ಬೆಂಗಳೂರು: ಬಿಹಾರ ಮೂಲದ ಮಹಿಳಾ ಟೆಕ್ಕಿಯೊಬ್ಬರ ಮೇಲೆ ಪ್ಲಾಸ್ಟಿಕ್ ಹಲ್ಲಿ ಎಸೆದು, ಅದನ್ನು ತೆಗೆಯುವ ನೆಪದಲ್ಲಿ ಅಂಗಾಂಗ ಮುಟ್ಟಿದ್ದ ಆರೋಪಿಯನ್ನು ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೆಚ್‌ಎಎಲ್‌ನ ಲಾಲ್ ಬಹದ್ದೂರ್ ಶಾಸ್ತ್ರೀನಗರದ ನಿವಾಸಿ ಮುರುಳಿ(35) ಬಂಧಿತ ಆರೋಪಿ.
ಸಿಎಂಹೆಚ್ ರಸ್ತೆಯ ಪ್ರತಿಷ್ಟಿತ ಕಂಪೆನಿಯೊಂದರಲ್ಲಿ ಟೆಕ್ಕಿಯಾಗಿರುವ ಸಂತ್ರಸ್ಥ ಯುವತಿ ಜೂನ್ 14ರಂದು ಬೆಳಿಗ್ಗೆ 9-30ರ ಸುಮಾರಿಗೆ, ನಾಲ್ಕನೇ ಮಹಡಿಯಲ್ಲಿರುವ ಕಚೇರಿಗೆ ತೆರಳಲು ಲಿಫ್ಟ್ ಹತ್ತಿರ ತೆರಳುತ್ತಿದ್ದರು. ಈ ವೇಳೆ ಹಿಂಬಾಲಿಸಿಕೊಂಡು ಬಂದಿದ್ದ ಆರೋಪಿ, ಯುವತಿಯ ಗಮನಕ್ಕೆ ಬಾರದ ಹಾಗೇ ಪ್ಲಾಸ್ಟಿಕ್ ಹಲ್ಲಿಯನ್ನು ಅವರ ಮೇಲೆ ಎಸೆದಿದ್ದಾನೆ ಇದರಿಂದ ವಿಚಲಿತಗೊಂಡ ಯುವತಿಗೆ ಹಲ್ಲಿ ತೆಗೆಯುವ ನೆಪದಲ್ಲಿ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದಾದ ಬಳಿಕ ಲಿಫ್ಟ್ ಬಾಗಿಲು ತೆರೆದ ತಕ್ಷಣ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಕೆಲಹೊತ್ತಿನ ಬಳಿಕ ತನ್ನ ಮೇಲೆ ಬಿದ್ದಿದ್ದು ಪ್ಲಾಸ್ಟಿಕ್ ಹಲ್ಲಿ ಎಂದು ಯುವತಿಗೆ ಮನದಟ್ಟಾಗಿದೆ. ಕೂಡಲೇ ತನ್ನ ಸ್ನೇಹಿತನ ಜೊತೆಗೂಡಿ ಆರೋಪಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು, ಘಟನೆ ನಡೆದ ಕಚೇರಿಯ ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲನೆ ನಡೆಸಿದಾಗ ಆರೋಪಿಯ ಚಲನವಲನಗಳು ಪತ್ತೆಯಾಗಿವೆ. ಇದನ್ನು ಆಧರಿಸಿ ಶನಿವಾರ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಹೆಚ್‌ಎಎಲ್ ಮಾರ್ಕೆಟ್‌ನಲ್ಲಿ ತರಾಕಾರಿ ವ್ಯಾಪಾರಿಯಾಗಿರುವ ಆರೋಪಿ ಮುನಿಸ್ವಾಮಿ ಶನಿವಾರ ತನ್ನ ಸಂಬಂಧಿಕರ ಜೊತೆ ಸಿಎಂಹೆಚ್ ರಸ್ತೆಗೆ ಬಂದಿದ್ದ. ಈ ವೇಳೆ ಬೀಟ್ ಡ್ನೂಟಿಯಲ್ಲಿದ್ದ ಪೊಲೀಸರನ್ನು ಕಂಡ ಕೂಡಲೇ ಅನುಮಾನಾಸ್ಪದವಾಗಿ ವರ್ತಿಸಲಾರಂಭಿಸಿದ್ದ. ಇದನ್ನು ಗಮನಿಸಿದ ಪೊಲೀಸರು ಹತ್ತಿರ ತೆರಳುತ್ತಿದ್ದಂತೆ ಪರಾರಿಯಾಗಲು ಯತ್ನಿಸಿದ್ದ. ಆತನನ್ನು ಬೆನ್ನಟ್ಟಿ ಬಂಧಿಸಿದ್ದಾರೆ.
ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಯುವತಿಯ ತಲೆಯ ಮೇಲೆ ಕುಳಿತಿದ್ದ ಜೇನುನೊಣ ಓಡಿಸಲು ಕೈ ಹಾಕಿದ್ದೇ ಎಂದು ಹೇಳಿಕೆ ನೀಡಿದ್ದಾನೆ. ಈ ಸಂಬಂಧ ವಿಚಾರಣೆ ಮುಂದುವರಿಸಲಾಗಿದ್ದು ತನಿಖೆ ಪೂರ್ಣಗೊಂಡ ಬಳಿಕ ಸತ್ಯಾಂಶ ಗೊತ್ತಾಗಲಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಮತ್ತೂಂದು ಪ್ರಕರಣದ ಬಗ್ಗೆ ಶಂಕೆ!: ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿ ಕೆಲದಿನಗಳ ಹಿಂದೆ ಹೆಚ್‌ಎಎಲ್ ಠಾಣಾ ವ್ಯಾಪ್ತಿಯಲ್ಲೂ ಇದೇ ರೀತಿ ಯುವತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಹೋಗಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದ. ಆರೋಪಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದ ಸಾರ್ವಜನಿಕರು, ಆತನನ್ನು ಬಿಟ್ಟು ಕಳುಹಿಸಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ ಈ ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದರು.