ಬೆಂಗಳೂರು: ಮೋಜು, ಐಷಾರಾಮ ಜೀವನ ಮೈಗೂಡಿಸಿಕೊಂಡು, ಹಣಕ್ಕಾಗಿ ಕಳ್ಳತನವನ್ನೇ ಕಸುಬು ಮಾಡಿಕೊಂಡಿದ್ದ ಮೂವರು ಕಳ್ಳರನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಮೂವರ ಪೈಕಿ ಇಬ್ಬರು ಲ್ಯಾಪ್‌ಟಾಪ್ ಕಳ್ಳರು. ಮತ್ತೂಬ್ಬ ಕಾರು ಕಳ್ಳ.
ಒಬ್ಬ ಆರೋಪಿಯಂತೂ ತಾನು ಕದ್ದ ಲ್ಯಾಪ್‌ಟಾಪ್ ಗಳ ಮಾರಾಟಕ್ಕಾಗಿ ಮಳಿಗೆಯನ್ನೇ ತೆರೆದಿದ್ದ! ಇನ್ನು ಕಾರು ಕದಿಯುತ್ತಿದ್ದ ಆರೋಪಿ ಬಹೆನ್‌ಲ್ಲಿ ಪೊಲೀಸ್ ಪೇದೆಯಾಗಿದ್ದ! ಈ ಮೂವರು ಕಳ್ಳರಿಂದ ಮಡಿವಾಳ ಪೊಲೀಸರು 1.24 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಅಂದಹಾಗೆ, ಪಂಜಾಬ್‌ನ ಜಲಂಧರ್ ಮೂಲದ ಸುಮೀರ್ ಶರ್ಮಾ (32) ಕಾರ್ಗಿಲ್‌ನ ಝಾಕಿರ್ ಹುಸೇನ್ (28) ಲ್ಯಾಪ್ ಟಾಪ್ ಕಳ್ಳರು. ನ್ಯೂ ಗುರಪ್ಪನಪಾಳ್ಯದ ಪಿಲ್ಲಾಕಲ್ ನಜೀರ್ (56) ಕಾರು ಚೋರ. ಈ ಮೂವರಿಂದ 164 ಲ್ಯಾಪ್ ಟಾಪ್, 5 ಕ್ಯಾಮೆರಾ, 4 ಆ್ಯಪಲ್ ಐಪಾಡ್, 6 ಟ್ಯಾಬ್, 1 ಕಾರು ಹಾಗೂ 14 ಲಕ್ಷ ರೂ.ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಇವರ ಬಂಧನದಿಂದ 119 ಪ್ರಕರಣಗಳು ಪತ್ತೆಯಾಗಿವೆ.
ಪ್ರಕರಣ-1: ಆರೋಪಿ ಸುಮೀರ್ ಶರ್ಮಾ 2009ರಲ್ಲಿ ಬೆಂಗಳೂರಿನ ಚಾಮರಾಜಪೇಟೆಯ ಐಐಎಂಡಿ ಕಾಲೇಜಿನಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸು ಪೂರ್ಣಗೊಳಿಸಿದ್ದ. ರಾಜೇಶ್ವರಿ ಎಂಬಾಕೆಯನ್ನು ಮದುವೆಯಾಗಿ ಇಟ್ಟಮಡು ಲೇಔಟ್‌ನಲ್ಲಿ ವಾಸವಿದ್ದ. 2015ರಲ್ಲಿ ರಾಜಸ್ಥಾನದ ಅರುಣ್ ಪಾಟಕ್ ಎಂಬುವವನ ಜತೆಗೂಡಿ ಲ್ಯಾಪ್‌ಟಾಪ್ ಕಳ್ಳತನ ಆರಂಭಿಸಿದ್ದ. ಮನೆಗಳಿಗೆ ನುಗ್ಗುವುದು,ಅಥವಾ ಕಿಟಕಿ ಪಕ್ಕ ಇಟ್ಟ ಲ್ಯಾಪ್‌ಟಾಪ್, ಫೋನ್, ಐಪಾಡ್‌ಗಳನ್ನು ಕದ್ದು ಆತ ಮಾರುತ್ತಿದ್ದ
ಪ್ರಕರಣ-2: 2015ರಲ್ಲಿ ಕಂಪ್ಯೂಟರ್ ತರಬೇತಿ ಕೋರ್ಸ್ ಕಲಿಯಲು ಬಂದಿದ್ದ ಜಮ್ಮು ಕಾಶ್ಮೀರದ ಕಾರ್ಗಿಲ್ ಮೂಲದ ಜಾಕೀರ್ ಹುಸೇನ್, ಬಳಿಕ ಸಂಸ್ಥೆಯೊಂದರಲ್ಲಿ ಉದ್ಯೋಗಕ್ಕೆ ಸೇರಿದ್ದ. ನಂತರ ಉದ್ಯೋಗಕ್ಕೆ ತಿಲಾಂಜಲಿ ಇಟ್ಟು, ಲ್ಯಾಪ್ ಟಾಪ್ ಕಳ್ಳತನ ಅರಂಭಿಸಿದ್ದ.
ಮಾಜಿ ಪೊಲೀಸ್ ಪೇದೆ: ದುಬಾರಿ ಕಾರುಗಳನ್ನು ಮಾತ್ರ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಪಿಲ್ಲಾಕಲ್ ನಜೀರ್ ಅಲಿಯಾಸ್ ಬಾಬು 1998 ರಿಂದ 2006ವರೆಗೆ ಬಹೆನ್ ದೇಶದಲ್ಲಿ ಪೊಲೀಸ್ ಪೇದೆಯಾಗಿ ಕೆಲಸ ಮಾಡಿದ್ದ. ಸೇವೆಯಲ್ಲಿದ್ದಾಗಲೇ ಕಳ್ಳತನ ಪ್ರಕರಣದ ಆರೋಪದಲ್ಲಿ ಅಮಾನತುಗೊಂಡು ಭಾರತಕ್ಕೆ ಬಂದಿದ್ದ. ನಕಲಿ ಕೀ ಬಳಸಿ ಐಷಾರಾಮಿ ಕಾರುಗಳನ್ನು ಮಾತ್ರಕಳವು ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರುತ್ತಿದ್ದ.