Advertisement

ರಾತ್ರಿಯಿಡಿ ಶಬ್ದ ಮಾಲಿನ್ಯ ಮಾಡುತ್ತಿದ್ದ ಇಬ್ಬರ ಸೆರೆ

12:40 AM Aug 26, 2019 | Lakshmi GovindaRaj |

ಬೆಂಗಳೂರು: ಕಾನೂನು ಬಾಹಿರವಾಗಿ ಮುಂಜಾನೆವರೆಗೂ ಧ್ವನಿವರ್ಧಕದ ಮೂಲಕ (ಡಿಜೆ) ಜೋರಾಗಿ ಸಂಗೀತ ಹಾಕಿ ಗ್ರಾಹಕರಿಂದ ನೃತ್ಯ ಮಾಡಿಸುತ್ತಿದ್ದ ಅಶೋಕ ನಗರದ “ಬೈ ಚಾನ್ಸ್‌’ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಮೇಲೆ ದಾಳಿ ನಡೆಸಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ರಾಜಾರಾಜೇಶ್ವರಿ ನಗರದ ಐಡಿಯಲ್‌ ಹೋಮ್ಸ್‌ ನಿವಾಸಿ ಕೆ.ಆರ್‌.ರಾಜಣ್ಣ (58) ಮತ್ತು ಲಿಂಗಾರಾಜುಪುರದ ಜೇಮ್ಸ್‌ ಜಾನ್‌ (44) ಬಂಧಿತರು. ಆರೋಪಿಗಳಿಂದ ಮ್ಯೂಸಿಕ್‌ ಪ್ಲೆಯರ್‌ ಸೇರಿ ಇತರ ಸಂಗೀತ, ಧ್ವನಿವರ್ಧಕ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಅಶೋಕನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳು ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ನಡೆಸಲು ಪರವಾನಗಿ ಪಡೆದು, ಅಕ್ರಮವಾಗಿ ಡಿ.ಜೆ. ನೈಟ್ಸ್‌ ವ್ಯವಸ್ಥೆ ಮೂಲಕ ಮ್ಯೂಸಿಕ್‌ ಹಾಕಿ ಗ್ರಾಹಕರಿಂದಲೇ ನೃತ್ಯ ಮಾಡಿಸುತ್ತಿದ್ದರು. ಈ ಮೂಲಕ ಶಬ್ದ ಮಾಲಿನ್ಯ ಉಂಟು ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದರು. ಈ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ಕ್ಯಾಮರೂನ್‌ ಮೂಲದವನ ಸೆರೆ: ಮತ್ತೊಂದು ಪ್ರಕರಣದಲ್ಲಿ ಮಹಾಲಕ್ಷ್ಮೀ ಲೇಔಟ್‌ ಠಾಣೆ ವ್ಯಾಪ್ತಿಯಲ್ಲಿರುವ ಆರ್‌.ಜಿ.ರಾಯಲ್‌ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಮೇಲೆ ಅಕ್ರಮವಾಗಿ ಅವಧಿ ಮೀರಿ ಮದ್ಯ ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಜೆ. ನಿರ್ವಾಹಕನನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಆತನಿಂದ ಸೌಂಡ್‌ ಸಿಸ್ಟಂ, ಮ್ಯೂಸಿಕ್‌ ಕಂಟ್ರೋಲರ್‌, ಸ್ವೆ„ಪಿಂಗ್‌ ಮಿಷನ್‌, ಒಂದೂವರೆ ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ.

ಕ್ಯಾಮರೂನ್‌ ಮೂಲದ ಥಾಂಬೆ ಡ್ಯಾನಿಯಲ್‌ ಅಥೆಮ್‌ (30) ಬಂಧಿತ.ಆರೋಪಿ ಬಾರ್‌ನಲ್ಲಿ ಡಿಜೆ ನಿರ್ವಾಹಕನಾಗಿದ್ದಾನೆ. ದಾಳಿ ಸಂದರ್ಭದಲ್ಲಿ ಆರ್‌.ಜಿ. ರಾಯಲ್‌ ಬಾರ್‌ ಮಾಲೀಕ ರವೀಶ್‌ಗೌಡ, ವ್ಯವಸ್ಥಾಪಕ ವೆಂಕಟೇಶ್‌, ಸೆಬಾಸ್ಟಿಯನ್‌, ಸಲೀಂ ಎಂಬವರು ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ಮುಂದುವರಿದಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

