ಬಂಟ್ವಾಳ: ಕಾರೊಂದು ಡಿವೈಡರ್ ಗೆ ಢಿಕ್ಕಿ ಹೊಡೆದು ಪಲ್ಟಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಎ.7 ರ ಶುಕ್ರವಾರ ರಾತ್ರಿ 11.30 ಗಂಟೆಯ ವೇಳೆ ರಾಷ್ಟ್ರೀಯ ಹೆದ್ದಾರಿ ಮಂಗಳೂರು-ಬೆಂಗಳೂರು ರಸ್ತೆಯ ಬಿಸಿರೋಡಿನಲ್ಲಿ ನಡೆದಿದೆ.
ನಂದರಬೆಟ್ಟು ನಿವಾಸಿ ಸದಾಶಿವ ಆಚಾರ್ಯ (77) ಮೃತಪಟ್ಟ ವ್ಯಕ್ತಿ.
ಸದಾಶಿವ ಅವರ ಮೊಮ್ಮಗ ಚಾಲಕ ಅಕಾಶ್, ಅಳಿಯ ಸುರೇಶ್ ಆಚಾರ್ಯ, ಮಗ ಗಣೇಶ್ ಆಚಾರ್ಯ ಅವರು ಅಲ್ಪಸ್ವಲ್ಪ ಗಾಯಗಳಿಂದ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.
ಪುತ್ತೂರಿನಿಂದ ಎರ್ಟಿಗಾ ಕಾರಿನಲ್ಲಿ ದೇವರ ಕಾರ್ಯದಲ್ಲಿ ಭಾಗಿಯಾಗಿ ವಾಪಾಸು ಮನೆಗೆ ಬರುವ ವೇಳೆ ಬಿಸಿರೋಡಿನ ಅಜ್ಜಿಬೆಟ್ಟು ಕ್ರಾಸ್ ಸಮೀಪದಲ್ಲಿ ಈ ಅವಘಡ ಸಂಭವಿಸಿದೆ.
ಚಾಲಕನ ಅಜಾಗರೂಕತೆಯಿಂದ ಡಿವೈಡರ್ ಗೆ ಗುದ್ದಿದ ಕಾರು ಆ ಬಳಿಕ ಪಲ್ಟಿಯಾಗಿದೆ. ಕಾರಿನಲ್ಲಿ ಚಾಲಕ ಸೇರಿ ಒಂದೇ ಮನೆಯ ನಾಲ್ವಾರು ಪ್ರಯಾಣಿಸುತ್ತಿದ್ದರು.
ಪುತ್ತೂರು ಸಂಬಂಧಿಕರ ಮನೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಮನೆಗೆ ಇನ್ನೇನು ಕೇವಲ 5 ನಿಮಿಷಗಳ ಕಾಲದಲ್ಲಿ ಮುಟ್ಟುವ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಂಭೀರವಾಗಿ ತಲೆಗೆ ಗಾಯವಾಗಿದ್ದ ಸದಾಶಿವ ಅವರನ್ನು ಕೈಕಂಬದ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಮೃತಪಟ್ಟ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.
ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಎಸ್.ಐ.ಮೂರ್ತಿ ಭೇಟಿ ನೀಡಿದ್ದಾರೆ.