ಬೆಂಗಳೂರು: ಹಳೇ ಹಾಗೂ ಉಪಯೋಗಿಸಿದ ಮೊಬೈಲ್(ಸೆಕೆಂಡ್ ಹ್ಯಾಂಡ್) ಸೇರಿ ವಿವಿಧ ಸೇವೆ ನೀಡುತ್ತಿರುವ “ಕ್ಯಾಶಿಫೈ’ ಸಂಸ್ಥೆಗೆ ಕ್ಯಾಶಿಫೈ ಆ್ಯಪ್ ಮೂಲಕವೇ 63 ಸಾವಿರ ರೂ. ವಂಚಿಸಿದ ಸಂಸ್ಥೆಯ ಮಾಜಿ ಉದ್ಯೋಗಿ ಸೇರಿ ಇಬ್ಬರು ಸೈಬರ್ ಕ್ರೈಂ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಭರತ್‌ನಗರ ನಿವಾಸಿ ಸೋನು ಶರ್ಮಾ (21) ಮತ್ತು ಆತನ ಸ್ನೇಹಿತ ಥಣಿಸಂದ್ರ ನಿವಾಸಿ ಸಮೀರ್ ಅಹಮ್ಮದ್ (20) ಬಂಧಿತರು. ಆರೋಪಿ ಕೃತ್ಯಕ್ಕೆ ಬಳಕೆ ಮಾಡಿದ್ದ ಎರಡು ಮೊಬೈಲ್ ಹಾಗೂ ಕ್ರೆಡಿಟ್ ಕಾರ್ಡ್ ಸೇರಿ ಕೆಲ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಆರೋಪಿ ಸೋನು ಶರ್ಮಾ, ಏಪ್ರಿಲ್‌ನಿಂದ ಕಂಪನಿಯ ಕಿಯಾಸ್ಕ್ ಕಾರ್ಯಾಚರಣೆ ವಿಭಾಗದಲ್ಲಿ ಬ್ರಾಂಡ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಜುಲೈನಲ್ಲಿ ವೈಯಕ್ತಿಕ ಕಾರಣಕ್ಕೆ ಕೆಲಸ ಬಿಟ್ಟಿದ್ದು, ಸಂಸ್ಥೆಯ ವಹಿವಾಟಿನ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದ. ಕೆಲಸ ಬಿಡುವ ಸಂದರ್ಭದಲ್ಲಿ ತನ್ನ ಸಹೋದ್ಯೋಗಿ ರಾಕೇಶ್ ಗಮನಕ್ಕೆ ಬಾರದೆ ಅವರ ಲಾಗಿನ್ ಐಡಿ (ಸಂಸ್ಥೆ ಕೊಡುವ) ಪಡೆದುಕೊಂಡಿದ್ದ. ಅಲ್ಲದೆ, ರಾಕೇಶ್ ಮೊಬೈಲ್‌ನಲ್ಲಿ “ಮೊಬೈಲ್ ಟ್ರ್ಯಾಕರ್’ ಎಂಬ ಆ್ಯಪ್ ಇನ್‌ಸ್ಟಾಲ್ ಮಾಡಿದ್ದ. ಬಳಿಕ ಅದಕ್ಕೆ ಪ್ರತ್ಯೇಕ ಇ-ಮೇಲ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ತಾನೇ ಸೃಷ್ಟಿಸಿದ್ದ ಎಂದು ಪೊಲೀಸರು ಹೇಳಿದರು.
ಉಪಾಧ್ಯಕ್ಷರ ಖಾತೆಯಿಂದಲೇ ಹಣ ವರ್ಗಾವಣೆ: ಕೆಲಸ ತೊರೆದ ಕೆಲ ದಿನಗಳ ಬಳಿಕ ಆರೋಪಿ, ಕ್ಯಾಶಿಫೈ ಆ್ಯಪ್ ಡೌನ್‌ಲೋಡ್ ಮಾಡಿ, ರಾಕೇಶ್‌ರ ಯುಸರ್ ಐಡಿ ಮೂಲಕ ಆ್ಯಪ್‌ಗೆ ಲಾಗಿನ್ ಆಗಿದ್ದಾನೆ. ಬಳಿಕ ರಾಕೇಶ್‌ರೇ ಕಂಪನಿ ಪರವಾಗಿ “ಆ್ಯಪಲ್ ಐ ಫೋನ್-6′ ಖರೀದಿಸಿದಂತೆ ಆರೋಪಿ ವ್ಯವಹಾರ ನಡೆಸಿದ್ದಾನೆ. ಬಳಿಕ ಹತ್ತಾರು ಮಂದಿ ಗ್ರಾಹಕರ ಜತೆ ಇದೇ ರೀತಿ ವ್ಯವಹರಿಸಿದ್ದಾನೆ. ಪ್ರತಿ ವ್ಯವಹಾರಕ್ಕೆ ರಾಕೇಶ್ ಮೊಬೈಲ್‌ಗೆ ಹೋಗುತ್ತಿದ್ದ ಓಟಿಪಿಯನ್ನು, ರಾಕೇಶ್ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿದ್ದ ಮೊಬೈಲ್ ಟ್ರ್ಯಾಕರ್ ಮೂಲಕ ಪಡೆದುಕೊಳ್ಳುತ್ತಿದ್ದ. ಈ ಮಧ್ಯೆ ಕಂಪನಿಯ ಉಪಾಧ್ಯಕ್ಷರ ಖಾತೆಯಿಂದ 63,800 ರೂ.ಗಳನ್ನು ತನ್ನ ಸ್ನೇಹಿತ ಸಮೀರ್ ಅಹಮ್ಮದ್ ಖಾತೆಗೆ ವರ್ಗಾವಣೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದರು.
