯಗಳು ಹೀಗಿವೆ:
ಔಷಧೋಪಚಾರ ಅಗತ್ಯವಿರುವ ಹೃದಯಕ್ಕೆ ರಕ್ತವನ್ನು ಒಯ್ಯುವ ರಕ್ತನಾಳಗಳ ಅನಾರೋಗ್ಯ (ಕೊರೋನರಿ ಆರ್ಟರಿ ಡಿಸೀಸ್)
ಸ್ಟೆಂಟ್ ಅಳವಡಿಕೆ ಅಥವಾ ತೆರೆದ ಹೃದಯ ಶಸ್ತ್ರಕ್ರಿಯೆ (ಕೊರೊನರಿ ಆರ್ಟರಿ ಬೈಪಾಸ್ ಗ್ರಾಫ್ಟ್ ಸರ್ಜರಿ) ಔಷಧಗಳ ಅಗತ್ಯವಿರುವ ಹೃದಯಾಘಾತ (ಮಯೋಕಾರ್ಡಿಯಲ್ ಇನ್ಪಾರ್ಕ್ಷನ್)
ಹೃದಯದ ಸ್ನಾಯುಗಳು ದುರ್ಬಲವಾಗುವುದು (ಹೃದಯ ವೈಫಲ್ಯ)
ಹೃದಯ ಕವಾಟ ಸರಿಪಡಿಸಲು ಅಗತ್ಯವಾಗಿರುವ ಅನಾರೋಗ್ಯಗಳು ಅಥವಾ ಹೃದಯದ ಜನ್ಮಜಾತ ವೈಕಲ್ಯಗಳು (ಕೊಂಜೆನಿಟಲ್ ಹಾರ್ಟ್ ಡಿಸೀಸ್)
ದೇಹದ ರಕ್ತನಾಳಗಳು ಅಥವಾ ಶ್ವಾಸಕೋಶಗಳಿಗೆ ರಕ್ತವನ್ನು ಒಯ್ಯುವ ರಕ್ತನಾಳಗಳಲ್ಲಿ ಅಸಹಜವಾದ ಅಧಿಕ ರಕ್ತದೊತ್ತಡ ಹೊಂದಿರುವವರು (ಹೈಪರ್ ಟೆನ್ಶನ್, ಪಲ್ಮನರಿ ಹೈಪರ್‌ಟೆನ್ಶನ್)
ಹೃದಯವು ನಿಯಮಿತವಾಗಿ ಮತ್ತು ಸದೃಢವಾಗಿ ಮಿಡಿಯಲು ಉಪಕರಣ (ಉದಾ.: ಪೇಸ್‌ಮೇಕರ್ ಅಥವಾ ಇಂಪ್ಲಾಂಟೇಬಲ್ ಕಾರ್ಡಿಯೋವರ್ಟರ್ ಡಿಫಿಬ್ರಿಲೇಟರ್)ದ ಅಗತ್ಯ ಇರುವವರು
ನಡೆಯುವಾಗ ಕಾಲುಗಳ ರಕ್ತನಾಳಗಳು ಬಾಧಿತವಾಗುವುದರಿಂದ ಕಾಲುಗಳಲ್ಲಿ ನೋವು ಹೊಂದಿರುವವರು (ಪೆರಿಫರಲ್ ವಾಸ್ಕಾಲರ್ ಡಿಸೀಸ್)
ಇಂತಹ ಅನಾರೋಗ್ಯ ಹೊಂದಿರುವವರು ವ್ಯಾಯಾಮವನ್ನು ಕೂಡ ಮಾಡಬೇಕೇ ಎಂದು ನೀವು ಕೇಳಬಹುದು. ಹೌದು, ಹೃದಯ ಪುನಶ್ಚೇತನದಲ್ಲಿ ವಿಶೇಷ ತರಬೇತಿ ಹೊಂದಿರುವ ಫಿಸಿಯೋಥೆರಪಿಸ್ಟ್‌ಗಳು, ವೈದ್ಯರು, ನರ್ಸ್‌ಗಳು ಮತ್ತು ತಂಡದ ಇತರ ಸದಸ್ಯರ ನೆರವಿನೊಂದಿಗೆ ಈ ವ್ಯಾಯಾಮ ಮಾಡಲು ಸಹಾಯ ಮಾಡುತ್ತಾರೆ. ನಿಮ್ಮ ಕಾರ್ಡಿಯಾಲಜಿಸ್ಟ್ ಅಥವಾ ಕಾರ್ಡಿಯಾಕ್ ಸರ್ಜನ್ ನಿಮ್ಮನ್ನು ಹೃದಯ ಪುನಶ್ಚೇತನಕ್ಕೆ ಶಿಫಾರಸು ಮಾಡಿದ ಬಳಿಕ ಇದನ್ನು ನಡೆಸಲಾಗುತ್ತದೆ.
ಇದನ್ನು ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳುವುದಕ್ಕಾಗಿ ಹೃದಯ ಪುನಶ್ಚೇತನಕ್ಕೆ ಶಿಫಾರಸು ಮಾಡಲಾದ ಬಳಿಕ ಏನಾಗುತ್ತದೆ ಎಂಬುದನ್ನು ವಿವರಿಸಿದ್ದೇವೆ. ವ್ಯಕ್ತಿಯನ್ನು ಹೃದಯ ಪುನಶ್ಚೇತನಕ್ಕೆ ಶಿಫಾರಸು ಮಾಡಿದ ಬಳಿಕ ಅವರನ್ನು ಫಿಸಿಯೋಥೆರಪಿಸ್ಟ್ ಅಥವಾ ಹೃದಯ ಪುನಶ್ಚೇತನ ತಜ್ಞರು ಆಮೂಲಾಗ್ರವಾಗಿ ವಿಶ್ಲೇಷಣೆಗೆ ಒಳಪಡಿಸುತ್ತಾರೆ. ಜತೆಗೆ ಸಂಬಂಧಪಟ್ಟ ಎಲ್ಲ ವೈದ್ಯಕೀಯ ದಾಖಲೆಗಳು ಮತ್ತು ವರದಿಗಳನ್ನು ಪರಿಶೀಲಿಸಲಾಗುತ್ತದೆ. ವೈದ್ಯಕೀಯ ವರದಿಗಳ ಜತೆಗೆ ಥೆರಪಿಸ್ಟ್ , ವ್ಯಕ್ತಿಯ ದೈಹಿಕ ಪರೀಕ್ಷೆಗಳನ್ನು ಕೈಗೊಳ್ಳುತ್ತಾರೆ ಹಾಗೂ ವ್ಯಾಯಾಮ ಮಾಡಲು ಮತ್ತು ದೈನಿಕ ಬದುಕಿನಲ್ಲಿ ಚಟುವಟಿಕೆಗಳನ್ನು ಕೈಗೊಳ್ಳಲು ಶಕ್ತನೇ ಎಂದು ನಿರ್ಧರಿಸಲು ವಿಶ್ಲೇಷಣೆಗಳನ್ನು ನಡೆಸುತ್ತಾರೆ. ಇದನ್ನು ನಿರ್ದಿಷ್ಟ ನಡಿಗೆ ಪರೀಕ್ಷೆಗಳು ಮತ್ತು ಮಾನದಂಡಗಳ ಮೂಲಕ ನಡೆಸಲಾಗುತ್ತದೆ. ಸಾಮಾನ್ಯವಾಗಿ ನಡೆಸಲಾಗುವ ನಡಿಗೆಯ ಪರೀಕ್ಷೆ ಎಂದರೆ ಆರು ನಿಮಿಷಗಳ ನಡಿಗೆ ಪರೀಕ್ಷೆ. ಈ ಪರೀಕ್ಷೆಯಲ್ಲಿ ಆರು ನಿಮಿಷಗಳ ಅವಧಿಯಲ್ಲಿ ವ್ಯಕ್ತಿಯನ್ನು ಎಷ್ಟು ಸಾಧ್ಯವೋ ಅಷ್ಟು ನಡೆಯಲು ಹೇಳಲಾಗುತ್ತದೆ ಮತ್ತು ಕ್ರಮಿಸದ ದೂರವನ್ನು ಅಳೆಯಲಾಗುತ್ತದೆ. ಇದಕ್ಕೆ ಪರ್ಯಾಯವಾಗಿ ನಡಿಗೆಯ ಪರೀಕ್ಷೆಯನ್ನು ಕೈಗೊಳ್ಳುವುದು ಅಸಾಧ್ಯವಾದ ಸಂದರ್ಭದಲ್ಲಿ ಡ್ನೂಕ್ ಆ್ಯಕ್ಟಿವಿಟಿ ಸ್ಟೇಟಸ್ ಇಂಡೆಕ್ಸ್ (ಡಿಎಎಸ್‌ಐ) ಎಂದು ಕರೆಯಲಾಗುವ ಸರಳ ಮಾಪನವನ್ನು ಪರಿಗಣಿಸಲಾಗುತ್ತದೆ. ಜತೆಗೆ ವ್ಯಕ್ತಿಯ ತೋಳುಗಳು ಮತ್ತು ಕಾಲುಗಳ ಸಾಮರ್ಥ್ಯ, ದೈಹಿಕ ಚಟುವಟಿಕೆಯ ಮಟ್ಟ ಮತ್ತು ಚಟುವಟಿಕೆಯೊಂದನ್ನು ತಾಳಿಕೊಳ್ಳಬಲ್ಲ ಸ್ನಾಯುಗಳ ಸಾಮರ್ಥ್ಯವನ್ನು ಕೂಡ ಪರೀಕ್ಷಿಸಲಾಗುತ್ತದೆ.
ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖ ಲಾದ ಸಂದರ್ಭದಲ್ಲಿ ನಿಮ್ಮ ಆರೋಗ್ಯ ಸ್ಥಿತಿಯನ್ನು ಆಧರಿಸಿ ನಿಮ್ಮ ವೈದ್ಯರು ನಿಮ್ಮನ್ನು ಹೃದಯ ಪುನಶ್ಚೇತನಕ್ಕಾಗಿ ಫಿಸಿಯೋಥೆರಪಿಸ್ಟ್ ಭೇಟಿಗೆ ಶಿಫಾರಸು ಮಾಡಬಹುದು. ಹೃದಯ ಶಸ್ತ್ರಚಿಕಿತ್ಸೆಗೆ ಒಳಪಡಲಿರುವವರನ್ನು ಹೃದಯ ಪುನಶ್ಚೇತನ ತಜ್ಞರು ಹೃದಯ ಶಸ್ತ್ರಚಿಕಿತ್ಸೆಗೆ ಮುನ್ನವೇ ಭೇಟಿಯಾಗಿ ಶ್ವಾಸಕೋಶ ಮತ್ತು ತೋಳು, ಕೈಕಾಲುಗಳಿಗೆ ವ್ಯಾಯಾಮವನ್ನು ಒದಗಿಸಬಹುದು. ಇದನ್ನು ಪೂರ್ವ ಪುನಶ್ಚೇತನ ಎಂದು ಕರೆಯಲಾಗುತ್ತದೆ, ವ್ಯಾಯಾಮದ ಪ್ರಯೋಜನಗಳೇನು, ಅದರಿಂದ ಏನನ್ನು ನಿರೀಕ್ಷಿಸಬಹುದು ಎಂಬ ಬಗ್ಗೆ ಶಿಕ್ಷಣವೂ ಇದರ ಭಾಗವಾಗಿರುತ್ತದೆ. ಜತೆಗೆ ಶಸ್ತ್ರಚಿಕಿತ್ಸೆಗೆ ಮುನ್ನ ದೈಹಿಕ ಸ್ಥಿತಿಗತಿ ಯನ್ನು ಎಷ್ಟು ಸಾಧ್ಯವೋ ಅಷ್ಟು ಉತ್ತಮಪಡಿಸುವುದು ಕೂಡ ಇದರ ಉದ್ದೇಶವಾಗಿರುತ್ತದೆ. ಶಸ್ತ್ರಚಿಕಿತ್ಸೆಯ ಬಳಿಕ ಫಿಸಿಯೋಥೆರಪಿಸ್ಟ್ ಚೆನ್ನಾಗಿ ಉಸಿರಾಡಲು, ಹಾಸಿಗೆಯಿಂದ ಎದ್ದು ಓಡಾಡಲು, ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಮತ್ತು ನಡಿಗೆಯ ಸಾಮರ್ಥ್ಯವನ್ನು ಉತ್ತಮಪಡಿಸಿಕೊಳ್ಳಲು ಸಹಾಯ ಮಾಡುತ್ತಾರೆ.
-ಮುಂದಿನ ವಾರಕ್ಕೆ
-ಡಾ| ಅಬ್ರಹಾಂ ಸ್ಯಾಮ್ಯುಯೆಲ್ ಬಾಬು
-ಡಾ| ಅರವಿಂದ್ ಕುಮಾರ್ ಬಿಷ್ಣೋಯಿ
-ಡಾ| ಗಣೇಶ್ ಕಾಮತ್
-ಡಾ| ಟಾಮ್ ದೇವಸ್ಯ
-ಡಾ| ರಾಮಚಂದ್ರನ್ ಪದ್ಮಕುಮಾರ್
1. ಕಾರ್ಡಿಯಾಕ್ ರಿಹ್ಯಾಬಿಲಿಟೇಶನ್ ಕ್ಲಿನಿಕ್ ಕೆ.ಎಂ.ಸಿ. ಆಸ್ಪತ್ರೆ, ಫಿಸಿಯೋಥೆರಪಿ ವಿಭಾಗ, ಎಂ.ಸಿ.ಎಚ್.ಪಿ., ಮಾಹೆ, ಮಣಿಪಾಲ
2. ಕಾರ್ಡಿಯೋವಾಸ್ಕಾಲರ್ ಮತ್ತು ಥೊರಾಸಿಕ್ ಸರ್ಜರಿ ವಿಭಾಗ ಕಸ್ತೂರ್ಬಾ ಆಸ್ಪತ್ರೆ, ಕೆ.ಎಂ.ಸಿ., ಮಾಹೆ, ಮಣಿಪಾಲ
3. ಕಾರ್ಡಿಯಾಲಜಿ ವಿಭಾಗ, ಕಸ್ತೂರ್ಬಾ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಪ್ರೊಫೆಸರ್ ಮತ್ತು ಮುಖ್ಯಸ್ಥರು, ಕಾರ್ಡಿಯಾಲಜಿ ಮತ್ತು ಕಾರ್ಡಿಯೋ ಥೊರಾಸಿಕ್ ಸರ್ಜರಿ, ಕೆಎಂಸಿ, ಮಾಹೆ, ಮಣಿಪಾಲ)