Advertisement

ಬಾಡಿಗೆ ನೆಪದಲ್ಲಿ ಕಾರು ಪಡೆದು ವಂಚನೆ: ಸೆರೆ

02:58 PM Jun 25, 2023 | Team Udayavani |

ಬೆಂಗಳೂರು: ಸಿಲಿಕಾನ್‌ ಸಿಟಿಯ ಕಾರು ಮಾಲೀಕರೇ ಎಚ್ಚರ..ಮನೆ ಮುಂದೆ ಸುಮ್ಮನೆ ನಿಲ್ಲಿಸುವ ಬದಲು ಕಾರುಗಳನ್ನು ಬಾಡಿಗೆಗೆ ಬಿಟ್ಟರೆ ಒಂದಿಷ್ಟು ಹಣ ಬರುತ್ತದೆ ಎಂದು ಅಪ ರಿಚಿತರಿಗೆ ಕಾರುಗಳನ್ನು ಬಾಡಿಗೆಗೆ ಕೊಟ್ಟರೆ, ಅವುಗಳು ಫೈನಾನ್ಶಿಯರ್‌ ಗಳ ಪಾಲಾಗುತ್ತವೆ ಹುಷಾರ್‌..

Advertisement

ಮೋಜಿನ ಜೀವನಕ್ಕಾಗಿ ಕಾರುಗಳನ್ನು ಬಾಡಿಗೆ ಪಡೆದುಕೊಂಡು, ಬಳಿಕ ನಕಲಿ ದಾಖಲೆಗಳನ್ನು ಸೃಷ್ಟಿಸಿ ಫೈನಾನ್ಸಿಯರ್‌ಗಳ ಬಳಿ ಅಡಮಾನ ಇಟ್ಟು ಪರಾರಿಯಾಗಿದ್ದ ವಂಚಕನನ್ನು ತಿಲಕನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವೇದಾಂತ್‌ಗೌಡ ಅಲಿಯಾಸ್‌ ಜೀವನ್‌(26) ಬಂಧಿತ. ಆರೋಪಿಯಿಂದ 78.70 ಲಕ್ಷ ರೂ. ಮೌಲ್ಯದ ಆರು ವಿವಿಧ ಕಂಪನಿಗಳ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

ವೃತ್ತಿಯಲ್ಲಿ ಕಾರು ಚಾಲಕನಾಗಿರುವ ವೇದಾಂತ್‌ಗೌಡ, ಕಾರುಗಳನ್ನು ಬಾಡಿಗೆ ನೀಡುವ ಮಾಲೀಕರನ್ನು ಸಂಪರ್ಕಿಸುತ್ತಿದ್ದ. ಬಳಿಕ ಮದುವೆ ಸಮಾರಂಭ ಹಾಗೂ ಇತರೆ ಕಾರಣಗಳನ್ನು ನೀಡಿ ಕಾರುಗಳನ್ನು ಬಾಡಿಗೆಗೆ ಎಂದು ತೆಗೆದುಕೊಂಡು ಹೋಗುತ್ತಿದ್ದ. ಈ ವೇಳೆ ಮಾಲೀಕರಿಂದ ಕಾರುಗಳ ವಿಮೆ, ಆರ್‌ಸಿ ಕಾರ್ಡ್‌, ಬ್ಯಾಂಕ್‌ ಎನ್‌ಒಸಿ ಸೇರಿ ಎಲ್ಲ ಅಸಲಿ ದಾಖಲೆಗಳನ್ನು ಪಡೆದುಕೊಳ್ಳುತ್ತಿದ್ದ. ಬಳಿಕ ತನ್ನ ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌, ಚಾಲನಾ ಪರವಾನಿಗೆ ನಕಲು ಪ್ರತಿ ನೀಡಿ ಕಾರು ಕೊಂಡೊಯ್ಯುತ್ತಿದ್ದ.

ಅಲ್ಲದೆ, ಪ್ರತಿ ನಿತ್ಯ ಬಾಡಿಗೆ ಎಂದು 2 ಸಾವಿರ ರೂ. ಕೊಡುವುದಾಗಿ ನಂಬಿಸಿ, ಮುಂಗಡವಾಗಿ ಹತ್ತು ದಿನಗಳ 20 ಸಾವಿರ ರೂ. ಬಾಡಿಗೆ ಕೊಡುತ್ತಿದ್ದ. ಹತ್ತು ದಿನಗಳ ಬಳಿಕ 5 ಅಥವಾ ಹತ್ತು ಸಾವಿರ ಕೊಟ್ಟು ಇನ್ನಷ್ಟು ದಿನ ಬಾಡಿಗೆಗೆ ಬೇಕೆಂದು ಮಾಲೀಕರನ್ನು ನಂಬಿಸುತ್ತಿದ್ದ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.

Advertisement

ನಕಲಿ ದಾಖಲೆಗಳ ಸೃಷ್ಟಿ: ಕಾರು ಮಾಲೀಕರಿಂದ ಪಡೆದ ಎಲ್ಲ ದಾಖಲೆಗಳನ್ನು ನಕಲು ಮಾಡುತ್ತಿದ್ದು, ತನ್ನ ಆಧಾರ್‌ ನಂಬರ್‌ಗೆ ಕಾರು ಮಾಲೀಕರ ಫೋಟೋ ಅಂಟಿಸುತ್ತಿದ್ದ. ಆರ್‌ .ಸಿ.ಕಾರ್ಡ್‌, ಬ್ಯಾಂಕ್‌ ಎನ್‌ಒಸಿಗೂ ತನ್ನ ಹೆಸರು ಸೇರಿಸುತ್ತಿದ್ದ. ಬಳಿಕ ಫೈನಾನ್ಸಿಯರ್‌ಗಳ ಬಳಿ ತುರ್ತು ಹಣದ ಅಗತ್ಯವಿದೆ ಎಂದು ಹಣ ಪಡೆಯುತ್ತಿದ್ದ. ಕೆಲವೊಮ್ಮೆ ಕಾರು ಮಾಲೀಕರ ಅಸಲಿ ದಾಖಲೆಗಳನ್ನೇ ತೋರಿಸಿ ಅಡಮಾನ ಇಡುತ್ತಿದ್ದ. ಕಳೆದ ಮೇ 23ರಂದು ಜಯನಗರ ನಿವಾಸಿ ದಿಲೀಪ್‌ ಎಂಬವರಿಗೆ ಸ್ನೇಹಿತರ ಮೂಲಕ ಪರಿಚಯವಾದ ವೇದಾಂತ್‌, ಎರ್ಟಿಗಾ ಕಾರು ತಂದು, ಸ್ನೇಹಿತ ಶಶಿಕುಮಾರ್‌ ಎಂಬಾತನ ತಾಯಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ತುರ್ತು ಹಣ ಬೇಕೆಂದು 7 ಲಕ್ಷ ರೂ. ಪಡೆದುಕೊಂಡಿದ್ದ. ಜೂ. 12ರಂದು ಮತ್ತೂಮ್ಮೆ ಬಂದು ಎಕ್ಸ್‌ಯುವಿ 500 ಕಾರು ಮಾಲೀಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಣದ ಅಗತ್ಯವಿದೆ ಎಂದು ಹೇಳಿ, 3 ಲಕ್ಷ ರೂ. ಪಡೆದುಕೊಂಡು ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.

ಕಾರು ಕೊಂಡೊಯ್ದ ಮಾಲೀಕ!: ದಿಲೀಪ್‌ ಎನ್ನುವವರು ಮನೆ ಬಳಿ ನಿಲ್ಲಿಸಿಕೊಂಡಿದ್ದ ಎಕ್ಸ್‌ಯುವಿ ಕಾರನ್ನು ಅಸಲಿ ಮಾಲೀಕ ಜಿಪಿಎಸ್‌ ಆಧಾರದ ಮೇಲೆ ಪತ್ತೆ ಹಚ್ಚಿ, ಮತ್ತೂಂದು ಕೀ ಬಳಸಿ ಕೊಂಡೊಯ್ದಿದ್ದರು. ಈ ವಿಚಾರ ತಿಳಿದ ದಿಲೀಪ್‌, ಕಾರು ಮಾಲೀಕರ ಬಳಿ ಪ್ರಶ್ನಿಸಿದಾಗ, ತನ್ನ ಕಾರನ್ನು ಝೂಮ್‌ ಕಾರಿನವರಿಗೆ ಒಪ್ಪಂದ ಮಾಡಿಕೊಂಡಿದ್ದೇನೆ. ಯಾರಿಗೂ ಮಾರಾಟ ಮಾಡಿಲ್ಲ. ದಾಖಲೆಗಳಿಗೆ ಸಹಿಯೂ ಮಾಡಿಲ್ಲ ಎಂದಿದ್ದರು. ಬಳಿಕ ಝೂಮ್‌ ಕಾರಿನವರಿಗೆ ಪ್ರಶ್ನಿಸಿದಾಗ ವೇದಾಂತ್‌ ಎಂಬಾತ ಕಾರನ್ನು ಬಾಡಿಗೆಗೆ ಪಡೆದುಕೊಂಡು ಹೋಗಿದ್ದ ಎಂಬುದು ಗೊತ್ತಾಗಿದೆ. ಆಗ ಆರೋಪಿ ತಮಗೆ ವಂಚಿಸಿದ್ದಾನೆ ಎಂಬುದು ಗೊತ್ತಾಗಿದೆ, ದಿಲೀಪ್‌ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next