ಸಾಲ ತೀರಿಸಲು ಕೃತ್ಯ: ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸಮೀರ್ ಅಹ್ಮಮದ್ ಬಳಿ ಆರೋಪಿ ಸೋನು ಶರ್ಮಾ 25 ಸಾವಿರ ರೂ. ಸಾಲ ಪಡೆದುಕೊಂಡಿದ್ದ. ಆದರೆ, ನಿಗದಿತ ಸಮಯಕ್ಕೆ ಹಿಂದಿರುಗಿಸಿರಲಿಲ್ಲ. ಹೀಗಾಗಿ ಸಾಲ ವಾಪಸ್‌ಗೆ ಒತ್ತಾಯಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಆರೋಪಿ ಕೃತ್ಯ ಎಸಗಿದ್ದು, ಸ್ನೇಹಿತನ 25 ಸಾವಿರ ರೂ. ಸಾಲ ತೀರಿಸಿ, ಇನ್ನುಳಿದ ಹಣದೊಂದಿಗೆ ಪರಾರಿಯಾಗಿದ್ದ. ಕೆಲ ದಿನಗಳ ಬಳಿಕ ಕಂಪನಿಯಲ್ಲಿ ಲೆಕ್ಕಚಾರ ನಡೆಸುವಾಗ 63 ಸಾವಿರ ರೂ. ವ್ಯತ್ಯಾಸವಾಗಿರುವುದು ಕಂಡು ಬಂದಿತ್ತು. ನಂತರ ಪರಿಶೀಲಿಸಿದಾಗ ರಾಕೇಶ್ ಲಾಗಿನ್ ಮೂಲಕ ವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ಸಂಸ್ಥೆಯಲ್ಲಿ ಆಂತರಿಕ ತನಿಖೆ ನಡೆಸಿದಾಗ ಆರೋಪಿಯ ಕೃತ್ಯ ಬಯಲಾಗಿತ್ತು. ಈ ಸಂಬಂಧ ಸಂಸ್ಥೆಯ ಅಧಿಕಾರಿಗಳು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು ಎಂದು ಪೊಲೀಸರು ಹೇಳಿದರು.
ಏನಿದು ಕ್ಯಾಶಿಫೈ ಆ್ಯಪ್?: ಹಳೇ ಮತ್ತು ಉಪಯೋಗಿಸಿದ (ಸೆಕೆಂಡ್ ಹ್ಯಾಂಡ್) ಮೊಬೈಲ್ ಮಾರಾಟ ಮಾಡುವವರು “ಕ್ಯಾಶಿಫೈ’ ಎಂಬ ಆ್ಯಪ್‌ಅನ್ನು ಇನ್‌ಸ್ಟಾಲ್ ಮಾಡಿಕೊಂಡು ನೋಂದಣಿ ಮಾಡಿಕೊಳ್ಳುತ್ತಾರೆ. ಬಳಿಕ ಆ್ಯಪ್‌ನಲ್ಲಿ ಮಾರಾಟದ ಮೊಬೈಲ್ ಅಪ್‌ಲೋಡ್ ಮಾಡುತ್ತಾರೆ. ಸಂಸ್ಥೆಯ ಸಿಬ್ಬಂದಿ ಮೊಬೈಲ್‌ನ ಸ್ಥಿತಿಗತಿ ಪರಿಶೀಲಿಸಿ ದರ ನಿಗದಿ ಮಾಡುವ, ಅನಂತರ ಗ್ರಾಹಕರು ನಿಗದಿಪಡಿಸಿದ ದರಕ್ಕೆ ಮೊಬೈಲ್ ಮಾರಾಟ ಮಾಡಲು ಇಚ್ಚಿಸಿದಲ್ಲಿ ಮೊಬೈಲ್‌ನ್ನು ಪಡೆದು ನಿಗದಿಪಡಿಸಿದ ದರವನ್ನು ನಗದು ಅಥವಾ ಬ್ಯಾಂಕ್ ಮೂಲಕ ಹಣವನ್ನು ಸಂಸ್ಥೆಯ ಸಿಬ್ಬಂದಿಯೇ ವರ್ಗಾವಣೆ ಮಾಡುತ್ತಾರೆ. ಅದಕ್ಕಾಗಿ ಸಂಸ್ಥೆಯ ಪ್ರತಿಯೊಬ್ಬ ಸಿಬ್ಬಂದಿಗೂ ಪ್ರತ್ಯೇಕ ಲಾಗಿನ್ ಐಡಿ ನೀಡಲಾಗುತ್ತದೆ. ಸದ್ಯ ಆರೋಪಿ ಈ ಲಾಗಿನ್ ಐಡಿ ಮೂಲಕವೇ ಕೃತ್ಯ ಎಸಗಿದ್ದಾನೆ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.