Advertisement

ಕಾರು ಢಿಕ್ಕಿ: ಕುಂದಾಪುರ ಕಾಲೇಜು ವಿದ್ಯಾರ್ಥಿ ಸಾವು

11:33 AM Jan 17, 2018 | Team Udayavani |

ಕುಂದಾಪುರ: ಶಿವಮೊಗ್ಗ- ಕುಂದಾಪುರ ರಾಜ್ಯ ಹೆದ್ದಾರಿಯ ಬಸ್ರೂರು ರಸ್ತೆಯ ಕಾರಂತರ ಮನೆಯ ಎದುರು ಅಪಘಾತಕ್ಕೀಡಾದ ಕಾರಿನಲ್ಲಿದ್ದವರ ನೆರವಿಗೆ ಬಂದ ಭಂಡಾರ್‌ಕಾರ್ ಕಾಲೇಜು ವಿದ್ಯಾರ್ಥಿಯೋರ್ವನಿಗೆ ಆಮ್ನಿ ಕಾರು ಢಿಕ್ಕಿಯಾದ ಪರಿಣಾಮ ಗಂಭೀರ ಗಾಯಗೊಂಡು, ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ. 

Advertisement

ಬೆಟ್ಟಾಗರ ನಿವಾಸಿ ಸಂಜೀವ ಪೂಜಾರಿ ಹಾಗೂ ರೇವತಿ ದಂಪತಿಯ ಪುತ್ರ ನಿತಿನ್‌ ಪೂಜಾರಿ (19) ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿ. ಕುಂದಾಪುರದ ಭಂಡಾ ರ್‌ಕಾರ್ ಕಾಲೇಜಿನಲ್ಲಿ ಅಂತಿಮ ಬಿಸಿಎ ವ್ಯಾಸಂಗ ಮಾಡುತ್ತಿದ್ದರು. 

ನೆರವಿಗೆ ಬಂದು ಅಪಘಾತಕ್ಕೀಡಾದ
ಬಸ್ರೂರು ರಸ್ತೆಯ ಕಾರಂತರ ಮನೆಯ ಸಮೀಪ ಖಾಸಗಿ ಬಸ್‌ ಹಾಗೂ ಸ್ಯಾಂಟ್ರೋ ಕಾರಿನ ನಡುವೆ ಅಪಘಾತ ಸಂಭವಿಸಿತ್ತು. ಅಪಘಾತದ ಶಬ್ದ ಕೇಳಿ ಮನೆಯಲ್ಲಿ ಊಟ ಮಾಡಿ ಮಲಗಿದ್ದ ನಿತಿನ್‌ ಹಾಗೂ ಪಕ್ಕದ ಮನೆಯ ಅನಿಲ್‌ ಅಲ್ಲಿಗೆ ಬಂದು, ನೆರವಿಗೆ ಮುಂದಾಗಿದ್ದರು. ಈ ವೇಳೆಯಲ್ಲಿ ಕುಂದಾಪುರದಿಂದ ಬಸ್ರೂರು ಕಡೆಗೆ ವೇಗವಾಗಿ ಬಂದ ಆಮ್ನಿ ನಿತಿನ್‌ ಹಾಗೂ ಅನಿಲ್‌ಗೆ ಢಿಕ್ಕಿಯಾಗಿದೆ.

ಢಿಕ್ಕಿಯ ತೀವ್ರತೆಗೆ ನಿತಿನ್‌ ರಸ್ತೆ ಬದಿಯ ಗದ್ದೆಗೆ ಬಿದ್ದ ಪರಿಣಾಮ ತಲೆ ಹಾಗೂ ಮುಖಕ್ಕೆ ಗಂಭೀರ ಗಾಯಗಳಾ ಗಿ ದ್ದವು. ಕೂಡಲೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ನಿತಿನ್‌ ಕೊನೆಯುಸಿರೆಳೆದರು. ಗಾಯಗೊಂಡ ಅನಿಲ್‌ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಲಿಕೆಯಲ್ಲಿ ಮುಂದೆ
ಕ್ರಿಯಾಶೀಲ ವಿದ್ಯಾರ್ಥಿಯಾಗಿದ್ದ ನಿತಿನ್‌ ಕಲಿಕೆಯಲ್ಲೂ ಮುಂದಿದ್ದರು ಕುಂದಾಪುರದ ಜ್ಯೂನಿಯರ್‌ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಭಂಡಾರ್ಕಾರ್ಸ್‌ ಕಾಲೇಜಿಗೆ ಪದವಿಗೆ ಸೇರಿದ್ದರು. ವಿದ್ಯಾರ್ಥಿಗಳ ಪ್ರತಿಭಟನೆ, ಹೋರಾಟಗಳಲ್ಲಿ ಮುಂಚೂಣಿ ಯಲ್ಲಿ ಕಾಣಿಸಿಕೊಳ್ಳುತ್ತಿದ್ದರು.

Advertisement

ಗೌರವಾರ್ಥ ಕಾಲೇಜಿಗೆ ರಜೆ
ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ತರಿಗೆ ಹಸ್ತಾಂತರಿಸಲಾಯಿತು. 
ಪ್ರಾಂಶುಪಾಲ ಡಾ| ಎನ್‌.ಪಿ. ನಾರಾಯಣ ಶೆಟ್ಟಿ, ಪ್ರಾಧ್ಯಾಪಕ ವೃಂದ, ಸಿಬಂದಿ ವರ್ಗ, ವಿದ್ಯಾರ್ಥಿ ಸಮೂಹ, ಅಪಾರ ಸಂಖ್ಯೆಯ ಸ್ನೇಹಿತರು ಅಂತಿಮ ದರ್ಶನ ಪಡೆದು, ಮನೆಯವರಿಗೆ ಸಾಂತ್ವನ ಹೇಳಿದರು.  ನಿತಿನ್‌ ಗೌರವಾರ್ಥ ಮಂಗಳವಾರ ಕಾಲೇಜಿನಲ್ಲಿ ಶ್ರದ್ಧಾಂಜಲಿ ಸಲ್ಲಿಸಿ, ರಜೆ ಸಾರಲಾಗಿತ್ತು. ಕಾರು ಚಾಲಕ ಪರಾರಿಯಾಗಿದ್ದು, ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಡ ಕುಟುಂಬಕ್ಕೆ ಸಾವಿನ ಆಘಾತ
ಸಂಜೀವ – ರೇವತಿ ದಂಪತಿಯ ಇಬ್ಬರು ಮಕ್ಕಳಲ್ಲಿ ಮಗಳು ಕಿರಿಯ ವಳಾ ಗಿದ್ದು ಅಂಗವೈಕಲ್ಯ ಹೊಂದಿದ್ದಾರೆ. ಮಗ ನಿತಿನ್‌ ಹಿರಿಯವ‌ನಾಗಿದ್ದರು.ತಂದೆಯೂ ಅಸೌಖ್ಯದಿಂದ ಬಳಲುತ್ತಿದ್ದು, ತಾಯಿ ಕುಂದಾಪುರದ ಹೆಂಚಿನ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ದುಡಿದು, ಈತನ ವಿದ್ಯಾಭ್ಯಾಸ ಹಾಗೂ ಮನೆಯ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದರು.ಮಗನನ್ನು ಚೆನ್ನಾಗಿ ಓದಿಸಿ, ಕುಟುಂಬದ ಹೊಣೆಗಾರಿಕೆ ವಹಿಸುವ ಕನಸು ಕಂಡಿದ್ದ ತಾಯಿಗೆ ಪುತ್ರನ ಅಕಾಲಿಕ ಸಾವು ಬರಸಿಡಿಲು ಬಡಿದಂತಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next