Advertisement

50 ಹೆಚ್ಚು ವಿದೇಶಿಯರು: ಬಾತ್ಮೀದಾರರ ಮಾಹಿತಿ ಪ್ರಕಾರ ಬಾರ್‌ನಲ್ಲಿ 50 ಹೆಚ್ಚು ವಿದೇಶಿಯರು ಸೇರಿ ಸುಮಾರು 150 ಮಂದಿ ರೇವ್‌ ಪಾರ್ಟಿ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಈ ಸಂಬಂಧ ದಾಳಿ ನಡೆಸಲಾಗಿತ್ತು. ಅಲ್ಲಿ ಆ ರೀತಿಯ ಯಾವುದೇ ಸಾಕ್ಷ್ಯ ಲಭ್ಯವಾಗಲಿಲ್ಲ. ನಿಯಮದ ಪ್ರಕಾರ ತಡರಾತ್ರಿ ಒಂದು ಗಂಟೆವರೆಗೆ ಮಾತ್ರ ಬಾರ್‌ ನಡೆಸಲು ಅವಕಾಶವಿದೆ.

ಆದರೆ, ಈ ಬಾರ್‌ ಮಾಲೀಕರು ಮುಂಜಾನೆ ಮೂರು ಗಂಟೆವರೆಗೆ ಮಾದ್ಯ ಮಾರಾಟ ಮಾಡುತ್ತಿದ್ದರು. ಜತೆಗೆ ಜೋರಾಗಿ ಮ್ಯೂಸಿಕ್‌ ಹಾಕಿ ನೃತ್ಯ ಮಾಡಿಸುತ್ತಿದ್ದರು. ಈ ಹೋಟೆಲ್‌ನಲ್ಲಿ ಆಫ್ರಿಕಾ, ಉಗಾಂಡಾ ಸೇರಿ 50ಕ್ಕೂ ಹೆಚ್ಚು ವಿದೇಶಿ ಪ್ರಜೆಗಳಿದ್ದು, ಎಲ್ಲರನ್ನು ವಶಕ್ಕೆ ಪಡೆದು ಅವರ ಪಾಸ್‌ಪೋರ್ಟ್‌ ಮತ್ತು ವೀಸಾಗಳನ್ನು ಪರಿಶೀಲಿಸಲಾಗಿದೆ. ಈವೇಳೆ ಉಲ್ಲಂಘನೆ ಪ್ರಕರಣಗಳು ಬೆಳಕಿಗೆ ಬಂದಿಲ್ಲ ಎಂದು ಸಿಸಿಬಿ ಪೊಲೀಸರು ಹೇಳಿದರು.

ಇತ್ತೀಚೆಗೆ ನಗರದ ಪಬ್‌, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳು ಡಿ.ಜೆ.ಬಳಸಿ ಶಬ್ದ ಮಾಲಿನ್ಯ ಉಂಟು ಮಾಡುತ್ತ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ ಎಂಬ ಅರ್ಜಿಯೊಂದರ ವಿಚಾರಣೆ ನಡೆಸಿದ ಹೈಕೋರ್ಟ್‌, ನೇರವಾಗಿ ನಗರ ಪೊಲೀಸ್‌ ಆಯುಕ್ತರಿಗೆ ಈ ಕುರಿತು ಕ್ರಮಕೈಗೊಳ್ಳುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಎರಡೂವರೆ ತಿಂಗಳಿಂದ ಸಿಸಿಬಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ, ಕಾನೂನು ಬಾಹಿರವಾಗಿ ಡಿ.ಜೆ.ಬಳಿಸಿ ಶಬ್ಧ ಮಾಲಿನ್ಯ ಉಂಟು ಮಾಡುವ ಬಾರ್‌, ಹೋಟೆಲ್‌ಗ‌ಳ ಮೇಲೆ ದಾಳಿ ನಡೆಸಿ ಕ್ರಮಕೈಗೊಳ್ಳುತ್ತಿದ್ದಾರೆ.

ಜೂಜಾಟ 22 ಮಂದಿ ಬಂಧನ: ಜೆ.ಬಿ.ನಗರ ಠಾಣೆ ವ್ಯಾಪ್ತಿಯ ನ್ಯೂ ಗೋಲ್ಡನ್‌ ಲುಕ್‌ ರಿಕ್ರಿಯೇಷನ್‌ ಅಸೋಸಿಯೇಷನ್‌ ಕ್ಲಬ್‌ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಜೂಜಾಟದಲ್ಲಿ ತೊಡಗಿದ್ದ 22 ಮಂದಿಯನ್ನು ಬಂಧಿಸಿದ್ದು, ಅವರಿಂದ 1,42 ಲಕ್ಷ ರೂ. ಪಶಕ್ಕೆ ಪಡೆದುಕೊಂಡಿದ್ದಾರೆ. ಕ್ಲಬ್‌ನ ಸದಸ್ಯರಲ್ಲದ ವ್ಯಕ್ತಿಗಳು ಜೂಜಾಟದಲ್ಲಿ ತೊಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next