ಕೋಲಾರ: ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಸೆರೆಸಿಕ್ಕ ಶಂಕಿತ ಉಗ್ರ ಮೆಹಬೂಬ್ ಪಾಷಾನ “ಕೋಲಾರ ನಂಟು’ ಬಯಲಾಗಿದೆ. ಈತನಿಗೆ ಆಶ್ರಯ ನೀಡಿದ್ದಾರೆ ಎನ್ನಲಾಗಿರುವ ಇಬ್ಬರನ್ನು ಚೆನ್ನೈಯ “ಕ್ಯು’ ಬ್ರಾಂಚ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೋಲಾರದ ಪ್ರಶಾಂತ್ ನಗರದ ಮೊಹಮ್ಮದ್ ಜಹೀದ್ (24) ಮತ್ತು ಬೀಡಿ ಕಾಲನಿ ನಿವಾಸಿ ಸಲೀಂ ಖಾನ್ (42) ಬಂಧಿತರು.
ಇವರಿಬ್ಬರನ್ನೂ ಜ.3ರಂದೇ ಬೆಂಗಳೂರು ಸಿಸಿಬಿ ಪೊಲೀಸರ ನೆರವಿನಿಂದ ಚೆನ್ನೈಯ ಕ್ಯು ಬ್ರಾಂಚ್‌ನ ಪೊಲೀಸರು ವಶಕ್ಕೆ ಪಡೆದಿದ್ದರು. ಈ ಮಾಹಿತಿಯನ್ನು ರಹಸ್ಯ ವಾಗಿ ಇಡಲಾಗಿದ್ದು, ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಅನಂತರ ವಿಚಾರ ಬಯಲಾಗಿದೆ. ರವಿವಾರ ಇವರನ್ನು ಕೋಲಾರಕ್ಕೆ ಕರೆತಂದು, ಮೆಹಬೂಬ್ ಪಾಷಾನಿಗೆ ಆಶ್ರಯ ನೀಡಿದ್ದ ಮನೆಯ ತಪಾಸಣೆ ನಡೆಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ತಪಾಸಣೆ ವೇಳೆ ಮೆಹಬೂಬ್‌ಗ ಸೇರಿದ ಮಹತ್ವದ ಲ್ಯಾಪ್‌ಟಾಪ್ ಸೇರಿ ಕೆಲವು ದಾಖಲೆ ಪತ್ತೆಯಾಗಿವೆ ಎನ್ನಲಾಗಿದೆ.
ಶಂಕಿತ ಉಗ್ರ ಮೆಹಬೂಬ್ ಪಾಷಾ ಕೆಲವು ದಿನಗಳ ಹಿಂದೆ ಕೋಲಾರದಲ್ಲಿ ಆಶ್ರಯ ಪಡೆ ದಿದ್ದ ಎನ್ನಲಾಗಿದೆ. ಈತ ಖಾದ್ರಿಪುರ ಗ್ರಾಮದ ಹೊರವಲಯದ ಬೆಟ್ಟದ ತಪ್ಪಲಿ ನಲ್ಲಿದ್ದ ಪಾಳು ಬಿದ್ದ ಮನೆಯಲ್ಲಿ 5 ದಿನ ಇದ್ದ. ಅಲ್ಲದೆ, ಕೆಲವು ಸ್ಥಳೀಯ ಯುವಕ ರನ್ನು ಸೇರಿಸಿಕೊಂಡು ಸಭೆ ನಡೆಸುತ್ತಿದ್ದ ಎನ್ನಲಾಗಿದೆ.
ಸ್ಥಳೀಯ ಪೊಲೀಸರಿಗೂ ಮಾಹಿತಿ ಇಲ್ಲ
ಬಂಧನದ ಬಗ್ಗೆ ಸ್ಥಳೀಯ ಪೊಲೀಸರಿಗೂ ಮಾಹಿತಿ ಇರಲಿಲ್ಲ. ಶಂಕಿತ ಉಗ್ರ ಮೆಹಬೂಬ್‌ನೊಂದಿಗೆ ಈ ಇಬ್ಬರೂ ಬಂಧಿತರು ಸಂಪರ್ಕದಲ್ಲಿದ್ದರು. ಬೆಂಗಳೂರಿನಲ್ಲಿ ನಕಲಿ ದಾಖಲೆ ಸಿದ್ಧ ಮಾಡಿಕೊಂಡಿದ್ದ ಇವರು, ವಿದೇಶಕ್ಕೆ ಹಾರಲು ಸಿದ್ಧವಾಗಿದ್ದರು ಎನ್ನಲಾಗಿದೆ.